ಬಸವಪುತ್ಥಳಿ ನಿರ್ಮಾಣಕ್ಕೆ ಅನುದಾನ ದುರ್ಬಳಕೆ ಆರೋಪ

| Published : Dec 13 2023, 01:00 AM IST

ಬಸವಪುತ್ಥಳಿ ನಿರ್ಮಾಣಕ್ಕೆ ಅನುದಾನ ದುರ್ಬಳಕೆ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

Allegation for mis appropriation of funds for Basaveshwara Statue

ಚಿತ್ರದುರ್ಗ: ಬಸವಕೇಂದ್ರ ಮುರುಘಾಮಠದವತಿಯಿಂದ ನಿರ್ಮಾಣ ಹಂತದಲ್ಲಿರುವ 256 ಅಡಿ ಎತ್ತರದ ಬಸವ ಪ್ರತಿಮೆ ಬಗ್ಗೆ ಅವ್ಯವಹಾರ, ಅನುದಾನ ದುರ್ಬಳಕೆ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಜಿಲ್ಲಾಧಿಕಾರಿ ದಿವ್ಯಾಪ್ರಭು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ನೇತೃತ್ವದಲ್ಲಿ ಐವರ ಸಮಿತಿ ರಚಿಸಿ ಹದಿನೈದು ದಿನದ ಒಳಗಾಗಿ ವರದಿ ನೀಡುವಂತೆ ಸೂಚಿಸಿದ್ದಾರೆ. ಡಿ.1ರಂದೇ ಸಮಿತಿ ರಚಿಸಲಾಗಿದೆ.

ಮಾಜಿ ಸಚಿವ ಎಚ್.ಏಕಾಂತಯ್ಯ ಈ ಸಂಬಂಧ ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ಚಿತ್ರದುರ್ಗದ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆವರಣದಲ್ಲಿ ಜಗಜ್ಯೋತಿ ಬಸವೇಶ್ವರ ಪುತ್ಥಳಿ ನಿರ್ಮಿಸಲು 2802 ಕೋಟಿ ರು. ವೆಚ್ಚದ ಅಂದಾಜು ಪಟ್ಟಿಯ ತಯಾರಿಸಲಾಗಿದ್ದು, ರಾಜ್ಯ ಸರ್ಕಾರದಿಂದ 35 ಕೋಟಿ ರು. ಅನುದಾನ ಷರತ್ತುಗೊಳಪಟ್ಟು ಮಂಜೂರಾಗಿದೆ. ಈ ಷರತ್ತುಗಳನ್ನು ಉಲ್ಲಂಘಿಸಿ ಮಂಜೂರಾತಿ ಹಣವನ್ನು ಮಠದ ಪೀಠಾಧಿಪತಿಗಳು ಸಂಬಂಧ ಪಟ್ಟವರ ಜೊತೆ ಶಾಮೀಲಾಗಿ ನಿಯಾಮಬಾಹಿರವಾಗಿ ವೆಚ್ಚ ಮಾಡಿದ್ದಾರೆ. ಪ್ರತಿಮೆ ನಿರ್ಮಿಸಲು C.J.INFRA ENGG.PVT.LTD & JCPL ಗುತ್ತಿಗೆ ನೀಡಿದ್ದು ಇದು ಕೂಡಾ ಕಾನೂನು ಬಾಹಿರವಾಗಿದೆ.

ಗುತ್ತಿಗೆ ನೀಡಿದ ಕ್ರಮ ಮಠದ ಹಿತಾಸಕ್ತಿಗೆ ಪೂರಕವಾಗಿರುವುದಿಲ್ಲ. ಮಠದ ಪೀಠಾಧಿಪತಿಗಳು ಸರ್ಕಾರದ ಅನುದಾನ ದುರ್ಬಳಕೆ ಮಾಡುವ ಮೂಲಕ ಕರ್ತವ್ಯಲೋಪ, ನಂಬಿಕೆ ದ್ರೋಹ, ವಂಚನೆಯಂತಹ ಅಪರಾಧಗಳನ್ನು ಮಾಡಿದ್ದಾರೆ. ಈ ಬಗ್ಗೆ ಬಗ್ಗೆ ತನಿಖೆ ಮಾಡಿ ಸಂಬಂಧ ಪಟ್ಟವರ ಮೇಲೆ ಕಾನೂನು ಕ್ರಮಜರುಗಿಸಬೇಕೆಂದು ಏಕಾಂತಯ್ಯ ಜಿಲ್ಲಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ವಿನಂತಿಸಿದ್ದರು.

