ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಅಲ್ಲಮ ಪ್ರಭು ದೇಶ ಕಾಲದ ಗಡಿ ಮೀರಿ ನಿಲ್ಲುತ್ತಾರೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕಿ ಡಾ. ಶೈಲಾ ಬಣ್ಣಿಸಿದರು.ಜಯಲಕ್ಷ್ಮೀಪುರಂನ ಎಸ್.ಬಿ.ಆರ್.ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜು, ಮೈಸೂರು ವಿವಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ, ಸಂಶೋಧನೆ, ಅಧ್ಯಯನ ಹಾಗೂ ವಿಸ್ತರಣಾ ಕೇಂದ್ರದ ಸಹಯೋಗದಲ್ಲಿ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಲ್ಲಮನ ವಚನಗಳ ಚಿಂತನೆ ವಿಷಯ ಕುರಿತು ಅವರು ಮಾತನಾಡಿದರು.
ಅಲ್ಲಮಪ್ರಭು ತನ್ನ ಅಪಾರ ಜ್ಞಾನ ಮತ್ತು ಸಾಧನೆಯ ದೃಷ್ಟಿಯಿಂದ ವಿಶ್ವದ ಮಹಾನ್ ಚೇತನಗಳ ಸಾಲಿನಲ್ಲಿ ನಿಲ್ಲುತ್ತಾರೆ. ಅಲ್ಲಮರ ವಚನಗಳು ಆಳಕ್ಕೆ-ಆಳ, ವಿಸ್ತಾರಕ್ಕೆ- ವಿಸ್ತಾರ, ಎತ್ತರಕ್ಕೆ- ಎತ್ತರ. ಆದ್ದರಿಂದ ಅಲ್ಲಮಪ್ರಭು ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ. ಅವರು ದೇಶ, ಕಾಲ, ಗಡಿ ಮೀರಿ ನಿಲ್ಲುತ್ತಾರೆ ಎಂದರು.ವಚನಕಾರರ ಕಾಲಘಟ್ಟ ಭಕ್ತಿಯ ಅಂಗವಾಗಿತ್ತು. ಆಗಿದ್ದರೂ ವಚನಕಾರರು ಭಕ್ತಿ ಹೆಸರಿನಲ್ಲಿ ನಡೆಸುತ್ತಿದ್ದ ಡಾಂಭಿಕ ಭಕ್ತಿ ವಿರೋಧಿಸಿದರು. ನಾನು ಎಂಬ ಅಹಮಿಕೆ, ಸಂಕುಚಿತತೆಯನ್ನು ಕಳೆದು, ನಾವೆಲ್ಲರೂ ಸಮಾನರು ಎಂಬ ಆಶಯವನ್ನು ಬಿತ್ತಿದರು. ಶಾಂತಿ, ಸೌಹಾರ್ಧತೆ, ಸಹಬಾಳ್ವೆಯನ್ನು ತಮ್ಮ ವಚನಗಳಲ್ಲಿ ಸಾರಿದರು. ಆದ್ದರಿಂದ ವಚನಕಾರರ ವಚನಗಳು ಎಲ್ಲಾ ಕಾಲಕ್ಕೂ ಅನ್ವಯಿಸುತ್ತವೆ ಎಂದು ಅವರು ತಿಳಿಸಿದರು.
