ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿಯಲ್ಲಿ ಗಡಿ ವಿವಾದದ ಹೆಸರಿನಲ್ಲಿ ಎಂಇಎಸ್ ಹಾಗೂ ಮರಾಠಿ ಮಾಧ್ಯಮಗಳು ಭಾಷಾ ವೈಷಮ್ಯ ಹುಟ್ಟಿಸುತ್ತಿವೆ ಎಂದು ಆರೋಪಿಸಿ ನಗರದ ಚನ್ನಮ್ಮ ವೃತ್ತದಲ್ಲಿ ಗುರುವಾರ ಪ್ರತಿಭಟಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಣದ 20ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಬಿಡುಗಡೆಗೊಳಿಸಿದರು.ನಗರದ ಕನ್ನಡ ಸಾಹಿತ್ಯ ಭವನ ಆವರಣದಿಂದ ಚನ್ನಮ್ಮ ವೃತ್ತಕ್ಕೆ ತೆರಳಿದ ಕಾರ್ಯಕರ್ತರು, ಈ ಹಿಂದೆ ಎಂಇಎಸ್ ಮಹಾನಗರ ಪಾಲಿಕೆಯಲ್ಲಿ ಮಹಾರಾಷ್ಟ್ರ ಪರ ನಿರ್ಣಯ ಮಂಡಿಸಿರುವುದನ್ನು ಖಂಡಿಸಿದರು. ಜತೆಗೆ ಈ ಬಾರಿ ಪಾಲಿಕೆಯಲ್ಲಿ ಕನ್ನಡಿಗರೇ ಮೇಯರ್ ಮತ್ತು ಉಪಮೇಯರ್ ಆಗಿದ್ದು ಬೆಳಗಾವಿ ಕರ್ನಾಟಕ ಅವಿಭಾಜ್ಯ ಅಂಗ ಎಂದು ನಿರ್ಣಯ ಮಂಡಿಸಬೇಕು ಎಂದು ಆಗ್ರಹಿಸಿ, ಕೆಲಹೊತ್ತು ಧರಣಿ ನಡೆಸಿದರು. ಇದೇ ವೇಳೆ ಮರಾಠಿ ಮಾಧ್ಯಮಗಳು ಇದರ ವಿರುದ್ಧ ಅಪಪ್ರಚಾರ ಮಾಡುವ ಮೂಲಕ ಕನ್ನಡ ದ್ವೇಷ ಭಾವನೆ ಮೂಡಿಸುತ್ತಿವೆ ಎಂದು ಆರೋಪಿಸಿ ಮುತ್ತಿಗೆ ಹಾಕಲು ಹೊರಟ ಕಾರ್ಯಕರ್ತರನ್ನು ವೃತ್ತದಲ್ಲೇ ಪೊಲೀಸರು ತಡೆದು ತಮ್ಮ ವಶಕ್ಕೆ ಪಡೆದುಕೊಂಡರು.
ಈ ಹಿಂದೆ ವಿಜಯ ಮೋರೆ ಮೇಯರ್ ಆಗಿದ್ದಾಗ ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ, ಬಾಲ್ಕಿ ಮತ್ತಿತರೆ ಪ್ರದೇಶ ಮಹಾರಾಷ್ಟ್ರಕ್ಕೆ ಸೇರಬೇಕೆಂಬ ನಿರ್ಣಯ ಕೈಗೊಂಡಿದ್ದರು. ಇದೇ ನಿರ್ಣಯವನ್ನು ಸುಪ್ರೀಂ ಕೋರ್ಟ್‌ನಲ್ಲಿ ಮಹಾರಾಷ್ಟ್ರ ಪೂರಕ ದಾಖಲೆಯಾಗಿ ಸಲ್ಲಿಸಿದೆ. ಇದು ಕರ್ನಾಟಕದ ಹಿತಾಸಕ್ತಿಗೆ ಧಕ್ಕೆ ತರುವಂತಿದೆ. ಹೀಗಾಗಿ, ಇದರ ವಿರುದ್ಧವಾಗಿ ಈಗ ಪಾಲಿಕೆಯಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ, ಗಡಿ ವಿವಾದಕ್ಕೆ ಮಹಾಜನ ವರದಿಯೆ ಅಂತಿಮ ಎಂದು ಸರ್ವಾನುಮತದ ನಿರ್ಣಯ ಮಂಡಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿಜಿಲ್ಲಾಧ್ಯಕ್ಷ ವಾಜೀದ ಹಿರೆಕುಡಿ, ಜಗನ್ನಾಥ ಬಾಮಣೆ, ಇರ್ಫಾನ ತಾಬೊಲಿ, ಅಣ್ಣಾಸಾಬ ತೇಲಸಂಗ, ನಾಗೇಶ ಕೊಪ್ಪದ ಇತರರಿದ್ದರು.