ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಬಿ. ಇಡಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ್ದರ ಹಿನ್ನೆಲೆಯಲ್ಲಿ ಗುವಿವಿ ಮೌಲ್ಯಮಾಪನ ಕುಲಸಚಿವೆ ಮೇಧಾವಿನಿ ಕಟ್ಟಿ ಸೇರಿ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಸ್ನಾತಕೋತ್ತರ ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ಗುವಿವಿ ಆಡಳಿತ ಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.ಪ್ರತಿಭಟನೆಕಾರರು ಕುಲಸಚಿವರಿಗೆ ಮನವಿ ಸಲ್ಲಿಸಿ, ಅಕ್ರಮ ಎಸಗಿದ ಮೌಲ್ಯಮಾಪನ ಕುಲಸಚಿವೆ ಮೇಧಾವಿನಿ ಎಸ್. ಕಟ್ಟಿ, ಅಲ್ ಬ್ರದರ್ ಕಾಲೇಜಿನ ಪ್ರಿನ್ಸಿಪಾಲ್ ಮಲ್ಲಮ್ಮಾ ಮಂಠಾಳೆ, ಕಾಲೇಜಿನ ಲಿಖಿತ ಪರೀಕ್ಷೆಯ ಹಿರಿಯ ಮೇಲ್ವಿಚಾರಕ ಮೌನೇಶ್ ಅಕ್ಕಿ, ಇಂದಿರಾಗಾಂಧಿ ಕಾಲೇಜಿನ ಪ್ರಿನ್ಸಿಪಾಲ್ ಸಿದ್ದಣ್ಣಾ ಅನ್ನೂರ್, ಇಂದಿರಾಗಾಂಧಿ ಕಾಲೇಜಿನ ಅಧ್ಯಕ್ಷ ಮೌಲಾ ಪಟೇಲ್, ಬಿಈಡಿ ವಿಷಯ ವಿಷಯ ನಿರ್ವಾಹಕ ಸ್ವರೂಪ್ ಭಟ್ಟರ್ಕಿ, ಕಚೇರಿಯ ಅಧೀಕ್ಷಕರ ವಿರುದ್ಧ ಕಾನೂನು ರೀತಿಯಲ್ಲಿ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಅಧಿಸೂಚನೆಯ ಪ್ರಕಾರ ಪರೀಕ್ಷಾ ಕೇಂದ್ರಗಳನ್ನು ಬಿ. ಇಡಿ ಕೋರ್ಸ್‍ಗೆ ಸಂಬಂಧಿಸಿದಂತೆ ಕೇಂದ್ರಗಳನ್ನು ವಿಶ್ವವಿದ್ಯಾಲಯದ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿಲ್ಲ. ಏಕೆ? ಮತ್ತು ಕಾರಣವೇನು? ಎಂದು ಪ್ರಶ್ನಿಸಿದ ಅವರು, ಬಿ.ಇಡಿ ಪ್ರಥಮ ಸೆಮಿಸ್ಟರ್ ಮತ್ತು ತೃತೀಯ ಸೆಮಿಸ್ಟರ್ ಪರೀಕ್ಷೆಗಳಲ್ಲಿ ಪರೀಕ್ಷಾ ಕೇಂದ್ರ ನೀಡಿರುವ ನಗರದ ಇಂದಿರಾಗಾಂಧಿ ಶಿಕ್ಷಣ ಮಹಾವಿದ್ಯಾಲಯವು ನಗರದ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯಕ್ಕೆ ಪರೀಕ್ಷೆ ಕೇಂದ್ರ ಜೋಡಣೆ ಮಾಡಿ ಪರೀಕ್ಷಾ ಕೇಂದ್ರವನ್ನು ನೀಡಲಾಗಿತ್ತು.ಆದಾಗ್ಯೂ, ಜೂ.27ರಂದು ಪರಿಷ್ಕೃತ ಅಧಿಸೂಚನೆಯ ಪ್ರಕಾರ ಪರೀಕ್ಷೆ ಕೇಂದ್ರದ ಪಟ್ಟಿಯಲ್ಲಿ ಇಂದಿರಾಗಾಂಧಿ ಶಿಕ್ಷಣ ಮಹಾವಿದ್ಯಾಲಯದ ಪರೀಕ್ಷಾ ಕೇಂದ್ರ ಮರು ಜೋಡಣೆ ಮಾಡಿರುವ ಕಾರಣಗಳೇನು? ಮರು ಜೋಡಣೆ ಮಾಡಲು ಅಗತ್ಯವಿರುವ ಕ್ರಮಗಳೇನು?, ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರಿನ್ಸಿಪಾಲರು ವಿಶ್ವವಿದ್ಯಾಲಯಕ್ಕೆ ಪರೀಕ್ಷೆ ಕೇಂದ್ರದ ಜೋಡಣೆಯಾದ ಕುರಿತು ಯಾವುದಾದರೂ ಸಮಸ್ಯೆ ಹೇಳಿ ವಿಶ್ವವಿದ್ಯಾಲಯಕ್ಕೆ ಪತ್ರ ನೀಡಿದ್ದಾರೆಯೇ? ಅಥವಾ ಇಲ್ಲ ಎಂಬುದನ್ನು ತಿಳಿಸಬೇಕು ಎಂದು ಒತ್ತಾಯಿಸಿದರು.