ಅಲ್ಲಮಪ್ರಭು ನಿರಚನವಾದಿ, ಸಂಪೂರ್ಣ ಬಂಡಾಯಗಾರ. ಆದ್ದರಿಂದಲೇ ಪ್ರಖರ ವೈಚಾರಿಕತೆ ಮತ್ತು ಸ್ವತಂತ್ರ ವಿಚಾರಶಕ್ತಿ ಅಲ್ಲಮನ ವಚನಗಳಲ್ಲಿ ಪ್ರತಿಧ್ವನಿಸುತ್ತದೆ. ಮಾತ್ರವಲ್ಲ, ಅಲ್ಲಮಪ್ರಭುವಿನ ವಚನಗಳನ್ನು ಅಧ್ಯಯನ ಮಾಡಿದಾಗ ಅಲ್ಲಮ ಎದುರಿಸಿದ ಕಠಿಣ ಪರಿಸ್ಥಿತಿಯನ್ನೂ ನಾವು ಗ್ರಹಿಸಬಹುದಾಗಿದೆ ಎಂದು ಅವರು ಹೇಳಿದರು.ಬಸವಣ್ಣ ಅವರು ತಮ್ಮನ್ನು ಮಾದಾರ ಚೆನ್ನಯ್ಯನ ಮನೆಯ ಮಗ ಎಂದು ಹೇಳಿಕೊಳ್ಳುವ ಮೂಲಕ ತಳ ಸಮುದಾಯಗಳಲ್ಲಿ ಶಕ್ತಿ ತುಂಬುವ ಕೆಲಸ ಮಾಡಿದರು. ಕಾರ್ಲ್ ಮಾರ್ಕ್ಸ್ ಸೇರಿದಂತೆ ಪಾಶ್ಚಾತ್ಯ ಚಿಂತಕರು ಯೋಚಿಸುತ್ತಿದ್ದ ಚಿಂತನಾಕ್ರಮಗಳನ್ನು ವಚನಕಾರರು ತಮ್ಮ ಚಳವಳಿ ಮೂಲಕ ಸಾಧಿಸಿದ್ದರು. ಬಸವಣ್ಣ, ಅಲ್ಲಮಪ್ರಭು ಅವರಿಂದ ಹಿಡಿದು ಕುವೆಂಪು ಅವರವರೆಗೆ ದೇವಾಲಯದ ಪರಿಕಲ್ಪನೆ, ಮೌಢ್ಯಾಚಾರಣೆ, ಡಾಂಭಿಕ ಭಕ್ತಿ ವಿರೋಧಿಸಿದ್ದಾಗಿ ಅವರು ವಿವರಿಸಿದರು.
ಅಲ್ಲಮಪ್ರಭುವಿನ ವಚನಗಳ ಬರೀ ಶಬ್ಧಗಳಲ್ಲ, ಅವು ವಿಶ್ವ ಚೈತನ್ಯದ ನುಡಿಗಳು. ಅಲ್ಲಮನ ಸಾಧನೆ ವಿಸ್ಮಯ. ಭಾಷೆಯ ಮೂಲಕ ಎಲ್ಲವನ್ನೂ ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂಬುದು ಅಲ್ಲಮನ ನಿಲುವಾಗಿತ್ತು ಎಂದು ಅವರು ಅಭಿಪ್ರಾಯಪಟ್ಟರು.ವೇದ, ಶಾಸ್ತ್ರ , ಪುರಾಣ, ಆಗಮಗಳು ಒಂದು ಕಾಲದ ಚಿಂತನೆಗಳು. ಹಾಗಾಗಿ ಅವು ಎಲ್ಲ ಕಾಲಕ್ಕೂ ಅನ್ವಯವಾಗುವುದಿಲ್ಲ. ವೇದ ಶಾಸ್ತ್ರಗಳನ್ನು ಒಂದು ಮಾನಸಿಕ ಅಂತರ ಕಾಯ್ದುಕೊಂಡು ಅವಲೋಕಿಸಿದಾಗ ಅವುಗಳಲ್ಲಿ ಯಾವುದನ್ನು ಸ್ವೀಕರಿಸಬೇಕು ಮತ್ತು ತಿರಸ್ಕರಿಸಬೇಕು ಎಂಬ ಅರಿವು ಮೂಡುತ್ತದೆ ಎಂದರು.
ಸರಣಿ ಉಪನ್ಯಾಸ ಮಾಲಿಕೆ ಸಂಯೋಜಕ ಡಾ. ಮೈಲಹಳ್ಳಿ ರೇವಣ್ಣ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್. ತಿಮ್ಮೇಗೌಡ, ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್. ವಿಜಯಕುಮಾರಿ ಇದ್ದರು.