ಕುಷ್ಟಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸರ್ಕಾರಿ ಹಣವನ್ನು ನಿಯಮಬಾಹಿರವಾಗಿ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಇಒ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಕನಕನಗೌಡ ಯಮನಪ್ಪ ಅವರನ್ನು ಅಮಾನತುಗೊಳಿಸಲಾಗಿದೆ.
ಪರಶಿವಮೂರ್ತಿ ಮಾಟಲದಿನ್ನಿ
ಕುಷ್ಟಗಿ: ಕುಷ್ಟಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸರ್ಕಾರಿ ಹಣವನ್ನು ನಿಯಮಬಾಹಿರವಾಗಿ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಇಒ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಕನಕನಗೌಡ ಯಮನಪ್ಪ ಅವರನ್ನು ಅಮಾನತುಗೊಳಿಸಲಾಗಿದೆ.
ಮಹಾಲೇಖಪಾಲರ (ಎಜಿ) ಕಚೇರಿ ತಂಡ ಸೆ. 28ರಂದು ಬಿಇಒ ಕಚೇರಿಯಲ್ಲಿ ಲೆಕ್ಕಪತ್ರಗಳ ಪರಿಶೀಲನೆ ನಡೆಸಿದಾಗ ಹಲವು ದಾಖಲೆಗಳು ಲಭ್ಯವಿಲ್ಲದಿರುವುದು ಗಮನಕ್ಕೆ ಬಂದಿದೆ. ಒಟ್ಟು 135 ಕಡತಗಳನ್ನು ಪರಿಶೀಲನೆಗೆ ಕೇಳಲಾಗಿತ್ತು. ಆದರೆ ಕೇವಲ 45 ಕಡತಗಳ ದಾಖಲೆಗಳನ್ನು ಮಾತ್ರ ನೀಡಲಾಗಿದ್ದು, ಉಳಿದ 90 ಕಡತಗಳಿಗೆ ಸಂಬಂಧಿಸಿದ ವೋಚರ್‌ಗಳು ಮತ್ತು ಇತರ ದಾಖಲೆಗಳು ಲಭ್ಯವಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.₹69,89,320 ಲಕ್ಷ ವರ್ಗಾವಣೆ ಆರೋಪ: ಬಿಇಒ ಉಮಾದೇವಿ ಬಸಾಪುರ ಅವರು ಕುಷ್ಟಗಿ ಪೊಲೀಸ್ ಠಾಣೆಗೆ ನೀಡಿರುವ ದೂರಿನ ಪ್ರಕಾರ, ನಿವೃತ್ತ ನೌಕರರ ಗಳಿಕೆ ರಜೆ ನಗದೀಕರಣ, ಅತಿಥಿ ಶಿಕ್ಷಕರ ಗೌರವಧನ, ಜಿಪಿಎಫ್, ಡಿಎ ಬಾಕಿ ಸೇರಿದಂತೆ ವಿವಿಧ ಬಿಲ್‌ಗಳ ಹಣವನ್ನು ನಿಯಮದಂತೆ ಪಾವತಿಸದೆ ಬೇರೆ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಆರೋಪಿಸಲಾಗಿದೆ.
ಆರೋಪದ ಪ್ರಕಾರ, ಕನಕನಗೌಡ ಅವರ ಖಾತೆಗೆ ₹7,63,149 ಜಮೆಯಾಗಿದೆ. ಶಿವರುದ್ರಪ್ಪ ಅಮರೇಶ ಬಂಡಿ (ಮುತ್ತಣ್ಣ) ಅವರ ಎರಡು ಖಾತೆಗಳಿಗೆ ಕ್ರಮವಾಗಿ ₹26,75,010 ಮತ್ತು 14,66,134, ಪೂಜಾ ಬಂಡಿ ಅವರ ಖಾತೆಗೆ ₹90,000 ಹಾಗೂ ಬಸಮ್ಮ ಅಮರೇಶ ಬಂಡಿ ಅವರ ಖಾತೆಗಳಿಗೆ ₹98,333, ಹಾಗೂ ₹8,11,249, ₹10,85,445 ಅಧಿಕ ಹಣ ವರ್ಗಾವಣೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಒಟ್ಟಾರೆ 2020ರ ಏ. 14ರಿಂದ 2026ರ ಮಾ. 