ಸಾರಾಂಶ
ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ
ಕುಡಿಯುವ ನೀರು ಕೊಡದೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ಚಿನ್ನಾಯಕನಹಳ್ಳಿ ಗ್ರಾಮಸ್ಥರು ಖಾಲಿ ಕೊಡ ಹಿಡಿದು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಕರುನಾಡ ಕಾರ್ಮಿಕರ ವೇದಿಕೆ ಜಿಲ್ಲಾಧ್ಯಕ್ಷ ಶಿವರಾಮು ನೇತೃತ್ವದಲ್ಲಿ ಗ್ರಾಮದ ಮಹಿಳೆಯರು, ಮಕ್ಕಳು ಸೇರಿದಂತೆ ಗ್ರಾಮಸ್ಥರು ಖಾಲಿಕೊಡ ಹಿಡಿದು, ಪಟ್ಟಣದ ತಾಪಂಗೆ ಮುತ್ತಿಗೆ ಹಾಕಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಸುಮಾರು 70 ರಿಂದ 80 ಕುಟುಂಬಗಳು ವಾಸಿಸುತ್ತಿವೆ. ಹಲವು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ. ವಾಟರ್ ಮೆನ್ ಸರಿಯಾಗಿ ಕುಡಿಯುವ ನೀರು ಬಿಡದ ಕಾರಣ ಐದಾರು ಬಾರಿ ಕೆ.ಶೆಟ್ಟಹಳ್ಳಿ ಗ್ರಾಪಂಗೆ ದೂರು ನೀಡಿ ಪ್ರತಿಭಟನೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದರು.ಪಂಚಾಯ್ತಿ ಅಧ್ಯಕ್ಷೆ ಹರ್ಷಿತ ಫೆ.3ರಂದು ಗ್ರಾಮಕ್ಕೆ ಭೇಟಿ ನೀಡಿ ಪಂಚಾಯ್ತಿಗೆ ಬಂದು ಪ್ರತಿಭಟನೆ ಏಕೆ ಮಾಡುತ್ತೀರಾ?, ಪ್ರತಿಭಟನೆ ಮಾಡಲು ನಿಮಗೇನು ಹಕ್ಕಿದೆ? ನಿಮ್ಮ ಬಳಿ ಹಕ್ಕು ಪತ್ರವೇ ಇಲ್ಲ. ನಿಮಗೆ ಯಾವುದೇ ಆಧಾರ ಸಹ ಇಲ್ಲ. ಇನ್ನು ಮುಂದೆ ನೀವು ಗ್ರಾಪಂಗೆ ಬಂದು ಪ್ರತಿಭಟನೆ ಮಾಡುವಂತಿಲ್ಲ ಎಂದು ದಮ್ಕಿ ಹಾಕಿ ಹೆದರಿಸಿದ್ದಾರೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಮೂಲ ಸೌಕರ್ಯವಿರಲಿ ಕನಿಷ್ಠ ಕುಡಿಯುವ ನೀರಿಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇಲ್ಲಿನ ನಿವಾಸಿಗಳಿಗೆ ಹಕ್ಕುಪತ್ರಗಳಿಲ್ಲ ಎಂದು ನೀರು ಕೊಡದೆ ಗ್ರಾಮದಲ್ಲಿ ಅಳವಡಿಸಿದ್ದ ಜೆಜೆಎಂ ನೀರಿನ ಸಂಪರ್ಕವನ್ನು ವಾಟರ್ ಮ್ಯಾನ್ ಕಟ್ ಮಾಡಿದ್ದಾರೆ. ಪ್ರಶ್ನಿಸಿದರೆ ಪಿಡಿಒ, ಕಾರ್ಯದರ್ಶಿ ಹಾಗೂ ಅಧ್ಯಕ್ಷರು ಹೇಳಿದ ಹಾಗೆ ಕೇಳಿದ್ದೇನೆ. ಅವರನ್ನೇ ಕೇಳಿಕೊಳ್ಳಿ ಎಂದು ಹಾರಿಕೆ ಉತ್ತರ ನೀಡುತ್ತಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಡಾವಣೆ ನಿವಾಸಿಗಳಿಗೆ ನೀರು ಕೊಡದೆ ದೌರ್ಜನ್ಯ ಮಾಡುತ್ತಿರುವ ಪಂಚಾಯ್ತಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಜಿಪಂ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದು ಪ್ರತಿಭಟನಾ ಸ್ಥಳದಲ್ಲಿ ಊಟ ತಿಂದು ಧರಣಿ ಮುಂದುವರೆಸಿದರು. ಗ್ರಾಮಕ್ಕೆ ನೀರು ಕೊಡದಿದ್ದರೆ ತಾಲೂಕು ಕಚೇರಿ ಎದುರ ಉಪವಾಸ ಸತ್ಯಾಗ್ರಹದ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಕಾರ್ಮಿಕ ವೇದಿಕೆ ಜಿಲ್ಲಾಧ್ಯಕ್ಷ ಶಿವರಾಮು, ವಿಜಯೇಂದ್ರ, ಮಂಜುನಾಥ್, ಶಶಿಕಲಾ, ರವಿ, ತುಳಸಿ, ರಾಜಮ್ಮ, ಮಾದಮ್ಮ, ನಾಗರಾಜು ಸೇರಿದಂತೆ ಇತರರು ಇದ್ದರು.