ಕನ್ನಡಪ್ರಭ ವಾರ್ತೆ ಸಕಲೇಶಪುರ

ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಖ್ಯಾಧಿಕಾರಿ ಜಾತಿ ನಿಂದನೆ ತಡೆ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ತಾಲ್ಲೂಕು ವಕೀಲರ ಸಂಘದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ವಕೀಲರ ಸಂಘದ ಅಧ್ಯಕ್ಷ ಯಶವಂತ್ ಮಾತನಾಡಿ, ಸಂಘದ ಸದಸ್ಯ ಅಭಿಜ್ಞಾನ್ ಅವರಿಗೆ ಸೇರಿರುವ ಸಕಲೇಶಪುರ ನಗರದ ಸುಭಾಷ್ ಮೈದಾನದ ಸಮೀಪದ ಆಸ್ತಿಗೆ ಸಂಬಂಧಿಸಿದಂತೆ ಹೈಕೋರ್ಟ್ ಎರಡು ವರ್ಷಗಳ ಹಿಂದೆಯೇ ಅವರ ಹೆಸರಿಗೆ ಖಾತೆ ಮಾಡಿಕೊಡುವಂತೆ ಪುರಸಭೆಗೆ ನಿರ್ದೇಶನ ನೀಡಿದ್ದರೂ, ಪುರಸಭಾ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು. ಹೈಕೋರ್ಟ್ ಆದೇಶಕ್ಕೂ ಮನ್ನಣೆ ನೀಡದ ಅಧಿಕಾರಿಗಳ ನಡೆ ನ್ಯಾಯಾಂಗ ವ್ಯವಸ್ಥೆಗೆ ಅವಮಾನವಾಗಿದೆ ಎಂದರು.

ಖಾತೆಗಾಗಿ ಅಭಿಜ್ಞಾನ್ ಅವರು ತಮ್ಮ ತಂದೆಯ ಮೂಲಕ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರಕಲಿಲ್ಲ. ಇದರಿಂದ ಬೇಸತ್ತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶಾಂತಿಯುತ ಧರಣಿ ನಡೆಸಬೇಕಾಯಿತು. ಮೂರನೇ ದಿನ ಜಿಲ್ಲಾಧಿಕಾರಿಗಳ ಸೂಚನೆಯಂತೆ ಕಚೇರಿಗೆ ಕರೆಸಿಕೊಂಡ ಪುರಸಭೆ ಮುಖ್ಯಾಧಿಕಾರಿ ಮಹೇಶ್ವರಪ್ಪ ಅವರು, ‘ಈ ರೀತಿ ತೊಂದರೆ ನೀಡಿದರೆ ಅಟ್ರಾಸಿಟಿ ಪ್ರಕರಣ ದಾಖಲಿಸುತ್ತೇನೆ’ ಎಂದು ಬೆದರಿಕೆ ಹಾಕಿದ್ದಾರೆ ಎಂದು ಯಶವಂತ್ ಆರೋಪಿಸಿದರು. ಈ ಕುರಿತು ಅಭಿಜ್ಞಾನ್ ಅವರು ಎಸ್ಪಿಯವರಿಗೆ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ನಂತರ ಮಹೇಶ್ವರಪ್ಪ ಅವರು ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕಾಯ್ದೆ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಐಪಿಸಿ 353ರಂತೆ ಪ್ರಕರಣ ದಾಖಲಿಸಿದ್ದಾರೆ. ಇದು ಅಧಿಕಾರ ಹಾಗೂ ಜಾತಿಯನ್ನು ದುರುಪಯೋಗಪಡಿಸಿಕೊಂಡು ಉದ್ದೇಶಪೂರ್ವಕವಾಗಿ ಸುಳ್ಳು ಪ್ರಕರಣ ದಾಖಲಿಸಿದ ಸ್ಪಷ್ಟ ಉದಾಹರಣೆ ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದ್ದು, ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳು ಈ ಪ್ರಕರಣಕ್ಕೆ ತಕ್ಷಣ ಗಮನ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಗುರುವಾರದೊಳಗೆ ಬೇಡಿಕೆಗಳು ಈಡೇರದಿದ್ದರೆ, ಹಾಸನ ಜಿಲ್ಲೆಯ ಎಲ್ಲಾ ವಕೀಲರು ಸಕಲೇಶಪುರದಲ್ಲಿ ಒಗ್ಗೂಡಿ ಬೃಹತ್ ಪ್ರತಿಭಟನೆ ನಡೆಸಲಿದ್ದು, ಸ್ಥಳೀಯ ಸಂಘಸಂಸ್ಥೆಗಳ ಬೆಂಬಲವೂ ಪಡೆಯಲಾಗುವುದು. ಸಂಬಂಧಿಸಿದ ಅಧಿಕಾರಿಯನ್ನು ಅಮಾನತು ಅಥವಾ ವರ್ಗಾವಣೆ ಮಾಡುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.


ವಕೀಲ ವೇಣು ಮಾತನಾಡಿ, ಯಾವುದೇ ಕಾಯ್ದೆಯ ಉದ್ದೇಶ ಶೋಷಿತರ ರಕ್ಷಣೆಯಾಗಿರಬೇಕು. ಆದರೆ ಇಲ್ಲಿ ಅಟ್ರಾಸಿಟಿ ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡು ಸುಳ್ಳು ಪ್ರಕರಣ ದಾಖಲಿಸಲಾಗಿದ್ದು, ಇದು ಸಮಾಜದಲ್ಲಿ ಜಾತಿ ವೈಷಮ್ಯ ಉಂಟುಮಾಡುವ ಅಪಾಯಕಾರಿ ಪ್ರಯತ್ನವಾಗಿದೆ. ಇಂತಹ ಅಧಿಕಾರಿಗಳ ವಿರುದ್ಧ ಮೇಲಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಕಲೇಶಪುರ ಕೋರ್ಟ್‌ನಿಂದ ಆರಂಭವಾದ ಪ್ರತಿಭಟನಾ ಜಾಥಾ ಹಳೆ ಬಸ್ ನಿಲ್ದಾಣದ ಸಮೀಪ ಮಾನವ ಸರಪಳಿ ನಿರ್ಮಿಸಿ ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಘೋಷಣೆ ಕೂಗಿದರು. ಬಳಿಕ ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ವಾಣಿ, ಸಹ ಕಾರ್ಯದರ್ಶಿ ವಿನಯ್, ಖಜಾಂಚಿ ಪದ್ಮನಾಭ ಸೇರಿದಂತೆ ಹಿರಿಯ ಹಾಗೂ ಕಿರಿಯ ವಕೀಲರು ಉಪಸ್ಥಿತರಿದ್ದರು.