ತಾಲೂಕಿನ ಕೊಡೇಕಲ್ ಗ್ರಾಮದಲ್ಲಿ ಸರ್ಕಾರಿ ಗಾಯರಾಣು ಜಮೀನನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡಲಾಗುತ್ತಿದೆ. ಅಕ್ರಮ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಹುಣಸಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಹುಣಸಗಿ
ತಾಲೂಕಿನ ಕೊಡೇಕಲ್ ಗ್ರಾಮದಲ್ಲಿ ಸರ್ಕಾರಿ ಗಾಯರಾಣು ಜಮೀನನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡಲಾಗುತ್ತಿದೆ. ಅಕ್ರಮ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಹುಣಸಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ವೀರೇಶ ಗುಳಬಾಳ ಮಾತನಾಡಿ, ತಾಲೂಕಿನ ಕೊಡೇಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಕೊಡೇಕಲ್ ಗ್ರಾಮದ ಸೀಮಾಂತರದಲ್ಲಿರುವ ಸರ್ಕಾರಿ ಗಾಯರಾಣ ಜಮೀನು ಸರ್ವೆ ನಂ.2 ಹಿಸ್ಸಾ 3 ರಲ್ಲಿ ವಿಸ್ತೀರ್ಣ 1 ಎಕರೆ 5 ಗುಂಟೆ ಜಮೀನು ಸರ್ಕಾರಿ ಕಟ್ಟಡ ನಿರ್ಮಾಣಕ್ಕಾಗಿ ಮೀಸಲಿಟ್ಟಿದ್ದು, ಈ ಜಮೀನಿನಲ್ಲಿ ಕಾನೂನು ಬಾಹಿರವಾಗಿ ಸೈಟನ್ನು ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿ ಗ್ರಾಮ ಪಂಚಾಯತಿ ಪಿ.ಡಿ.ಓ ನೋಂದಣಿ ಮಾಡಿಕೊಟ್ಟು ಬಳಿಕ ಅವರಿಂದ ಸಾಕಷ್ಟು ಲಂಚ ಪಡೆದುಕೊಂಡು ಅವರಿಗೆ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಕಾನೂನು ಬಾಹಿರವಾಗಿ ಪರವಾನಗಿ ನೀಡಿದ್ದಾರೆ ಎಂದು ಆರೋಪಿಸಿದರು.
ಗಾಯರಾಣ ಜಾಗದಲ್ಲಿ ಕಾನೂನು ಬಾಹಿರವಾಗಿ ಮನೆಯ ಕಟ್ಟುತ್ತಿದ್ದಾರೆ. ಈ ಜಾಗದಲ್ಲಿ ಈಗಾಗಲೇ ಸರ್ಕಾರಿ ಕಟ್ಟಡಗಳಾದ ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಆಸ್ಪತ್ರೆ ಮತ್ತು ಪೂರ್ವಕ್ಕೆ ಸರ್ಕಾರಿ ಶಾಲೆ ಮತ್ತು ಪಶ್ಚಿಮಕ್ಕೆ ಗ್ರಾಮ ಪಂಚಾಯತಿ ಕಾರ್ಯಾಲಯ ಇದ್ದರೂ ಇವೆಲ್ಲವನ್ನು ಪರಿಗಣಿಸದೆ ಸದರಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಖಾಸಗಿ ವ್ಯಕ್ತಿಯ ಕಡೆಯಿಂದ ಲಂಚ ಪಡೆದುಕೊಂಡು ಅವರಿಗೆ ಕಾನೂನು ಬಾಹಿರವಾಗಿ ಕಟ್ಟಡ ಮಾಡುವುದಕ್ಕೆ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡಿದ್ದಾರೆ ಎಂದು ದೂರಿದರು.ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿ ಇಂತಹ ಭ್ರಷ್ಟ ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಿ ಅಕ್ರಮವಾಗಿ ಕಟ್ಟಡ ಕಟ್ಟುತ್ತಿರುವ ಮಾಲಿಕರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಸದರಿ ಗಾಯರಾಣ ಜಮೀನಿನಲ್ಲಿ ಸರ್ಕಾರದ ನಾಮಫಲಕ ಹಾಕಿ ಹದ್ದುಬಸ್ತು ಮಾಡಿಕೊಂಡು ಯಾರು ಪ್ರವೇಶ ಮಾಡದಂತೆ ಸರ್ಕಾರಿ ಜಮೀನು ರಕ್ಷಣೆ ಮಾಡಬೇಕೆಂದು ಒತ್ತಾಯಿಸಿದರು.
ಕ್ರಮ ಜರುಗಿಸುವಲ್ಲಿ ವಿಳಂಬ ಮಾಡಿದರೆ ಜಿಲ್ಲಾಧಿಕಾರಿ ಕಚೇರಿಯ ಎದುರಿನಲ್ಲೇ ಉಗ್ರ ಹೋರಾಟ ಮಾಡುವುದು ಖಂಡಿತ ಎಂದು ಎಚ್ಚರಕ್ಕೆ ನೀಡಿದರು. ನಿಂಗರಾಜ ಹೊಸಮನಿ, ಮಹಿಬೂಬ ಹಂದ್ರಾಳ ಸೇರಿದಂತೆ ಇತರರೂ ಇದ್ದರು.