ಹಿಂದು ನಿಂದನೆ ಆರೋಪ: ಶಾಲೆ ವಿರುದ್ಧ ಪೋಷಕರ ದೂರು

| Published : Feb 12 2024, 01:31 AM IST

ಹಿಂದು ನಿಂದನೆ ಆರೋಪ: ಶಾಲೆ ವಿರುದ್ಧ ಪೋಷಕರ ದೂರು
Share this Article
  • FB
  • TW
  • Linkdin
  • Email

ಸಾರಾಂಶ

ಸಂಬಂಧಪಟ್ಟ ಶಾಲೆಯ ಶಿಕ್ಷಕಿ ವಿರುದ್ಧ ಆಡಳಿತ ಮಂಡಳಿ ಕ್ರಮ ಜರುಗಿಸಬೇಕು. ಇಲ್ಲದಿದ್ದಲ್ಲಿ ತೀವ್ರ ಹೋರಾಟ ಅನಿವಾರ್ಯ ಎಂದು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರುವಿದ್ಯಾರ್ಥಿಗಳಿಗೆ ಹಿಂದು ದೇವರ ಮೇಲಿನ ನಂಬಿಕೆ ಹೋಗುವಂತೆ ಮತ್ತು ಕ್ರೈಸ್ತ ಮತ ವೈಭವೀಕರಿಸಿ ಮತಾಂತರಕ್ಕೆ ಪ್ರೇರೇಪಿಸುತ್ತಿರುವ ಬಗ್ಗೆ ಮಂಗಳೂರು ವೆಲೆನ್ಸಿಯಾದ ಖಾಸಗಿ ಶಾಲೆಯ ವಿರುದ್ಧ ಪೋಷಕರು ಭಾನುವಾರ ಪಾಂಡೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ.

ಶಾಲೆಯ ಶಿಕ್ಷಕಿಯೊಬ್ಬರು ಫೆ.8ರಂದು ಕೊನೆ ಅವಧಿಯಲ್ಲಿ ತರಗತಿಯಲ್ಲಿ ವರ್ಕ್‌ ಈಸ್‌ ವರ್ಷಿಪ್‌ ವಿಷಯದ ಬಗ್ಗೆ ತರಗತಿ ನಡೆಸುತ್ತಿದ್ದರು. ಆಗ ಹಿಂದು ಧರ್ಮದ ವಿರುದ್ಧ ಹಿಂದು ದೇವರುಗಳ ಬಗ್ಗೆ ಹಾಗೂ ನಮ್ಮ ದೇಶದ ಪ್ರಧಾನಿ ಬಗ್ಗೆ, ಹಿಂದು ಧರ್ಮದ ಅಸ್ತಿತ್ವದ ಬಗ್ಗೆ ಪ್ರಶ್ನಿಸಿದ್ದಾರೆ. ಹಿಂದು ಧರ್ಮವನ್ನು ನಿಂದಿಸಿ, ಹೀಯಾಳಿಸಿ, ತುಚ್ಛವಾಗಿ ಕೆಟ್ಟ ಶಬ್ದ ಪ್ರಯೋಗಿಸುವ ಮೂಲಕ ಪಾಠವನ್ನು ತಪ್ಪಾಗಿ ಬೋಧಿಸಿದ್ದಾರೆ. ಇದು ಅಪ್ರಾಪ್ತ ಮಕ್ಕಳ ಮನಸ್ಸಿನಲ್ಲಿ ವ್ಯತಿರಿಕ್ತ ಭಾವನೆ ಮೂಡುವ ರೀತಿಯಲ್ಲಿ ಬೋಧಿಸುತ್ತಾ ತರಗತಿಯಲ್ಲಿ ಪಠ್ಯ ವಿಷಯ ಬದಲು ಹಿಂದು ಧರ್ಮದ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದು ಕ್ರೈಸ್ತ ಶಿಕ್ಷಣ ಸಂಸ್ಥೆಯಾಗಿದ್ದು, ಆ ಮೂಲಕ ಬಲವಂತ ಹಾಗೂ ಒತ್ತಾಯಪೂರ್ವಕವಾಗಿ ಮಕ್ಕಳಿಗೆ ಧರ್ಮದ ಬಗ್ಗೆ ವಿಷಬೀಜ ಬಿತ್ತುವ ಕೆಲಸ ಮಾಡಲಾಗಿದೆ. ಹಿಂದು ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವ ಹುನ್ನಾರದ ಪಿತೂರಿ ಇದಾಗಿದ್ದು, ಶಿಕ್ಷಣಕ್ಕೆ ಮಾಡುವ ಅಪರಾಧವಾಗಿದೆ ಎಂದು ಹೇಳಲಾಗಿದೆ.

