Allegations of discrimination in drought relief: Farmers protest

-ಬಿಳ್ಹಾರ್, ಹೊನಗೇರಾ, ಹಾಲಗೇರಾ ಗ್ರಾಮಗಳ ರೈತರು ಜಿಲ್ಲಾಧಿಕಾರಿ ಕಚೇರಿ ಬಳಿ ಸರ್ಕಾರಕ್ಕೆ ಚೆಕ್‌ ನೀಡಿ ವಿನೂತನ ಪ್ರತಿಭಟನೆ

--

ಕನ್ನಡಪ್ರಭ ವಾರ್ತೆ ಯಾದಗಿರಿ

ರಾಜ್ಯ ಸರ್ಕಾರದಿಂದ ರೈತರಿಗೆ ಪರಿಹಾರ ವಿಚಾರದಲ್ಲಿ ತಾರತಮ್ಯ ಎಸಲಾಗಿದೆ ಎಂದು ಆರೋಪಿಸಿ, ಬಿಳ್ಹಾರ್, ಹೊನಗೇರಾ ಮತ್ತು ಹಾಲಗೇರಾ ಗ್ರಾಮಗಳ ರೈತರು ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆ ನಡೆಸಿದರಲ್ಲದೆ, ಸರ್ಕಾರದಿಂದ ತಮಗೆ ದೊರೆತ ಪರಿಹಾರದ ಚೆಕ್ ಜತೆಗೆ, ₹500 ಹೆಚ್ಚುವರಿ ಹಣ ಸೇರಿಸಿ, ಸರ್ಕಾರಕ್ಕೇ ತಮ್ಮದೊಂದು ಚೆಕ್ ನೀಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ಬಿಳ್ಹಾರದ ರೈತ ಸದಾಶಿವರೆಡ್ಡಿ ಪಾಟೀಲ ಅವರು ತಮಗೆ ಬಂದಿದ್ದ ₹1500 ಚೆಕ್ ಬದಲಿಗೆ ₹500 ಸೇರಿಸಿ, ಒಟ್ಟು ₹2 ಸಾವಿರ ಚೆಕ್ ಅನ್ನು ಸರ್ಕಾರಕ್ಕೆ ಕಳುಹಿಸಿ ಎಂದು ಜಿಲ್ಲಾಡಳಿತದ ಪರವಾಗಿ ಮನವಿ ಸ್ವೀಕರಿಸಲು ಆಗಮಿಸಿದ ಅಧಿಕಾರಿಗೆ ನೀಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ವಿರುದ್ಧ ರೈತರು ದಿಕ್ಕಾರದ ಘೋಷಣೆಗಳ ಕೂಗಿದರು.,

ಮಳೆಯಿಲ್ಲದೆ, ಬೆಳೆ ಹಾನಿಯಾಗಿ ರೈತರ ಬದುಕು ಕಷ್ಟಕ್ಕೆ ಸಿಲುಕಿದೆ. ಬರಗಾಲದಿಂದ ರೈತರು ಈಗಾಗಲೇ ಆರ್ಥಿಕ ನಷ್ಟವಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿ ತಿ ಬಂದಿದ್ದಾರೆ. ರೈತರ ಸಂಕಷ್ಟಕ್ಕೆ ಸ್ಪಂದಿಸಲು ಸರ್ಕಾರ ₹5 ಸಾವಿರ ಪರಿಹಾರ ಘೋಷಣೆ ಮಾಡಿದ್ದು ಸ್ವಾಗತ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಜಿಲ್ಲೆಯ ರೈತರಿಗೆ ಮೊದಲ ಕಂತಿನ ಪರಿಹಾರ ಹಣ ಬಿಡುಗಡೆ ಮಾಡಿದ್ದಾರಾದರೂ, ₹1,500 ನಿಂದ ₹2,500 ರವರೆಗೆ ಪರಿಹಾರ ಹಣ ಪಾವತಿ ಮಾಡಲಾಗುತ್ತಿದೆ. ರೈತರಿಗೆ ₹1500 ಹಣ ಪಾವತಿಸಿದ್ದು ಮೂಗಿಗೆ ತುಪ್ಪ ಹಂಚಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಪರಿಹಾರ ಹಣ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಾಗಿದೆ. ಈ ಪರಿಹಾರ ಹಣ ನಮಗೆ ಬೇಡ ಇದರ ಬದಲು ಪ್ರತಿ ಎಕರೆಗೆ ₹25 ಸಾವಿರ ರೂಪಾಯಿ ಹಣ ಪಾವತಿ ಮಾಡಬೇಕು. ರಾಜ್ಯದ ರೈತರ ಸಂಪೂರ್ಣ ಸಾಲಮನ್ನಾ ಮಾಡಿ ಅನ್ನದಾತರ ಜೀವ ಉಳಿಸುವ ಕೆಲಸ ಸರ್ಕಾರ ಮಾಡಬೇಕೆಂದು ರೈತರು ಆಗ್ರಹಿಸಿದರು.

