ಫಸಲ್‌ ಭೀಮಾ ಯೋಜನೆಯಡಿ ಅವ್ಯವಹಾರ ಆರೋಪ

| Published : Jul 21 2024, 01:20 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಫಸಲ್‌ ಭೀಮಾ ಯೋಜನೆಯಡಿ ವಿಮೆ ಕಟ್ಟಿದ ಜಿಲ್ಲೆಯ ಸಾವಿರಾರು ರೈತರಿಗೆ ಅನ್ಯಾಯವಾಗಿದ್ದು, ಈ ಯೋಜನೆಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿದೆ. ರೈತರಿಗೆ ವಿಮೆಯ ಹಣದ ಪರಿಹಾರಕ್ಕಾಗಿ ಆಗ್ರಹಿಸಿ ಜುಲೈ 23ರಂದು ನಗರದಲ್ಲಿರುವ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು. ಅಲ್ಲದೆ ಒಂದು ದಿನದ ಸಾಂಕೇತಿಕ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಫಸಲ್‌ ಭೀಮಾ ಯೋಜನೆಯಡಿ ವಿಮೆ ಕಟ್ಟಿದ ಜಿಲ್ಲೆಯ ಸಾವಿರಾರು ರೈತರಿಗೆ ಅನ್ಯಾಯವಾಗಿದ್ದು, ಈ ಯೋಜನೆಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿದೆ. ರೈತರಿಗೆ ವಿಮೆಯ ಹಣದ ಪರಿಹಾರಕ್ಕಾಗಿ ಆಗ್ರಹಿಸಿ ಜುಲೈ 23ರಂದು ನಗರದಲ್ಲಿರುವ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು. ಅಲ್ಲದೆ ಒಂದು ದಿನದ ಸಾಂಕೇತಿಕ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಹೇಳಿದರು.

ನಗರದ ಕಸಾಪ ಕಚೇರಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ರೈತರು ಮಳೆ ಬಾರದ ಹಿನ್ನೆಲೆಯಲ್ಲಿ ಬರಗಾಲದ ನಷ್ಟ ಅನುಭವಿಸಿದ್ದಾರೆ. ಫಸಲ್‌ ಭೀಮಾ ಯೋಜನೆಯಡಿ ವಿಮೆ ತುಂಬಿದ ರೈತರಿಗೂ ಸಹ ಸರಿಯಾಗಿ ಇದುವರೆಗೂ ಪರಿಹಾರ ಕೂಡ ಬಂದಿಲ್ಲ. ಈ ಕುರಿತು ಕಳೆದ ತಿಂಗಳು ಕೃಷಿ ಸಚಿವರಿಗೆ, ಜಿಲ್ಲಾಧಿಕಾರಿಗಳಿಗೆ, ಕೃಷಿ ಜಂಟಿ ನಿರ್ದೇಶಕರಿಗೆ ರೈತರು ಮನವಿ ಮಾಡಿದ್ದಾರೆ. ಆದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲೆಯಲ್ಲಿ ಭೀಕರ ಬರ ಆವರಿಸಿದ್ದರಿಂದ ಸರ್ಕಾರವೇ 13 ತಾಲೂಕುಗಳನ್ನು ಸಹ ಬರಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಿದೆ. ಹೀಗಿದ್ದು, ಹಲವು ರೈತರಿಗೆ ಬೆಳೆ ಹಾನಿಯಾಗಿಲ್ಲ, ಪರಿಹಾರ ಕೂಡ ಬರುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇಡಿ ಜಿಲ್ಲೆಯೇ ಬರಗಾಲ ಎಂದು ಘೋಷಣೆ ಆದಮೇಲೆ ಎಲ್ಲರಿಗೂ ಪರಿಹಾರ ಕೊಡಲೇಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯ ಶಿವಣಗಿ ಗ್ರಾಮದಲ್ಲಿ ಒಟ್ಟು ಶೇ. 90ರಷ್ಟು ಹಾನಿಯಾಗಿದೆ ಎಂದು ವರದಿ ಕಳುಹಿಸಿದ ಅಧಿಕಾರಿಗಳು, ಅದರ ಪಕ್ಕದ ಗ್ರಾಮವಾದ ಹಡಗಲಿಯಲ್ಲಿ ಕೇವಲ ಶೇ.10 ಪರ್ಸೆಂಟ್ ಮಾತ್ರ ನಷ್ಟವಾಗಿದೆ ಎಂದು ವರದಿ ಕಳುಹಿಸಿದ್ದಾರೆ. ಇದೆಲ್ಲವೂ ವಿಮಾ ಕಂಪನಿ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಸೇರಿಕೊಂಡು ರೈತರಿಗೆ ಮಾಡುತ್ತಿರುವ ವಂಚನೆಯಾಗಿದೆ. ಈ ಬಗ್ಗೆ ತಕ್ಷಣವೇ ಸರ್ಕಾರ ಸ್ಪಂದಿಸಬೇಕಿದ್ದು, ಜಿಲ್ಲೆಯ ಎಲ್ಲ ರೈತರಿಗೆ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.ಜಿಲ್ಲೆಯ ಜುಮನಾಳ, ಹಡಗಲಿ, ಆಹೇರಿ, ಜಂಬಗಿ, ಮಲಘಾಣ, ಡೋಣೂರ, ಎಂಭತ್ನಾಳ, ಉಕ್ಕಲಿ, ಕಲಕೇರಿ ಸೇರಿದಂತೆ 500ಕ್ಕೂ ಅಧಿಕ ಹಳ್ಳಿಗಳಲ್ಲಿ ಇದೇ ರೀತಿಯ ಸಮಸ್ಯೆಗಳು ಆಗಿವೆ. ಸಂಬಂಧಿಸಿದವರು ಇದನ್ನು ತಕ್ಷಣ ಪರಿಹರಿಸಬೇಕು ಎಂದು ಸಂಗಮೇಶ ಸಗರ ಆಗ್ರಹಿಸಿದರು.