ಈ ಮೂಲಕ ಕೋಮು ಗಲಭೆಗೆ ಪ್ರಚೋದನೆ ನೀಡುವ ಬಗ್ಗೆ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಹಾಗೂ ಶಿಕ್ಷಣ ಸಂಸ್ಥೆ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೋಷಕರಾದ ಶರತ್‌ ಕುಮಾರ್‌ ಎಂಬವರು ದೂರಿನಲ್ಲಿ ಆಗ್ರಹಿಸಿದ್ದಾರೆ.ಶಿಕ್ಷಕಿ ವಿರುದ್ಧ ಕ್ರಮಕ್ಕೆ ಶಾಸಕ ಕಾಮತ್‌, ಭರತ್‌ ಶೆಟ್ಟಿ ಆಗ್ರಹ

ಮಂಗಳೂರು: ಮಂಗಳೂರಿನ ಸಂತ ಜೆರೋಸಾ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯೊಬ್ಬರು ಹಿಂದೂಗಳು ಅತ್ಯಂತ ಶ್ರದ್ಧಾ ಭಕ್ತಿಯಿಂದ ಪೂಜಿಸುವ ಪ್ರಭು ಶ್ರೀರಾಮನ ಬಗ್ಗೆ ಅವಹೇಳನ ಮಾಡಿದ ಆರೋಪ ಕೇಳಿ ಬಂದಿದ್ದು, ಇದು ಖಂಡನೀಯ ಮತ್ತು ಇಂತಹ ಧರ್ಮವಿರೋಧಿ ಮನಸ್ಥಿತಿಯನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ವಧರ್ಮದ ಮಕ್ಕಳು ಬೆರೆತಿರುವ ಶಾಲೆಗಳಲ್ಲಿ ಯಾವುದೇ ಧರ್ಮದ ಅವಹೇಳನ ಮಾಡುವುದು ಸಲ್ಲ. ಅದರಲ್ಲೂ ಶಿಕ್ಷಕರೇ ಇಂತಹ ದುರ್ವರ್ತನೆ ತೋರಿದರೆ ಅದಕ್ಕೆ ಕ್ಷಮೆಯೇ ಇಲ್ಲ

. ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವ ಶಿಕ್ಷಕಿಯ ಮೇಲೆ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಾಲೆಯ ಆಡಳಿತ ಮಂಡಳಿಗೆ ಆಗ್ರಹಿಸುತ್ತೇನೆ ಕಾಮತ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹೋರಾಟದ ಎಚ್ಚರಿಕೆ: ಸಂಬಂಧಪಟ್ಟ ಶಾಲೆಯ ಶಿಕ್ಷಕಿ ವಿರುದ್ಧ ಆಡಳಿತ ಮಂಡಳಿ ಕ್ರಮ ಜರುಗಿಸಬೇಕು. ಇಲ್ಲದಿದ್ದಲ್ಲಿ ತೀವ್ರ ಹೋರಾಟ ಅನಿವಾರ್ಯ ಎಂದು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಹೊರಡಿಸಿದ ಅವರು, ಕೃಷ್ಣಾಪುರ ಶಾಲೆಯಲ್ಲಿ ರಕ್ಷಾ ಬಂಧನ ಕಿತ್ತು ಎಸೆಯಲಾಯಿತು. ಇದೀಗ ರಾಮನ ಕುರಿತಂತೆ ನಿಂದನೆ ಸಹಿಸಲು ಅಸಾಧ್ಯ. ಕಾಂಗ್ರೆಸ್ ಪಕ್ಷದ ನಾಯಕರೂ ಕೂಡ ಮೌನ ವಹಿಸಿದ್ದು, ಹಿಂದು ವಿರೋಧಿ ಭಾವನೆಯನ್ನು ತೋರಿಸಿದ್ದಾರೆ ಎಂದು ಟೀಕಿಸಿದ್ದಾರೆ.