ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿ, ಲಕ್ಷಾಂತರ ರುಪಾಯಿ ಪಡೆದು ವಂಚಿಸಿದ್ದಾರೆ ಎಂದು ಮಂಗಳೂರಿನ ರಂಗಭೂಮಿ ಕಲಾವಿದೆಯೊಬ್ಬರು ಆಲೂರು ತಾಲೂಕಿನ ಅಡಿಬೈಲು ಗ್ರಾಮದ ಬಿಜೆಪಿ ಮುಖಂಡ ದಿನೇಶ್ ಗೌಡ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ವಂಚನೆಗೆ ಅವರ ಪತ್ನಿ ಪೂರ್ಣಿಮಾ ಕೂಡ ಸಹಕರಿಸಿರುವ ಶಂಕೆಯಿದ್ದು, ಇಬ್ಬರ ವಿರುದ್ಧ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ವಿಮಾ ಪಾಲಿಸಿ ಸೇರಿದಂತೆ ವಿವಿಧ ನೆಪಗಳಲ್ಲಿಯೂ ಹಣ ಪಡೆದಿದ್ದಾರೆ. ಅವರ ಪತ್ನಿಗೂ ಈ ಸಂಬಂಧದ ಬಗ್ಗೆ ತಿಳಿದಿತ್ತು. ದಂಪತಿ ಯೋಜಿತವಾಗಿ ನನ್ನನ್ನು ವಂಚಿಸಿರುವುದಕ್ಕೆ ದಾಖಲೆಗಳಿವೆ ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿ, ಲಕ್ಷಾಂತರ ರುಪಾಯಿ ಪಡೆದು ವಂಚಿಸಿದ್ದಾರೆ ಎಂದು ಮಂಗಳೂರಿನ ರಂಗಭೂಮಿ ಕಲಾವಿದೆಯೊಬ್ಬರು ಆಲೂರು ತಾಲೂಕಿನ ಅಡಿಬೈಲು ಗ್ರಾಮದ ಬಿಜೆಪಿ ಮುಖಂಡ ದಿನೇಶ್ ಗೌಡ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ವಂಚನೆಗೆ ಅವರ ಪತ್ನಿ ಪೂರ್ಣಿಮಾ ಕೂಡ ಸಹಕರಿಸಿರುವ ಶಂಕೆಯಿದ್ದು, ಇಬ್ಬರ ವಿರುದ್ಧ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ನೊಂದ ಮಹಿಳೆ, 2018ರಲ್ಲಿ ಬೆಂಗಳೂರಿನಲ್ಲಿ ನಾಟಕ ಮತ್ತು ನಟನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾಗ ದಿನೇಶ್ ಗೌಡ ಪರಿಚಯವಾಗಿ ಬಳಿಕ ಪ್ರೀತಿ ಬೆಳೆದಿತ್ತು. ತಾನು ವಿವಾಹಿತೆಯಾಗಿದ್ದು, ಪತಿಯಿಂದ ದೂರವಾಗಿ ಮಗಳೊಂದಿಗೆ ಜೀವನ ನಡೆಸುತ್ತಿರುವುದು ತಿಳಿದಿದ್ದರೂ ಮದುವೆಯಾಗುವುದಾಗಿ ಭರವಸೆ ನೀಡಿದ್ದರು. 2023 ರಲ್ಲಿ ಅವರಿಗೆ ಈಗಾಗಲೇ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ ಎಂಬ ವಿಚಾರ ತಿಳಿದುಬಂದಿತ್ತು. ಪ್ರಶ್ನಿಸಿದಾಗ ಪತ್ನಿಗೆ ವಿಚ್ಛೇದನ ನೀಡಿ ಮದುವೆಯಾಗುವುದಾಗಿ ಮತ್ತೊಮ್ಮೆ ಭರವಸೆ ನೀಡಿದ್ದರು. ಕೊರೊನಾ ಅವಧಿಯಲ್ಲಿ ಹಂದಿ ಸಾಕಾಣಿಕೆ ಫಾರಂ ಆರಂಭಿಸುವುದಾಗಿ ಹೇಳಿ ಹಣದ ನೆರವು ಕೇಳಿದ್ದರು. ಅವರ ಮಾತು ನಂಬಿ ವ್ಯಾಪಾರ ಹಾಗೂ ವೈಯಕ್ತಿಕ ಅಗತ್ಯಗಳಿಗಾಗಿ ಹಂತ ಹಂತವಾಗಿ ಲಕ್ಷಾಂತರ ರುಪಾಯಿ ನೀಡಿದ್ದೇನೆ. ವಿಮಾ ಪಾಲಿಸಿ ಸೇರಿದಂತೆ ವಿವಿಧ ನೆಪಗಳಲ್ಲಿಯೂ ಹಣ ಪಡೆದಿದ್ದಾರೆ. ಅವರ ಪತ್ನಿಗೂ ಈ ಸಂಬಂಧದ ಬಗ್ಗೆ ತಿಳಿದಿತ್ತು. ದಂಪತಿ ಯೋಜಿತವಾಗಿ ನನ್ನನ್ನು ವಂಚಿಸಿರುವುದಕ್ಕೆ ದಾಖಲೆಗಳಿವೆ ಎಂದು ತಿಳಿಸಿದರು.
ಆಲೂರು ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದರು. ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳ ಸೂಚನೆಯಂತೆ ಶೂನ್ಯ ಎಫ್ಐಆರ್ ದಾಖಲಿಸಲಾಗಿತ್ತು. ನಂತರ ಪ್ರಕರಣ ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿತ್ತು. ಘಟನೆಗಳಿಗೆ ಸಂಬಂಧಿಸಿದ ಸ್ಥಳಗಳು ಹಾಸನ, ಸಕಲೇಶಪುರ ಮತ್ತು ಮಂಗಳೂರಿನಲ್ಲಿರುವುದರಿಂದ ಪ್ರಕರಣವನ್ನು ಸೂಕ್ತ ವ್ಯಾಪ್ತಿಗೆ ವರ್ಗಾಯಿಸುವಂತೆ ಪೊಲೀಸರು ಸೂಚಿಸಿದ್ದರು. ಕಳೆದ ತಿಂಗಳ ೩೧ ರಂದು ಪ್ರಕರಣದ ದಾಖಲೆಗಳನ್ನು ಅಂಚೆ ಮೂಲಕ ಆಲೂರು ಠಾಣೆಗೆ ಕಳುಹಿಸಲಾಗಿದೆ. ಆದರೆ ದಾಖಲೆಗಳು ತಲುಪಿದರೂ ಈವರೆಗೆ ತನಿಖೆ ಆರಂಭಿಸಿರುವ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಮದುವೆ ಭರವಸೆ ನೀಡಿ ದೈಹಿಕ ಹಾಗೂ ಆರ್ಥಿಕವಾಗಿ ವಂಚಿಸಿರುವ ದಿನೇಶ್ ಗೌಡ ಮತ್ತು ಅವರಿಗೆ ಸಹಕರಿಸಿರುವ ಶಂಕೆಯಿರುವ ಪತ್ನಿ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು ಎಂದು ನೊಂದ ಮಹಿಳೆ ಆಗ್ರಹಿಸಿದರು.