ಸಾರಾಂಶ
ಜಿಲ್ಲಾ ಉಸ್ತುವಾರಿ ಮಂತ್ರಿಗಳಿಂದ ತೊಂದರೆ ಕೊಡಿಸುವುದಾಗಿ ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ ಆರೋಪದಡಿ ಕರವೇ ಜಿಲ್ಲಾಧ್ಯಕ್ಷ ಮಂಜುನಾಥ ಲೂತಿಮಠ ಸೇರಿ 8 ಜನರ ವಿರುದ್ಧ ಇಲ್ಲಿನ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಜಿಲ್ಲಾ ಉಸ್ತುವಾರಿ ಮಂತ್ರಿಗಳಿಂದ ತೊಂದರೆ ಕೊಡಿಸುವುದಾಗಿ ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ ಆರೋಪದಡಿ ಕರವೇ ಜಿಲ್ಲಾಧ್ಯಕ್ಷ ಮಂಜುನಾಥ ಲೂತಿಮಠ ಸೇರಿ 8 ಜನರ ವಿರುದ್ಧ ಇಲ್ಲಿನ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇಲ್ಲಿನ ಜವಳಿಸಾಲದ ಉಳ್ಳಾಗಡ್ಡಿ ಮಠ ಓಣಿಯ ನಿಖಿತಾ ಪ್ಲಾಸ್ಟಿಕ್ ಅಂಗಡಿ ವ್ಯಾಪಾರಸ್ಥ ವಿಜಯ ಅಳಗುಂಡಗಿ ಎಂಬುವರನ್ನು ಈ ಗುಂಪು ಹೆದರಿಸಿದೆ. 2-3 ವರ್ಷಗಳಿಂದ ಇವರು ₹3 ರಿಂದ ₹೪ ಲಕ್ಷ ಒತ್ತಾಯಪೂರ್ವಕವಾಗಿ ಹಣ ವಸೂಲಿ ಮಾಡುತ್ತ ಬಂದಿದ್ದಾರೆ. ಅ. 26ರಂದು ರಾತ್ರಿ 9.45ರ ಸುಮಾರಿಗೆ ವಿಜಯ ಎಂಬುವರನ್ನು ಕರೆಯಿಸಿಕೊಂಡು ಕನ್ನಡ ರಾಜ್ಯೋತ್ಸವಕ್ಕೆ ಸುಮಾರು ₹2 ಲಕ್ಷದ ವರೆಗೆ ಹಣ ಬೇಕು. ಅಲ್ಲದೇ ಪ್ರತಿ ಮೂರು ತಿಂಗಳಿಗೆ ಕೊಡಬೇಕಾದ ₹1.70 ಲಕ್ಷ ಹಣವನ್ನು ಕೂಡ ಕಡ್ಡಾಯವಾಗಿ ಕೊಡಬೇಕು. ಕೊಡದಿದ್ದರೆ ಜಿಲ್ಲಾ ಮಂತ್ರಿಗಳಿಂದ ನಿಮ್ಮ ಅಂಗಡಿಗೆ ತೊಂದರೆ ಮಾಡುತ್ತೇನೆ ಎಂದು ಮಂಜುನಾಥ ಲೂತಿಮಠ, ಅಮಿತ, ರಾಹುಲ, ಪ್ರವೀಣ ಗಾಯಕವಾಡ, ಬಸವರಾಜ, ಬಾಳು ಲೂತಿಮಠ, ಪ್ರಕಾಶ ನಾಯಕ, ವಿಜಯ ಸರ್ವೇ ಎಂಬುವರು ಧಮಕಿ ಹಾಕಿದ್ದಾರೆ ಎಂದು ವಿಜಯ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಶಹರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಂಜುನಾಥ ಲೂತಿಮಠಗೆ ನ. ೧ ರಂದು ಮಹಾನಗರ ಪಾಲಿಕೆಯಿಂದ ಧೀಮಂತ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗಿದೆ.