ಸಾರಾಂಶ
ಯೇಸುಕ್ರಿಸ್ತರ ಕಷ್ಟಗಳ ಕಾಲವನ್ನು ಸ್ಮರಿಸುವ 40 ದಿನ ತಪಸ್ಸು ಕಾಲ ಬುಧವಾರದಿಂದ ಆರಂಭಗೊಂಡಿದ್ದು, ಕ್ರೈಸ್ತ ಬಾಂಧವರು ತಪಸ್ಸು ಕಾಲದ ಆರಂಭದ ದಿನವನ್ನು ವಿಭೂತಿ ದಿನ ಎಂದು ಬುಧವಾರ ಆಚರಿಸಿದರು. ಈಸ್ಟರ್ ಹಬ್ಬಕ್ಕೂ ಮೊದಲು ಆರು ವಾರ ಆಚರಿಸುವ ಪಶ್ಚಾತ್ತಾಪದ ಕಾಲದ ಮೊದಲ ದಿನವೇ ವಿಭೂತಿ ಬುಧವಾರ.
ಕನ್ನಡಪ್ರಭ ವಾರ್ತೆ ಉಡುಪಿ
ಯೇಸುಕ್ರಿಸ್ತರ ಕಷ್ಟಗಳ ಕಾಲವನ್ನು ಸ್ಮರಿಸುವ 40 ದಿನ ತಪಸ್ಸು ಕಾಲ ಬುಧವಾರದಿಂದ ಆರಂಭಗೊಂಡಿದ್ದು, ಕ್ರೈಸ್ತ ಬಾಂಧವರು ತಪಸ್ಸು ಕಾಲದ ಆರಂಭದ ದಿನವನ್ನು ವಿಭೂತಿ ದಿನ ಎಂದು ಬುಧವಾರ ಆಚರಿಸಿದರು. ಈಸ್ಟರ್ ಹಬ್ಬಕ್ಕೂ ಮೊದಲು ಆರು ವಾರ ಆಚರಿಸುವ ಪಶ್ಚಾತ್ತಾಪದ ಕಾಲದ ಮೊದಲ ದಿನವೇ ವಿಭೂತಿ ಬುಧವಾರ.ಬುಧವಾರ ಬೆಳಗ್ಗೆ ಜಿಲ್ಲೆಯ ಎಲ್ಲ ಚರ್ಚುಗಳಲ್ಲಿ ಪ್ರಾರ್ಥನಾ ವಿಧಿಗಳಲ್ಲಿ, ಧರ್ಮಗುರುಗಳು ಭಕ್ತರ ಹಣೆಗಳಿಗೆ ಆಶೀರ್ವದಿಸಿದ ಬೂದಿ (ವಿಭೂತಿ)ಯನ್ನು ಹಚ್ಚಿ ಧೂಳಿನಿಂದ ಬಂದ ಮನುಷ್ಯ ಮರಳಿ ಧೂಳಿಗೆ ಎಂಬ ವಾಕ್ಯವನ್ನು ಪುನರುಚ್ಚರಿಸುವ ಮೂಲಕ ಕ್ರಿಸ್ತರ ಕಷ್ಟ ಕಾಲವನ್ನು ಸ್ಮರಿಸಿದರು. ಧರ್ಮಗುರುಗಳು ಪಾಪದ ಜೀವನ ತೊರೆದು ಕ್ರಿಸ್ತರ ಹಾದಿ ತುಳಿಯಲು, ಅವರ ಅನುಯಾಯಿಗಳಾಗಲು ಕರೆ ನೀಡಿದರು. ಇಲ್ಲಿಂದ ಮುಂದಿನ ಸುಮಾರು 40 ದಿನ ಯೇಸು ಕ್ರಿಸ್ತರ ಕಷ್ಟ ಕಾಲವನ್ನು ಕ್ರೈಸ್ತರು ಸ್ಮರಿಸುತ್ತಾರೆ.ಮಾನವ ಮಾಡಿದ ತಪ್ಪುಗಳಿಗೆ ಪಶ್ಚಾತ್ತಾಪದ ಗುರುತಾಗಿ ಶಿರಗಳಿಗೆ ವಿಭೂತಿ ಹಚ್ಚಿ ಪ್ರಾರ್ಥನೆ, ಉಪವಾಸ, ದಾನ ಧರ್ಮದ ಮೂಲಕ ಮನ ಪರಿವರ್ತನೆಯೊಂದಿಗೆ ಪ್ರಭು ಯೇಸುವಿನ ಪುನರುತ್ಥಾನದಲ್ಲಿ ಪಾಲ್ಗೊಳ್ಳುವುದೇ ತಪಸ್ಸು ಕಾಲದ ಉದ್ದೇಶ. ತಪಸ್ಸು ಕಾಲವನ್ನು ಶ್ರದ್ಧೆಯಿಂದ ಆಚರಿಸಿ ಪಾಪ ಪರಿಹಾರದೊಂದಿಗೆ ನವ ವ್ಯಕ್ತಿಗಳಾಗಿ ಪ್ರಭು ಕ್ರಿಸ್ತರ ಕಷ್ಟ, ಯಾತನೆ, ಮರಣ ಹಾಗೂ ಪುನರುತ್ಥಾನವನ್ನು ಧ್ಯಾನಿಸುವುದೇ ತಪಸ್ಸು ಕಾಲದ ಪ್ರಮುಖ ಗುರಿ.ಈ 40 ದಿನಗಳ ಕಾಲ ಆಚರಿಸುವ ತಪಸ್ಸು ಕಾಲದಲ್ಲಿ ಕ್ರೈಸ್ತರು ಶಿಲುಬೆಯ ಹಾದಿಯ ಮೂಲಕ ಕ್ರಿಸ್ತರ ಕಷ್ಟಗಳ ಸ್ಮರಣೆ, ಕೆಲವು ದಿನಗಳ ಕಾಲ ಉಪವಾಸವಿದ್ದು, ಮಾಂಸಾಹಾರ ತ್ಯಜಿಸಿ ತ್ಯಾಗ, ಪ್ರಾರ್ಥನೆ, ದಾನಗಳ ಮೂಲಕ ತಮ್ಮ ಅಚರಣೆಯನ್ನು ಅರ್ಥ ಪೂರ್ಣವಾಗಿಸುತ್ತಾರೆ. ತಪಸ್ಸು ಕಾಲದ ಉಪವಾಸವೂ ಪಾಪ ನಿವೇದನೆಯೊಂದಿಗೆ ದೇಹ ದಂಡನೆ ಮಾಡುವುದಾಗಿದೆ. ತನ್ನಲ್ಲಿ ಇದ್ದುದನ್ನು ಹಾಗೂ ತ್ಯಾಗ ಮಾಡಿ ಉಳಿಸಿದ್ದನ್ನು ಬಡವರೊಂದಿಗೆ ಹಂಚಿಕೊಳ್ಳುವುದಾಗಿದೆ.