ರೈತರಿಗೆ ವಿತರಿಸುವ ಗೊಬ್ಬರ ಕಾಳಸಂತೆಯಲ್ಲಿ ಮಾರಾಟ ಆರೋಪ

| Published : Oct 01 2025, 01:01 AM IST

ರೈತರಿಗೆ ವಿತರಿಸುವ ಗೊಬ್ಬರ ಕಾಳಸಂತೆಯಲ್ಲಿ ಮಾರಾಟ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಸರ್ಕಾರ ರೈತರಿಗೆ ನೀಡುವ ಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಮೂಲಕ ಇಡೀ ರೈತ ಸಮೂಹಕ್ಕೆ ಅನ್ಯಾಯ ಮಾಡಿದೆ. ಅಲ್ಲದೆ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ ಎಂದು ಧಾರವಾಡ ಕೆಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಗಂಗಣ್ಣ ಸಾತಣ್ಣವರ ಹೇಳಿದರು.

ಶಿಗ್ಗಾಂವಿ: ಕಾಂಗ್ರೆಸ್ ಸರ್ಕಾರ ರೈತರಿಗೆ ನೀಡುವ ಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಮೂಲಕ ಇಡೀ ರೈತ ಸಮೂಹಕ್ಕೆ ಅನ್ಯಾಯ ಮಾಡಿದೆ. ಅಲ್ಲದೆ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ ಎಂದು ಧಾರವಾಡ ಕೆಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಗಂಗಣ್ಣ ಸಾತಣ್ಣವರ ಹೇಳಿದರು.ಪಟ್ಟಣದಲ್ಲಿ ನಡೆದ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ೨೬ ಸಹಕಾರಿ ಸಂಘಗಳಿಗೂ ನೇರ ನೇರವಾಗಿ ಡೀಲರ್‌ಗಳಿಂದ ಗೊಬ್ಬರ ಬರುತ್ತಿರುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಹಾಗಾಗಿ ತಾಲೂಕಿನಲ್ಲಿ ರೈತರಿಗೆ ಗೊಬ್ಬರದ ಅಭಾವ ಆಗಿರಲಿಲ್ಲ. ತಾಲೂಕಿನ ತಾಲೂಕಿನ ೧೫ ಗ್ರಾಮಗಳಲ್ಲಿ ಗೋದಾಮು ನಿರ್ಮಿಸಿಕೊಟ್ಟು ರೈತರ ಬೆನ್ನೆಲುಬಾಗಿ ನಿಂತಿದ್ದರು. ಇಂದಿನ ಸರ್ಕಾರದ ಅವಧಿಯಲ್ಲಿ ಗೊಬ್ಬರ ಕಳ್ಳತನ ಮಾಡಿ ತಾಲೂಕಿನ ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದರು. ಮುಖಂಡ ನವೀನ ಸವಣೂರ ಮಾತನಾಡಿ, ಅಭಿವೃದ್ಧಿ ವಂಚಿತ ಕ್ಷೇತ್ರವೆಂದು ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ ಹೇಳಿಕೆ ನೀಡಿರುವುದು ಸರಿಯಲ್ಲ. ಅವರು ಹಿಂದಿನ ಅಭಿವೃದ್ಧಿ ಪರ ಯೋಜನೆಗಳ ಬಗ್ಗೆ ತಿಳಿದುಕೊಂಡು ಮಾತನಾಡಬೇಕು. ಜನತೆಗೆ ಸುಳ್ಳು ಹೇಳಿಕೆ ನೀಡಬಾರದು ಎಂದರು. ಸಂಸದ ಬಸವರಾಜ ಬೊಮ್ಮಾಯಿ ಅವರು ಕಳೆದ ೪ ಅವಧಿಯಲ್ಲಿ ಶಾಸಕರಾಗಿದ್ದಾಗ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದಾರೆ. ಈಗ ಪಠಾಣ ಅವರು ಉದ್ಘಾಟಿಸುತ್ತಿರುವ ಕಾಮಗಾರಿಗಳು ಬೊಮ್ಮಾಯಿ ಅವರ ಅವಧಿಯಲ್ಲಿ ಆರಂಭವಾಗಿದ್ದವು ಎನ್ನುವುದನ್ನು ಮರೆಯಬಾರದು. ೨೦ ವರ್ಷಗಳಲ್ಲಿನ ಪ್ರತಿ ಅಭಿವೃದ್ಧಿ ಯೋಜನೆಗಳ ಬಗ್ಗೆ ದಾಖಲೆಗಳೊಂದಿಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ ಎಂದರು.ಕ್ಷೇತ್ರದಲ್ಲಿ ೮ ವಸತಿ ಶಾಲೆ, ಜಾನಪದ ವಿಶ್ವವಿದ್ಯಾಲಯ, ಪಾಲಿಟೆಕ್ನಿಕ್ ಕಾಲೇಜ್, ಪಶು ವೈದ್ಯರ ತರಬೇತಿ ಕಾಲೇಜ್, ಮಹಿಳಾ ಗಾರ್ಮೆಂಟ್ಸ್, ಅಂಬೇಡ್ಕರ್ ಸರ್ಕಾರಿ ಕಚೇರಿಗಳ ಸಂಕೀರ್ಣ ಕಟ್ಟಡ, ಪ್ರವಾಸಿ ಮಂದಿರ, ತುಂತುರು ನೀರಾವರಿ ಯೋಜನೆ, ಕ್ಷೇತ್ರದಲ್ಲಿ ಶಾಲೆ, ಕಾಲೇಜುಗಳಿಗೆ ನೂತನ ಕಟ್ಟಡ, ರಸ್ತೆ, ಹೊಲಗದ್ದೆಗಳಿಗೆ ಹೋಗುವ ರಸ್ತೆಗಳು, ೩ ಪಟ್ಟಣಗಳಿಗೆ ಪ್ರತ್ಯೇಕ ಕುಡಿಯುವ ನೀರಿನ ಯೋಜನೆ ಸೇರಿದಂತೆ ನೂರಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ ಎಂದು ಮಾಹಿತಿ ನೀಡಿದರು.ಪುರಸಭೆ ಮಾಜಿ ಅಧ್ಯಕ್ಷ ಶಿವಪ್ರಸಾದ ಸುರಗಿಮಠ ಮಾತನಾಡಿ, ಶಾಸಕ ಯಾಸೀರಖಾನ ಪಠಾಣ ಅವರು ಬಸವರಾಜ ಬೊಮ್ಮಾಯಿಯವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂಥಹ ಹೇಳಿಕೆಗಳು ಬೊಮ್ಮಾಯಿ ಅಭಿವೃದ್ದಿ ಮಾಡಿದ ಕೆಲಸಗಳು ಹೇಳಿಕೆಗೆ ಉತ್ತರಿಸುತ್ತವೆ ಎಂದರು. ಪುರಸಭೆ ಸದಸ್ಯ ದಯಾನಂದ ಅಕ್ಕಿ, ಮುಖಂಡರಾದ ಎಪಿಎಂಸಿ ಮಾಜಿ ಉಪಾಧ್ಯಕ್ಷ ಕರೆಪ್ಪ ಕಟ್ಟಿಮನಿ, ರೈತ ಮುಖಂಡ ಗಂಗಣ್ಣ ಗಡ್ಡೆ, ಹೊಸೂರ ಗ್ರಾಂ.ಪಂ. ಮಾಜಿ ಅಧ್ಯಕ್ಷ ಚನ್ನಪ್ಪ ಬಿಂದ್ಲಿ ಎಂ.ಎಸ್. ಪಾಟೀಲ, ಬಿಜೆಪಿ ಹಲವು ಮುಖಂಡರು ಇದ್ದರು.