--------------------------------

ಕೋಟ್

ಫಸಲ್ ಭೀಮಾ ಯೋಜನೆಯಡಿ ವಿಮೆ ಕಂತು ಕಟ್ಟಿದವರಿಗೂ ಸಹ ಪರಿಹಾರ ಬಂದಿಲ್ಲ. ಇಡಿ ಜಿಲ್ಲೆಯೇ ಬರಗಾಲ ಪೀಡಿತ ಎಂದು ರಾಜ್ಯ ಸರ್ಕಾರವೇ ಘೋಷಿಸಿದೆ. ಆದರೆ ಜಿಲ್ಲೆಯಲ್ಲಿ ಒಂದು ಹಳ್ಳಿಯವರಿಗೆ ಪರಿಹಾರ ಬಂದಿದೆ, ಪಕ್ಕದ ಹಳ್ಳಿಯವರಿಗೆ ವಿಮೆ ಹಣವೇ ಬಂದಿಲ್ಲ. ಹೀಗಾಗಿ ತಮಗೆ ನ್ಯಾಯ ಕೊಡಿಸಿ ಎಂದು ಕಳೆದ ಒಂದು ತಿಂಗಳಿನಿಂದ ರೈತರು ಕೃಷಿ ಇಲಾಖೆಯ ಕಚೇರಿಗೆ ಅಲೆದಾಡುತ್ತಿದ್ದಾರೆ. ಆದರೆ, ಅಧಿಕಾರಿಗಳು ಇವರಿಗೆ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ 23ಕ್ಕೆ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದೇವೆ.

ಸಂಗಮೇಶ ಸಗರ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ.

ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ರಾಹುಲ ಕುಬಕಡ್ಡಿ, ಕಲ್ಲಪ್ಪ ಪಾರಶೆಟ್ಟಿ, ವಿರೇಶ ಗೊಬ್ಬೂರ, ರಾಮನಗೌಡ ಪಾಟೀಲ್, ಮಹಾದೇವಪ್ಪ ತೇಲಿ, ಪ್ರಕಾಶ ತೇಲಿ, ಸಂಗಪ್ಪ ಟಕ್ಕೆ, ಪ್ರತಾಪ ನಾಗರಗೋಜಿ, ಸಾತಲಿಂಗಯ್ಯ ಸಾಲಿಮಠ ಉಪಸ್ಥಿತರಿದ್ದರು.