ಕೋವಿಡ್ ವೇಳೆಯ ಆರೋಪಗಳು ಕೇವಲ ಅಪಪ್ರಚಾರ

| Published : Mar 31 2024, 02:09 AM IST / Updated: Mar 31 2024, 02:10 AM IST

ಕೋವಿಡ್ ವೇಳೆಯ ಆರೋಪಗಳು ಕೇವಲ ಅಪಪ್ರಚಾರ
Share this Article
  • FB
  • TW
  • Linkdin
  • Email

ಸಾರಾಂಶ

ಕೊರೋನಾ ಸಮಯದಲ್ಲಿ ನಾನು ತಪ್ಪು ಮಾಡಿದ್ದೇನೆಂಬುದು ಕೇವಲ ರಾಜಕೀಯ ಅಪಪ್ರಚಾರ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾನು ತಂದ ಯೋಜನೆಗಳನ್ನೇ ಈಗಿನ ಸರ್ಕಾರ ಮುಂದುವರಿಸಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಹೇಳಿದರು.

ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ

ಕೊರೋನಾ ಸಮಯದಲ್ಲಿ ನಾನು ತಪ್ಪು ಮಾಡಿದ್ದೇನೆಂಬುದು ಕೇವಲ ರಾಜಕೀಯ ಅಪಪ್ರಚಾರ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾನು ತಂದ ಯೋಜನೆಗಳನ್ನೇ ಈಗಿನ ಸರ್ಕಾರ ಮುಂದುವರಿಸಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಹೇಳಿದರು.

ತ್ಯಾಮಗೊಂಡ್ಲು ಹೋಬಳಿಯ ಓಬಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವರ್ಷದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇದೆ. ಕೊರೋನಾ ಸಂದರ್ಭದಲ್ಲಿ ನಾನು ತಪ್ಪೆಸಗಿದ್ದರೆ ಕ್ರಮ ಕೈಗೊಳ್ಳಬೇಕಿತ್ತು. ಇದು ರಾಜಕೀಯ ಅಪಪ್ರಚಾರವಾಗಿದ್ದು, ಇದಕ್ಕೆ ನಾನೆಂದೂ ಅಂಜುವುದಿಲ್ಲ ಎಂದರು.

ಪಾಪದ ಕೆಲಸ ಮಾಡಿಲ್ಲ: ನಾನು ಆರೋಗ್ಯ ಸಚಿವನಾಗಿದ ಅವಧಿಯಲ್ಲಿ ತಂದ ಯೋಜನೆಗಳನ್ನು ಈಗಿನ ಸರ್ಕಾರ ಮುಂದುವರಿಸಿದೆ. ಡಯಾಲಿಸಿಸ್ ಸೈಕಲ್ ದುಪ್ಪಟ್ಟು, ನಮ್ಮ ಕ್ಲಿನಿಕ್, ನೇತ್ರ ಚಿಕಿತ್ಸೆ ಮೊದಲಾದ ಯೋಜನೆಗಳನ್ನು ಈಗಿನ ಸರ್ಕಾರ ಮುಂದುವರಿಸಿದೆ. ಪ್ರತಿ ಜಿಲ್ಲಾಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಸಿಗೆಗಳನ್ನು ಹೆಚ್ಚಿಸಲಾಗಿದೆ. ನಾನು ಆರೋಗ್ಯ ಸಚಿವನಾಗಿ ಕೆಲಸ ಮಾಡಿದ್ದಕ್ಕೆ ತೃಪ್ತಿ ಇದೆ. ಯಾರಿಗಾದರೂ ಅನುಮಾನವಿದ್ದರೆ ರಸ್ತೆಯಲ್ಲಿ ಫಲಕ ಹಿಡಿಯದೆ ತನಿಖೆ ನಡೆಸುವ ಸಂಸ್ಥೆಗೆ ನೀಡಲಿ ನನ್ನ ತಪ್ಪಿದ್ದರೆ ಶಿಕ್ಷೆ ಎದುರಿಸುತ್ತೇನೆ. ನಾನು ಅಂತಹ ಪಾಪದ ಕೆಲಸ ಮಾಡಿಲ್ಲ ಎಂದು ಹೇಳಿದರು.

ಉತ್ತಮ ವಾತಾವರಣವಿದೆ:

ನಾನು ಭೇಟಿ ನೀಡಿದೆಡೆಗಳಲ್ಲಿ ಬಿಜೆಪಿ ನಾಯಕರು ಹಾಗೂ ಜೆಡಿಎಸ್ ಮುಖಂಡರು ಉತ್ತಮ ಸಹಕಾರ ನೀಡುತ್ತಿದ್ದಾರೆ. ವಿಧಾನಸಭಾ ಚುನಾವಣೆಗೂ ಈ ಚುನಾವಣೆಗೂ ವಾತಾವರಣದಲ್ಲಿ ಬಹಳವೇ ವ್ಯತ್ಯಾಸವಿದೆ. ಎಲ್ಲರೂ ಕುಟುಂಬದ ಸದಸ್ಯರಾಗಿದ್ದು, ಅವರು ಕೇಳುವ ಪ್ರಶ್ನೆಗೆ ಉತ್ತರ ನೀಡುವುದು ನನ್ನ ಕರ್ತವ್ಯ. ಕೆಲವರು ಆಗಿರದ ಕೆಲಸಗಳ ಬಗ್ಗೆ ಪ್ರಶ್ನೆ ಕೇಳುತ್ತಾರೆ. ಇವೆಲ್ಲವನ್ನೂ ಮೀರಿ ನಾವು ಚುನಾವಣೆ ಎದುರಿಸುತ್ತಿದ್ದೇವೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಮುಂದೆ ಬೇರೆಯವರಿಗೂ ಅವಕಾಶ ಸಿಗಬಹುದು. ಯಾರೂ ಭಿನ್ನವಾಗಿ ಮಾತನಾಡದೆ ಮೋದಿಯವರನ್ನು ಗೆಲ್ಲಿಸೋಣ. ತಮ್ಮೆಲ್ಲರ ಸಹಕಾರ ಮುಖ್ಯ ಎಂದರು.

ಜೆಡಿಎಸ್ ಸಹಕಾರ ನೀಡಲಿದೆ:

ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಮಾತನಾಡಿ, ನಮ್ಮ ಪಕ್ಷದ ಹಿರಿಯ ನಾಯಕರು ಬಿಜೆಪಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಅವರ ನಿರ್ದೇಶನದಂತೆ ನಮ್ಮ ಪಕ್ಷದ ಮುಖಂಡರೆಲ್ಲರೂ ಮೈತ್ರಿ ಅಭ್ಯರ್ಥಿ ಡಾ.ಸುಧಾಕರ್ ಅವರಿಗೆ ಸಹಕಾರ ನೀಡಿ ಗೆಲ್ಲಿಸಿಲು ಶ್ರಮ ವಹಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಜಗದೀಶ್ ಚೌಧರಿ, ಮುಖಂಡರಾದ ಸಪ್ತಗಿರಿ ಶಂಕರ್ ನಾಯಕ್, ಹೊನ್ನೇನಹಳ್ಳಿ ರುದ್ರಣ್ಣ ಮತ್ತೀತ್ತರಿದ್ದರು.