ನಕಲಿ ಐಎಎಸ್‌ ಮಿಥುನ್‌ಗೆ ಸಾಥ್‌

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಜಿಲ್ಲಾ ಸರ್ಜನ್‌ ಡಾ.ಬಿ.ಎಚ್‌.ಚಂದ್ರಶೇಖರ್‌ ಅವರು ಮೆಡಿಕಲ್‌ ಶಾಪ್‌ ಮಾಲೀಕರಿಂದ ಹಣ ವಸೂಲಿಗೆ ನಕಲಿ ಐಎಎಸ್‌ ಅಧಿಕಾರಿ ಮಿಥುನ್‌ಗೆ ಸಾಥ್‌ ನೀಡಿದ ಆರೋಪ ಕೇಳಿ ಬಂದಿರುವುದರಿಂದ ಈ ಬಗ್ಗೆ 2 ದಿನದಲ್ಲಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಎನ್‌.ಎಂ.ನಾಗರಾಜ್‌ ಸೂಚಿಸಿದ್ದಾರೆ.

ಕಳೆದ ಐದಾರು ತಿಂಗಳಿನಿಂದ ಜಿಲ್ಲೆಯಲ್ಲಿ ಮೆಡಿಕಲ್‌ ಶಾಪ್‌ ಮಾಲೀಕರಿಗೆ ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿ ಪೂರೈಕೆ ಟೆಂಡರ್‌ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರು. ವಸೂಲಿ ಮಾಡಿದ ನಕಲಿ ಐಎಎಸ್‌ ಅಧಿಕಾರಿ ಮಿಥುನ್‌ನನ್ನು ಮೆಡಿಕಲ್‌ ಶಾಪ್‌ ಮಾಲೀಕರಿಗೆ ಪರಿಚಯ ಮಾಡಿಸಿದ್ದು ಜಿಲ್ಲಾ ಸರ್ಜನ್‌ ಡಾ.ಬಿ.ಎಚ್‌.ಚಂದ್ರಶೇಖರ್‌ ಎಂಬ ಆರೋಪ ಕೇಳಿ ಬಂದಿದೆ. ಜತೆಗೆ, ಆರೋಗ್ಯ ಇಲಾಖೆ ಐಎಎಸ್‌ ಅಧಿಕಾರಿ ಎಂದು ಕೇಳಿಕೊಂಡಿದ್ದ ಮಿಥುನ್‌ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆ ಆಡಳಿತ ಚಟುವಟಿಕೆಯಲ್ಲಿ ಹಸ್ತಕ್ಷೇಪ ಮಾಡಿರುವ ಬಗ್ಗೆಯೂ ಆರೋಪವಿತ್ತು.

ಮಿಥುನ್‌ ಬಂಧನವಾಗಿ ನಕಲಿ ಎಂದು ತಿಳಿಯುತ್ತಿದ್ದಂತೆ ಜಿಲ್ಲಾ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ಸಹ ನಡೆಸಿ ಡಾ.ಚಂದ್ರಶೇಖರ್‌ ಅವರನ್ನು ಅಮಾನತುಗೊಳಿಸಿ, ಬಂಧಿಸಬೇಕೆಂದು ಆಗ್ರಹಿಸಿದ್ದರು.


ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದ ಜಿಲ್ಲಾಧಿಕಾರಿ ಎನ್‌.ಎಂ.ನಾಗರಾಜ್‌, ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳ (ಸರ್ಕಾರಿ ಮೆಡಿಕಲ್‌ ಕಾಲೇಜು) ಡೀನ್‌ ಹರೀಶ್‌ ಅವರಿಗೆ ಪತ್ರ ಬರೆದು ಪ್ರಕರಣದ ಕುರಿತು 2 ದಿನದಲ್ಲಿ ವರದಿ ನೀಡುವಂತೆ ಸೂಚಿಸಿದ್ದಾರೆ.