ಈ ವೇಳೆ ಸಿದ್ದಾಮರೆಡ್ಡಿ ಪಾಟೀಲ್ ಹೊನಗೇರಾ, ಮಲ್ಲಪ್ಪ ಹುಳಗೋಳ, ಮಲ್ಲಿಕಾರ್ಜುನ ಕೊನಗೇರಾ, ರಾಜು ಕೊಳ್ಳಿ, ಭೀಮರಾಯ ಬಿಳ್ತಾರ, ಮರೆಪ್ಪ ಬಳ್ಳಾರ, ಸಾಬಣ್ಣಾ, ಮಲ್ಲಿಕಾರ್ಜುನ ಕೊಟಗೇರಾ ಸೇರಿದಂತೇ ಇತರರಿದ್ದರು.

....ಬಾಕ್ಸ್‌...

ರೈತರಿಗೆ ಸರ್ಕಾರದಿಂದ ಅನ್ಯಾಯ: ಉಮೇಶ ಮುದ್ನಾಳ್‌

ಬರಗಾಲದಿಂದ ಬೆಳೆ ಕಳೆದುಕೊಂಡ ರೈತರಿಗೆ ನೆರವಾಗಬೇಕಾದ ರಾಜ್ಯ ಸರ್ಕಾರವೇ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿದೆ. ಮುಖ್ಯಮಂತ್ರಿಗಳು ಘೋಷಿಸಿದಂತೆ ಮೊದಲನೇ ಕಂತಿನ ₹2,500 ಪರಿಹಾರ ನೀಡುವ ಬದಲು ರೈತರ ಬ್ಯಾಂಕ್ ಖಾತೆಗಳಿಗೆ ₹1,500ರಿಂದ ₹2,000 ಮಾತ್ರ ಜಮೆ ಮಾಡಲಾಗಿದ್ದು, ರೈತರಿಗೆ ಅನ್ಯಾಯ ಮಾಡಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಗಾರು ಹಂಗಾಮಿನಲ್ಲಿ ಉಂಟಾದ ಬರ ಪರಿಸ್ಥಿತಿಯಿಂದ ಯಾದಗಿರಿ ಜಿಲ್ಲೆಯಲ್ಲಿ 1.19 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ. ಜಿಲ್ಲೆಯಲ್ಲಿ 1,06,462 ಅರ್ಹ ರೈತರಿಗೆ ಒಟ್ಟು ₹17.43 ಕೋಟಿ ಇನ್‌ಪುಟ್ ಸಬ್ಸಿಡಿ ಪರಿಹಾರ ಅನುದಾನ ಬಿಡುಗಡೆ ಮಾಡಲಾಗಿದ್ದು, ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಹಣ ಜಮೆ ಮಾಡುವ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ ಎಂದರು.

ಆದರೆ, ಮುಖ್ಯಮಂತ್ರಿಗಳು ಮೊದಲನೇ ಕಂತಿನಲ್ಲಿ ಪ್ರತಿ ರೈತರಿಗೆ ₹2,500 ಹಾಗೂ ಎರಡನೇ ಕಂತಿನಲ್ಲಿ ಮತ್ತೆ ₹2,500 ನೀಡುವುದಾಗಿ ಭರವಸೆ ನೀಡಿದ್ದರು. ಇದೀಗ ರೈತರ ಖಾತೆಗಳಿಗೆ ₹2,500 ಬದಲಾಗಿ ಕೆಲವರಿಗೆ ₹1,500, ಇನ್ನು ಕೆಲವರಿಗೆ ₹2,000 ಮಾತ್ರ ಜಮೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸರ್ಕಾರದ ಘೋಷಣೆಗೂ ವಾಸ್ತವವಾಗಿ ರೈತರ ಖಾತೆಗೆ ಜಮೆಯಾಗಿರುವ ಪರಿಹಾರ ಮೊತ್ತಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎಂದು ದೂರಿದರು.