28ರ ವರೆಗೆ ₹69,89,320 ಹಣ ವರ್ಗಾವಣೆಯಾಗಿದೆ ಎಂದು ಆರೋಪಿಸಲಾಗಿದೆ.ಅಮಾನತು ಆದೇಶದಲ್ಲಿ ₹74.04 ಲಕ್ಷ ಉಲ್ಲೇಖ: ಇತ್ತ ಕನಕನಗೌಡ ಸೇರಿದಂತೆ ಶಿವರುದ್ರಪ್ಪ ಬಂಡಿ, ಪೂಜಾ ಬಂಡಿ, ಬಸಮ್ಮ ಬಂಡಿ ಹಾಗೂ ಇತರರ ಬ್ಯಾಂಕ್ ಖಾತೆಗಳಿಗೆ ಒಟ್ಟು ₹74,04,156 ಜಮೆಯಾಗಿರುವುದು ಕಂಡುಬಂದಿದೆ ಎಂದು ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸ್ ದೂರಿನಲ್ಲಿ ಉಲ್ಲೇಖಿಸಿರುವ ₹69.89 ಲಕ್ಷ ಹಾಗೂ ಅಮಾನತು ಆದೇಶದಲ್ಲಿರುವ ₹74.04 ಲಕ್ಷ ಮೊತ್ತಗಳ ನಡುವೆ ವ್ಯತ್ಯಾಸವಿದ್ದು, ಇದರ ಕಾರಣವೇನು ಎಂಬುದೂ ತನಿಖೆಯಿಂದ ಸ್ಪಷ್ಟವಾಗಬೇಕಿದೆ.ಅಮಾನತು ಆದೇಶ: ಸರ್ಕಾರಿ ಹಣದ ದುರುಪಯೋಗ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಹಾಗೂ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಪರಿಗಣಿಸಿ ಶಾಲಾ ಶಿಕ್ಷಣ ಇಲಾಖೆಯ ಕೊಪ್ಪಳ ಉಪನಿರ್ದೇಶಕ ಹಾಗೂ ಶಿಸ್ತು ಪ್ರಾಧಿಕಾರಿ ಅನಂತಕುಮಾರ ಎ.ಎಸ್. ಅವರು ಅ. 6ರಂದು ಕನಕನಗೌಡ ಅವರನ್ನು ಅಮಾನತುಗೊಳಿಸಿದ್ದಾರೆ.
ತನಿಖೆಯಿಂದ ಸತ್ಯ ಹೊರಬರಬೇಕಿದೆ: 90 ಕಡತಗಳ ದಾಖಲೆಗಳು ಏಕೆ ಲಭ್ಯವಿಲ್ಲ? ಹಣ ಯಾವ ರೀತಿಯಲ್ಲಿ ಬೇರೆ ಖಾತೆಗಳಿಗೆ ವರ್ಗಾವಣೆಯಾಯಿತು? ಯಾರ ಅನುಮೋದನೆಯೊಂದಿಗೆ ಹಣ ಪಾವತಿಸಲಾಯಿತು? ₹69.89 ಲಕ್ಷ ಮತ್ತು ₹74.04 ಲಕ್ಷದ ನಡುವಿನ ವ್ಯತ್ಯಾಸವೇನು? ಎಂಬ ಪ್ರಶ್ನೆಗಳಿಗೆ ಪೊಲೀಸ್ ಹಾಗೂ ಇಲಾಖಾ ತನಿಖೆಯಿಂದ ಉತ್ತರ ಸಿಗಬೇಕಿದೆ.ಮಾಹಿತಿ ಸಿಕ್ಕಿಲ್ಲ: ಅಡಿಟ್ ಮಾಡಿದ ಮೇಲೆ ಈ ವಿಷಯ ನಮ್ಮ ಗಮನಕ್ಕೆ ಬಂದಿದ್ದು ಅಕ್ರಮದಲ್ಲಿ ಭಾಗಿಯಾದ ಕಚೇರಿಯ ದ್ವಿದಸ ಕನಕನಗೌಡ ವಿರುದ್ಧ ಈಗಾಗಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ತನಿಖೆಯ ನಂತರ ಎಲ್ಲವು ತಿಳಿಯಲಿದೆ. ಈ ಕುರಿತು ಉಪಖಜಾನೆಯಲ್ಲಿಯೂ ವಿಚಾರಿಸಲಾಗಿದ್ದು, ಸರಿಯಾದ ಮಾಹಿತಿ ಸಿಕ್ಕಿಲ್ಲ ಎಂದು ಕುಷ್ಟಗಿ ಬಿಇಒ ಉಮಾದೇವಿ ಬಸಾಪುರ ಹೇಳಿದರು.
ಇಲಾಖೆಯ ಮುಖ್ಯಸ್ಥರ (ಡಿ1) ಆದೇಶದಂತೆ ಬಿಲ್ ಪಾಸ್ ಮಾಡಲಾಗುತ್ತಿದ್ದು, ದಾಖಲೆಗಳ ಪರಿಶೀಲನೆಯನ್ನು ಆಯಾ ಇಲಾಖೆಯ ಅಧಿಕಾರಿಗಳು ಮಾಡಬೇಕಿದೆ. ಈ ಅಕ್ರಮಕ್ಕೂ ನಮಗೂ ಯಾವುದೆ ಸಂಬಂಧವಿಲ್ಲ ಎಂದು ಕುಷ್ಟಗಿ ಉಪಖಜಾನೆ ಅಧಿಕಾರಿ ತಾಜುದ್ದೀನ್ ಹೇಳಿದರು.