ಕನ್ನಡ ಭವನಕ್ಕೆ ನೀಡಲಾಗಿರುವ ಮಹಾನಗರ ಪಾಲಿಕೆಯ 25 ಗುಂಟೆ ಜಾಗ ದುರುಪಯೋಗದ ಕುರಿತು ಕನ್ನಡ ಜಾಗೃತಿ ಸಮಿತಿ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕನ್ನಡ ಭವನಕ್ಕೆ ನೀಡಲಾಗಿರುವ ಮಹಾನಗರ ಪಾಲಿಕೆಯ 25 ಗುಂಟೆ ಜಾಗ ದುರುಪಯೋಗದ ಕುರಿತು ಕನ್ನಡ ಜಾಗೃತಿ ಸಮಿತಿ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು.

ಸದಸ್ಯ ರಾಜಶೇಖರ ತಳವಾರ ಅವರು, ಕನ್ನಡ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಗುತ್ತಿಗೆ ನೀಡಲಾಗಿದ್ದ ಜಾಗದಲ್ಲಿ ಯಾವುದೇ ಕಾರ್ಯಕ್ರಮಗಳನ್ನು ನಡೆಸದೇ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ವ್ಯಾಪಾರ ಚಟುವಟಿಕೆ ನಡೆಸಲಾಗುತ್ತಿದೆ. ಇದರಿಂದ ಜಾಗವನ್ನು ನೀಡಿರುವ ಮೂಲ ಉದ್ದೇಶವೇ ಪ್ರಶ್ನಾರ್ಥಕವಾಗುತ್ತದೆ ಎಂದರು.ಇದಕ್ಕೆ ಉತ್ತರಿಸಿದ ಸದಸ್ಯ ಕಾರ್ಯದರ್ಶಿ ಸಿದ್ದು ಹುಲ್ಲೋಳಿ, ಜಿಲ್ಲಾಧಿಕಾರಿ 13.01.2026ರಂದು ಪಾಲಿಕೆಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಅದರಂತೆ 17.01.2026ರಂದು ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಸಮಿತಿ ಬೆಳಗಾವಿಗೆ ನೋಟಿಸ್ ನೀಡಲಾಗಿದ್ದು, ಸಮಂಜಸ ಉತ್ತರ ದೊರಕದ ಕಾರಣ ಎರಡನೇ ನೋಟಿಸ್ ಕೂಡ ಜಾರಿ ಮಾಡಲಾಗಿದೆ ಎಂದರು.ಇದಾದ ನಂತರ ವಿಷಯವನ್ನು ಜಿಲ್ಲಾಧಿಕಾರಿಗೆ ವರದಿ ಮಾಡಲಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಡಳಿತಾಧಿಕಾರಿಗಳಿಂದಲೂ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಪ್ರಸ್ತುತ ಪ್ರಕರಣ ಇಲಾಖಾ ಮಟ್ಟದಲ್ಲಿ ವಿಚಾರಣೆಯಲ್ಲಿದ್ದು, ಅಲ್ಲಿಂದ ನಿರ್ದೇಶನ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ರಾಜಶೇಖರ ತಳವಾರ ಅವರು, ಸರ್ಕಾರದ ಆಸ್ತಿ ದುರುಪಯೋಗವಾಗದಂತೆ ತಕ್ಷಣವೇ ಜಾಗೆಯನ್ನು ವಶಪಡಿಸಿಕೊಳ್ಳಬೇಕೆಂದು ಒತ್ತಾಯಿಸಿದರು.ಸಭೆಯಲ್ಲಿ ಬೆಳಗಾವಿ ಬಸ್ ನಿಲ್ದಾಣದ ಎದುರು ಅನ್ಯರಾಜ್ಯದವರಿಗೆ ಮಳಿಗೆ ನಿರ್ಮಿಸಲು ಅನುಮತಿ ನೀಡಿರುವುದರಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂಬ ವಿಚಾರವೂ ಪ್ರಸ್ತಾಪಗೊಂಡಿತು. ಮಳಿಗೆಗಳ ಹಂಚಿಕೆಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕೆಂದು ಸದಸ್ಯರು ಒತ್ತಾಯಿಸಿದರು. ಈ ಕುರಿತು ಪರಿಶೀಲನೆ ನಡೆಸುವುದಾಗಿ ಕನ್ನಡ ಜಾಗೃತಿ ಸಮಿತಿ ಅಧ್ಯಕ್ಷ, ಪಾಲಿಕೆ ಆಯುಕ್ತ ಕಾರ್ತಿಕ ಎಂ, ಭರವಸೆನೀಡಿದರು.ಸದಸ್ಯ ಡಾ.ರವೀಂದ್ರ ತೋಟಿಗೇರ ಅವರು, ಕೆರೆ-ಬಾವಿ, ಸಾರ್ವಜನಿಕ ಮೈದಾನ ಹಾಗೂ ಉದ್ಯಾನಗಳಿಗೆ ಕನ್ನಡ ಸಾಹಿತಿಗಳು ಮತ್ತು ಹೋರಾಟಗಾರರ ಹೆಸರುಗಳನ್ನು ಇಡಬೇಕು ಹಾಗೂ ಪಾಲಿಕೆ ವ್ಯಾಪ್ತಿಯ ಸ್ಥಳಗಳ ಹೆಸರುಗಳನ್ನು ಕನ್ನಡದಲ್ಲಿ ನಾಮಕರಣ ಮಾಡುವ ಅಗತ್ಯವಿದೆ ಎಂದು ತಿಳಿಸಿದರು. ಈ ಕುರಿತು ಮುಂದಿನ ಪರಿಷತ್ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲು ಅವಕಾಶವಿದೆ ಎಂದು ಸದಸ್ಯ ಕಾರ್ಯದರ್ಶಿ ತಿಳಿಸಿದರು.ಇದೇ ವೇಳೆ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದು, ಮಹಾಜನ ವರದಿಯನ್ನು ಅಂತಿಮಗೊಳಿಸಿ ಗೊತ್ತುವಳಿ ಅಂಗೀಕರಿಸಬೇಕೆಂದು ಸದಸ್ಯರು ಒತ್ತಾಯಿಸಿದರು. ಇದರಿಂದ ಗಡಿಭಾಗದಲ್ಲಿ ಕನ್ನಡವನ್ನು ಬಲಪಡಿಸಲು ಸಹಕಾರಿ ಆಗುತ್ತದೆ ಎಂದು ಅಭಿಪ್ರಾಯ ವ್ಯಕ್ತವಾಯಿತು.ಸಭೆಯಲ್ಲಿ ಸದಸ್ಯೆ ಮಹಾದೇವಿ ಹುಣಸೀಬೀಜ ಅವರು, ಶಾಲಾ-ಕಾಲೇಜುಗಳಲ್ಲಿ ಕನ್ನಡೇತರ ಉಪನ್ಯಾಸಕರ ನೇಮಕದಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕನ್ನಡ ಜಾಗೃತಿ ಸಮಿತಿ ಸದಸ್ಯೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಉಪಸ್ಥಿತರಿದ್ದರು.