ಮೋದಿ ಬಗ್ಗೆ ಅವಾಚ್ಯ ಶಬ್ದ ಬಳಸಿ ನಿಂದನೆ ಆರೋಪ

| Published : Mar 12 2024, 02:05 AM IST

ಮೋದಿ ಬಗ್ಗೆ ಅವಾಚ್ಯ ಶಬ್ದ ಬಳಸಿ ನಿಂದನೆ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನ ನರೇಂದ್ರ ಮೋದಿ ಬಗ್ಗೆ ಅವಾಚ್ಯ ಶಬ್ದ ಬಳಸಿ ನಿಂದನೆ ಆರೋಪದ ಮೇರೆಗೆ ಕಾಂಗ್ರೆಸ್ ಮುಖಂಡ, ಪೌರ ಸೇವಾ ನೌಕರರ ಸಂಘದ ಮಾಜಿ ಅಧ್ಯಕ್ಷ ಹಾಗೂ ಕಾರ್ಮಿಕ ಕಲ್ಯಾಣ ಮಂಡಳಿ ಉಪಾಧ್ಯಕ್ಷ ಜಿ.ಎಸ್.ಮಂಜುನಾಥ್ ಮೇಲೆ ಇಲ್ಲಿನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿತ್ರದುರ್ಗ: ಪ್ರಧಾನ ನರೇಂದ್ರ ಮೋದಿ ಬಗ್ಗೆ ಅವಾಚ್ಯ ಶಬ್ದ ಬಳಸಿ ನಿಂದನೆ ಆರೋಪದ ಮೇರೆಗೆ ಕಾಂಗ್ರೆಸ್ ಮುಖಂಡ, ಪೌರ ಸೇವಾ ನೌಕರರ ಸಂಘದ ಮಾಜಿ ಅಧ್ಯಕ್ಷ ಹಾಗೂ ಕಾರ್ಮಿಕ ಕಲ್ಯಾಣ ಮಂಡಳಿ ಉಪಾಧ್ಯಕ್ಷ ಜಿ.ಎಸ್.ಮಂಜುನಾಥ್ ಮೇಲೆ ಇಲ್ಲಿನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಜಿ.ಎಸ್.ಕಲ್ಲೇಶಯ್ಯ ನೀಡಿದ ದೂರನ್ನು ಪೊಲೀಸರು ದಾಖಲು ಮಾಡಿಕೊಂಡಿದ್ದಾರೆ.

ಹಿರಿಯೂರಿನಲ್ಲಿ ಭಾನುವಾರ ಆಯೋಜಿಸಿದ್ದ ಸಮುದಾಯ ಭವನ ಉದ್ಘಾಟನೆ ವೇಳೆ ಜಿ.ಎಸ್.ಮಂಜುನಾಥ್ ಸಿಲಿಂಡರ್ ದರ ನೂರು ರುಪಾಯಿ ಇಳಿಕೆ ಮಾಡಲಾದ ವಿಷಯ ಪ್ರಸ್ತಾಪಿಸಿದ್ದರು. ಚುನಾವಣೆ ವೇಳೆ ಸಿಲಿಂಡರ್‌ ದರ 100 ರು. ಕಡಿಮೆ ಮಾಡಿದ್ದಾನೆ. ನನಗೇನಾದರು ಸಿಕ್ಕರೆ ಕಾಲಿನಲ್ಲಿರುವುದು ತೆಗೆದು ಹೊಡೆಯುತ್ತಿದ್ದೆನು.

ನಾನು ಕಾಂಗ್ರೆಸ್ಸಿಗನಾಗಿ ಹೇಳುತ್ತಿಲ್ಲ. ದೇಶದ ಪ್ರಜೆಯಾಗಿ ಹೇಳುತ್ತಿದ್ದೇನೆ. ನೀವೆಲ್ಲರೂ ಪ್ರಶ್ನೆ ಮಾಡುವುದನ್ನು ಕಲಿಯಬೇಕು ಎಂದು ಪ್ರಧಾನಿ ಮೋದಿ ಹೆಸರು ಪ್ರಸ್ತಾಪಿಸದೆ ಕಿಡಿಕಾರಿದ್ದರು. ಮಂಜುನಾಥ್ ಮಾತುಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು.

ಜಿ.ಎಸ್.ಮಂಜುನಾಥ್ ಪ್ರಧಾನಿ ಹುದ್ದೆಗೆ ಅಪಮಾನ ಮಾಡಿದ್ದಾರೆ. ಶಾಂತಿ ಕದಡುವ ಹೇಳಿಕೆ ಇದಾಗಿದ್ದು ಕ್ರಮ ಕೈಗೊಳ್ಳುವಂತೆ ಕಲ್ಲೇಶಯ್ಯ ಪೊಲೀಸರಿಗೆ ದೂರು ನೀಡಿದ್ದಾರೆ.