ಇಂದಿರಾಗಾಂಧಿ ಶಿಕ್ಷಣ ಮಹಾವಿದ್ಯಾಲಯವು ಬೇರೆ ಶಿಕ್ಷಣ ಮಹಾವಿದ್ಯಾಲಯಕ್ಕೆ ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿರುವ ವಿಷಯವನ್ನು ಸಂಪೂರ್ಣವಾದ ವಿವರದೊಂದಿಗೆ ಮಾಹಿತಿ ಒದಗಿಸಬೇಕು ಎಂದು ಅಗ್ರಹಿಸಿದ ಅವರು, ಉಚ್ಛ ನ್ಯಾಯಾಲಯವು ಕಳೆದ 2023ರ ಜು.21ರ ಆದೇಶದಂತೆ ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಸಚಿವರಿಗೆ ಸೂಚಿಸಿರುವುದೇನೆಂದರೆ 22 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅರ್ಹರಾಗಿರುವುದರಿಂದ ಅವರಿಗೆ ಪರೀಕ್ಷೆ ಬರೆಯಲು ವಿಶ್ವವಿದ್ಯಾಲಯದ ವತಿಯಿಂದ ಅನುಕೂಲ ಒದಗಿಸಬೇಕು ಎಂಬ ಅದೇಶ ನೀಡಲಾಗಿದೆ.
ಆದಾಗ್ಯೂ, ಮೌಲ್ಯಮಾಪನ ಕುಲಸಚಿವೆ ಮೇಧಾವಿನಿ ಎಸ್. ಕಟ್ಟಿ, ಬಿಈಡಿ ವಿಷಯ ವಿಷಯ ನಿರ್ವಾಹಕ ಸ್ವರೂಪ್ ಭಟ್ಟರ್ಕಿ ಮತ್ತು ಇತರೆ ಅಧಿಕಾರಿಗಳು ಕೂಡಿಕೊಂಡು ನ್ಯಾಯಾಲಯದ ಆದೇಶ ಧಿಕ್ಕರಿಸಿ ನಗರದ ಅಲ್ ಬ್ರದರ್ ಬಿ.ಇಡಿ ಕಾಲೇಜಿನಲ್ಲಿ 2021-2022ನೇ ಸಾಲಿನ ಇಂದಿರಾಗಾಂಧಿ ಶಿಕ್ಷಣ ಮಹಾವಿದ್ಯಾಲಯಕ್ಕೆ ಸೇರಿರುವ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ನಿಯಮಾವಳಿಗಳ ಪ್ರಕಾರ ಪ್ರವೇಶ ಪಡೆಯಲಾರದ 100 ವಿದ್ಯಾರ್ಥಿಗಳಿಗೆ ಬಿ.ಇಡಿ ಪ್ರಥಮ ಸೆಮಿಸ್ಟರ್ ಮತ್ತು ತೃತೀಯ ಸೆಮಿಸ್ಟರ್ ಪರೀಕ್ಷೆ ಬರೆಯುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದು ಕಾನೂನು ಬಾಹಿರ ಎಂದು ಅವರು ಆರೋಪಿಸಿದರು.ಅಕ್ರಮದ ಕುರಿತು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳುವಂತೆ ಒತ್ತಾಯಿಸಿದ ಅವರು, ಪ್ರವೇಶ ಪಡೆಯಲಾರದ ವಿದ್ಯಾರ್ಥಿಗಳಿಗೆ ಯಾವ ಮಾದರಿಯ ಹಾಲ್‍ಟಿಕೆಟ್ ನೀಡಲಾಗಿದೆ ಮತ್ತು ಹಾಲ್‍ಟಿಕೆಟ್‍ಗಳು ಯಾರು ನೀಡಿದ್ದಾರೆ? ಎಂಬುದನ್ನು ಪತ್ತೆ ಹಚ್ಚಿ ಅವರಿಗೂ ಸಹ ಅಮಾನತ್ತುಗೊಳಿಸುವಂತೆ ಆಗ್ರಹಿಸಿದರು.
ಸಂಘದ ಅಧ್ಯಕ್ಷ ಶಿವಶರಣ್ ಪಾಟೀಲ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅಣವೀರಗೌಡ ಬಿರಾದಾರ್, ನ್ಯಾಯವಾದಿ ಶಿವಮೂರ್ತಿ, ಶ್ರವಣಯೋಗಿ, ಕ್ರೂಸಿತ್ ಮಡಾಳಿ, ಹಣಮಂತರಾಯ್ ಬಿ., ಸೇರಿದಂತೆ ಹಲವಾರು ಸ್ನಾತಕೋತ್ತರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.