ಈ ನಡುವೆ ಶಾಸಕ ಎಚ್‌.ಡಿ.ತಮ್ಮಯ್ಯ ಆಸ್ಪತ್ರೆಯಲ್ಲಿ ಸ್ವಚ್ಛತೆ ನಿರ್ವಹಣೆಯಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಡಾ.ಬಿ.ಎಚ್‌. ಚಂದ್ರಶೇಖರ್ ಅವರನ್ನು ಸೇವೆಯಿಂದ ಬಿಡುಗಡೆ ಮಾಡುವಂತೆ ತಾಲೂಕು ಕೆಡಿಪಿ ಸಭೆಯಲ್ಲಿ ಫೋನ್‌ ಮಾಡಿ ವೈದ್ಯಕೀಯ ಕಾಲೇಜಿನ ಡೀನ್‌ಗೆ ನಿರ್ದೇಶಿಸಿದರು.

ಅದರಂತೆ ಡೀನ್‌ ಹರೀಶ್‌, ಬಿ.ಎಚ್‌.ಚಂದ್ರಶೇಖರ್‌ ಅವರನ್ನು ಜಿಲ್ಲಾ ಸರ್ಜನ್‌ ಹುದ್ದೆಯಿಂದ ಬಿಡುಗಡೆ ಮಾಡಿ, ಆ ಹುದ್ದೆಗೆ ಜಿಲ್ಲಾ ಆಸ್ಪತ್ರೆ ರುಕ್ಮಿಣಿಯಮ್ಮ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಸರ್ಜನ್‌ ಆಗಿರುವ ಡಾ.ಚಂದ್ರಶೇಖರ್‌ ಸಾಲಿಮಠ್‌ ಎಸ್‌ ಅನ್ನು ಪ್ರಭಾರಿಯಾಗಿ ನಿಯೋಜಿಸಲಾಗಿದೆ.

---ಬಾಕ್ಸ್‌---

ಪ್ರಕರಣದ ವರದಿ ನೀಡುವ ಹೊಣೆ ಸಾಲಿಮಠ್‌ಗೆ

ಪ್ರಕರಣದ ಕುರಿತು ವರದಿ ನೀಡುವಂತೆ ಮೆಡಿಕಲ್‌ ಕಾಲೇಜ್‌ ಡೀನ್‌ಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಡೀನ್‌ ಇದೀಗ, ಜಿಲ್ಲಾ ಸರ್ಜನ್‌ ಹುದ್ದೆಗೆ ಪ್ರಭಾರಿಯಾಗಿ ನಿಯೋಜನೆಗೊಂಡಿರುವ ಡಾ.ಚಂದ್ರಶೇಖರ್‌ ಸಾಲಿಮಠ್‌ ಎಸ್‌ ಅವರಿಗೆ ದಾಖಲೆಗಳನ್ನು ಪರಿಶೀಲಿಸಿ, ಅಗತ್ಯ ಮಾಹಿತಿ ಮಾಹಿತಿ ಸಂಗ್ರಹಿಸಿ ವರದಿ ನೀಡುವಂತೆ ನಿರ್ದೇಶಿಸಿದ್ದಾರೆ.

ಬುಧವಾರ ಸಂಜೆ ವೇಳೆಗೆ ಸಾಲಿಮಠ್‌ ವರದಿಯನ್ನು ಡೀನ್‌ ಹರೀಶ್‌ ಅವರಿಗೆ ಸಲ್ಲಿಸಲಿದ್ದಾರೆ. ಬುಧವಾರ ಸಂಜೆಯೇ ಅಥವಾ ಗುರುವಾರ ಜಿಲ್ಲಾಧಿಕಾರಿಗಳಿಗೆ ಡೀನ್‌ ಹರೀಶ್‌ ವರದಿ ನೀಡಲಿದ್ದಾರೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.ಫೋಟೋ ತುಂಬಾ ದೊಡ್ಡದಾಗಿ ಬೇಡ-- ಸಾಂದರ್ಭಿಕವಾಗಿ ಮಾತ್ರ ಬಳಕೆ ಮಾಡಿ