----

ಈಗಾಗಲೇ ಬರದಿಂದ ಬೆಳೆ ಕಳೆದುಕೊಂಡು ಸಾಲದ ಸುಳಿಯಲ್ಲಿ ಸಿಲುಕಿರುವ ರೈತರಿಗೆ ಸಮರ್ಪಕ ಪರಿಹಾರ ನೀಡಬೇಕಾದ ಸರ್ಕಾರ, ಪರಿಹಾರ ವಿತರಣೆಯಲ್ಲಿಯೇ ಗೊಂದಲ ಸೃಷ್ಟಿಸಿದೆ. ರೈತರ ವಿಚಾರದಲ್ಲಿ ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡುತ್ತಿದೆ. ಸರ್ಕಾರದ ಇಂತಹ ಕ್ರಮದಿಂದ ಸಂಕಷ್ಟದಲ್ಲಿರುವ ಅನ್ನದಾತರಿಗೆ ಮತ್ತಷ್ಟು ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರಿಗೆ ಘೋಷಿಸಿದ ಪೂರ್ಣ ಪರಿಹಾರ ಮೊತ್ತವನ್ನು ಯಾವುದೇ ವಿಳಂಬವಿಲ್ಲದೆ ಜಮೆ ಮಾಡಬೇಕು. ಪರಿಹಾರ ವಿತರಣೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ, ರೈತರಿಗೆ ಆಗಿರುವ ಅನ್ಯಾಯವನ್ನು ತಕ್ಷಣ ನಿವಾರಿಸಬೇಕು. ಈ ಕುರಿತು ರಾಜ್ಯ ಸರ್ಕಾರ ವಾರದೊಳಗೆ ಸೂಕ್ತ ಕ್ರಮ ಕೈಗೊಂಡು ರೈತರಿಗೆ ನ್ಯಾಯ ಒದಗಿಸದಿದ್ದರೆ ರೈತರ ಪರವಾಗಿ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಶ್ರೀಶೈಲ ಸೈದಾಪುರ, ಮಲ್ಲೇಶ್ ಪಸಪೂಲ್, ಹಣಮಂತ ವರ್ಕನಳ್ಳಿ, ಶಿವಕುಮಾರ್ ಯಾದಗಿರಿ, ಮಹೇಶ್ ಯಾದಗಿರಿ ಉಪಸ್ಥಿತರಿದ್ದರು.

-

11ವೈಡಿಆರ್11 : ರಾಜ್ಯ ಸರ್ಕಾರದಿಂದ ರೈತರಿಗೆ ಪರಿಹಾರ ವಿಚಾರದಲ್ಲಿ ತಾರತಮ್ಯ ಎಸಲಾಗಿದೆ ಎಂದು ಆರೋಪಿಸಿ, ಯಾದಗಿರಿಯ ಬಿಳ್ಹಾರ್, ಹೊನಗೇರಾ ಮತ್ತು ಹಾಲಗೇರಾ ಗ್ರಾಮಗಳ ರೈತರು ಬುಧವಾರ ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆ ನಡೆಸಿದರಲ್ಲದೆ, ಸರ್ಕಾರದಿಂದ ತಮಗೆ ದೊರೆತ ಪರಿಹಾರದ ಚೆಕ್ ಜತೆಗೆ, ₹500 ಹೆಚ್ಚುವರಿ ಹಣ ಸೇರಿಸಿ, ಸರ್ಕಾರಕ್ಕೇ ತಮ್ಮದೊಂದು ಚೆಕ್ ನೀಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

-

11ವೈಡಿಆರ್12 : ಬರ ಪರಿಹಾರದಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ, ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ಯಾದಗಿರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.