ಸಾರಾಂಶ
ದಾವಣಗೆರೆ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ ಠೇವಣಿ ಕಳೆದುಕೊಳ್ಳಲಿದ್ದು, 3-4 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ ಗೆಲುವು ಸಾಧಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ ಅಗರವಾಲ್ ಭವಿಷ್ಯ ನುಡಿದಿದ್ದಾರೆ.
ನಗರದ ಖಾಸಗಿ ಹೊಟೆಲ್‌ನಲ್ಲಿ ಬಂಡಾಯ ನಾಯಕರ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ ಕಾಂಗ್ರೆಸ್‌ನ ಡಿ.ಕೆ.ಸುರೇಶ ವಿರುದ್ಧ 3-4 ಲಕ್ಷ ಮತಗಳ ಅಂತರದಲ್ಲಿ ಗೆಲಲ್ಲಿದ್ದು, ರಾಜ್ಯದ 28 ಕ್ಷೇತ್ರದಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.ದಾವಣಗೆರೆ ಸೇರಿದಂತೆ ರಾಜ್ಯದ 28 ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲುತ್ತದೆ. ಇಡೀ ದೇಶದಲ್ಲಿ ಕಾಂಗ್ರೆಸ್ ಸಂಪೂರ್ಣ ನಾಶವಾಗಿದೆ ಎಂದರು.
ಯಾವುದೇ ಗ್ಯಾರಂಟಿಗಳ ಬಗ್ಗೆ ಹೇಳುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರೇ ನಮಗೆ ಗ್ಯಾರಂಟಿ. ದೇಶದಲ್ಲಿ ಬಿಜೆಪಿ ಪರವಾದ ಅಲೆ ಇದೆ. ಕಾಂಗ್ರೆಸ್ಸಿನವರಂತೆ ಭಾಷಣ ಮಾಡುತ್ತಾ ಸುತ್ತಾಡುತ್ತಿಲ್ಲ. ನಾವು ಈ ಚುನಾವಣೆ ಬಗ್ಗೆ ವಿಚಾರಿಸುವುದಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು100 ವರ್ಷ ಆಗುವ ಚುನಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ರಾಧಾಮೋಹನ ಅಗರವಾಲ್ ತಿಳಿಸಿದರು.ಬಿಜೆಪಿ ಬಂಡಾಯಕ್ಕೆ ಮದ್ದು:
ದಾವಣಗೆರೆ: ದಾವಣಗೆರೆ ಜಿಲ್ಲಾ ಬಿಜೆಪಿ ಬಂಡಾಯ ಶಮನಕ್ಕೆ ಪಕ್ಷದ ರಾಜ್ಯ ಉಸ್ತುವಾರಿ ರಾಧಾಮೋಹನ ಅಗರವಾಲ್ ನೇತೃತ್ವದಲ್ಲಿ ನಗರದ ಖಾಸಗಿ ಹೊಟೆಲ್‌ವೊಂದರಲ್ಲಿ ಶನಿವಾರ ಮೂರನೇ ಸಲ ರೆಬೆಲ್ ನಾಯಕರ ಸಭೆ ನಡೆಸಲಾಯಿತು.ಬಿಜೆಪಿ ಅಭ್ಯರ್ಥಿ ವಿರುದ್ಧ ಬಂಡಾಯ ಸಾರಿದ್ದ ಪ್ರಮುಖರ ಪೈಕಿ ಮಾಜಿ ಸಚಿವ ಜಿ.ಕರುಣಾಕರ ರೆಡ್ಡಿ ಸಭೆಗೆ ಗೈರಾಗಿದ್ದನ್ನು ಹೊರುತಪಡಿಸಿದರೆ, ಉಳಿದಂತೆ ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ಎಂ.ಪಿ.ರೇಣುಕಾಚಾರ್ಯ, ಮಾಡಾಳ ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ, ಬಿ.ಜಿ.ಅಜಯಕುಮಾರ ಭಾಗಿಯಾದರೆ, ಸಂಸದ ಜಿ.ಎಂ.ಸಿದ್ದೇಶ್ವರ, ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಇತರರು ಸಹ ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಅಗರವಾಲ್, ನಮ್ಮಲ್ಲಿ ಯಾವುದೇ ಭಿನ್ನಮತವೂ ಇಲ್ಲ. ಚುನಾವಣೆ ಸಿದ್ಧತೆ ಹಿನ್ನೆಲೆಯಲ್ಲಿ ಸಭೆ ಕರೆದಿದ್ದು, ಪಕ್ಷದ ಗೆಲುವಿನ ಬಗ್ಗೆ ಚರ್ಚೆ ನಡೆಸಿದ್ದೇವೆ. ಪ್ರತಿಯೊಬ್ಬರೂ ನಿರಂತರವಾಗಿ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರರ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದರು.ಯಾವುದೇ ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳನ್ನು ಬದಲಾವಣೆ ಮಾಡುವುದಕ್ಕೂ ಆಗುವುದಿಲ್ಲ. ನಮ್ಮಲ್ಲಿ ಯಾರೂ ಸಹ ಅಭ್ಯರ್ಥಿ ಬಗ್ಗೆ ವಿರೋಧ ಹೊಂದಿಲ್ಲ. ನಮ್ಮ ಮುಖಂಡರ ಪೈಕಿ ಯಾರೂ ಸಹ ಭಿನ್ನಾಭಿಪ್ರಾಯದ ಬಗ್ಗೆ ಮಾತನಾಡಿಲ್ಲ. ಪ್ರತಿಯೊಬ್ಬರೂ ಗಾಯತ್ರಿ ಸಿದ್ದೇಶ್ವರರ ಗೆಲುವಿನ ಬಗ್ಗೆ ಚರ್ಚಿಸಿದ್ದು, ಬಿಜೆಪಿ ಅಭ್ಯರ್ಥಿಯ ಪರ ಕೆಲಸ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.
ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಯುವ ಮುಖಂಡರಾದ ಮಾಡಾಳ ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ, ಬಿ.ಜಿ.ಅಜಯಕುಮಾರ, ಕಡ್ಲೇಬಾಳು ಧನಂಜಯ, ಜಿ.ಎಸ್.ಅನಿತಕುಮಾರ, ಪಿ.ಸಿ.ಶ್ರೀನಿವಾಸ ಭಟ್ ಇತರರು ಇದ್ದರು.