ಉಲ್ಲೇಖಿತ ದೂರು ಮನವಿಯ ಬಗ್ಗೆ ಕೂಲಕುಂಷವಾಗಿ ದಾಖಲಾತಿಗಳನ್ನು ಪರಿಶೀಲಿಸಿ ವಿವರವಾದ ವರದಿಯನ್ನು ಸಲ್ಲಿಸಲು ಅಪರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಂಟಿ ತಂಡ ರಚನೆ ಮಾಡಿರುವ ಜಿಲ್ಲಾಧಿಕಾರಿ ದಿವ್ಯಪ್ರಭು ವರದಿ ಸಲ್ಲಿಕೆಗೆ ಹದಿನೈದು ದಿನಗಳ ಗಡುವು ನೀಡಿದ್ದಾರೆ. ಡಿಸೆಂಬರ್ ಒಂದರಂದೇ ಈ ಆಜ್ಞಾಪನಾ ಪತ್ರ ಹೊರಡಿಸಲಾಗಿದ್ದು ಅದರ ಅನ್ವಯ ವರದಿ ಸಲ್ಲಿಕೆಗೆ ಕೇವಲ ಎರಡು ದಿನ ಮಾತ್ರ ಬಾಕಿ ಉಳಿದಿದೆ.

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತನಿಖಾ ತಂಡದ ಮುಖ್ಯಸ್ಥರಾಗಿದ್ದರೆ, ಜಿಲ್ಲಾ ಪಂಚಾಯಿತಿಯ ಮುಖ್ಯ ಲೆಕ್ಕಾಧಿಕಾರಿ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ, ಜಿಲ್ಲಾ ನಗರಾಭಿವೃದ್ದಿ ಕೋಶದ ಕಾರ್ಯಪಾಲಕ ಇಂಜಿನಿಯರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಕೆ ಸಹಾಯಕ ನಿರ್ದೇಶಕರು ತಂಡದ ಇತರೆ ಸದಸ್ಯರಾಗಿದ್ದಾರೆ.

---------

ಬಾಕ್ಸ್

ಏನಿದು ಬಸವೇಶ್ವರ ಪ್ರತಿಮೆ

ಚಿತ್ರದುರ್ಗ ಮುರುಘಾಮಠದ ಬಳಿ ಮಠಕ್ಕೆ ಸೇರಿದ 100 ಎಕರೆ ಪ್ರದೇಶದಲ್ಲಿ ಅಂದಾಜು 2802 ಕೋಟಿ ರು. ವೆಚ್ಚದಲ್ಲಿ 256 ಅಡಿ ಎತ್ತರದ ಪ್ರತಿಮೆ(100 ಅಡಿ ಪ್ರತಿಮೆ ತಳಪಾಯ ಹಾಗೂ 156 ಅಡಿ ಎತ್ತರದ ಪ್ರತಿಮೆ) ನಿರ್ಮಿಸುವ ತೀರ್ಮಾನ ಕೈಗೊಳ್ಳಲಾಗಿತ್ತು. ಇದಕ್ಕಾಗಿ ಸರ್ಕಾರ ಸೇರಿದಂತೆ ಸಾರ್ವಜನಿಕರಿಂದ ಅನುದಾನ ಸಂಗ್ರಹಿಸುವ ಪ್ರಕ್ರಿಯೆ ನಡೆದಿತ್ತು. 300 ಟನ್ ಕಬ್ಬಿಣ ಬಳಸಿ ಅಡಿಪಾಯ(ಪೀಠ) ನಿರ್ಮಿಸಲಾಗಿತ್ತು. ಮಧ್ಯಪ್ರದೇಶದ ತೇಜೇಂದ್ರಸಿಂಗ್ ನೇತೃತ್ವದಲ್ಲಿ 30 ಮಂದಿ ಶಿಲ್ಪಿಗಳು ಪ್ರತಿಮೆ ನಿರ್ಮಾಣದಲ್ಲಿ ನಿರತರಾಗಿದ್ದರು. ನಂತರ ಕಾಮಗಾರಿ ಸ್ಥಗಿತಗೊಂಡಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 30 ಕೋಟಿ ರು. ಹಾಗೂ ಮುಜರಾಯಿ ಇಲಾಖೆಯಿಂದ 5 ಕೋಟಿ ರು. ಅನುದಾನ ಬಿಡುಗಡೆಯಾಗಿತ್ತು.----------12 ಸಿಟಿಡಿ7

ಜಿಲ್ಲಾಧಿಕಾರಿ ದಿವ್ಯಪ್ರಭು ತನಿಖೆಗಾಗಿ ಆದೇಶಿಸಿರುವ ಆಜ್ಞಾಪನಾ ಪತ್ರ