ವಿವಿ ಕುಲಪತಿಗಳು ವಿವಿ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಮನಬಂದಂತೆ ವರ್ಗಾವಣೆ ಮಾಡಿದ್ದಲ್ಲದೇ, ಕೆಲವೇ ದಿನ ಹಾಗೂ ತಿಂಗಳುಗಳಲ್ಲಿ ಮತ್ತೆ ಅದೇ ಜಾಗಕ್ಕೆ ಮರು ವರ್ಗಾವಣೆಗಳನ್ನು ಸಹ ಮಾಡಿಕೊಂಡಿರುವ ಉದಾಹರಣೆಗಳಿವೆ.
ಧಾರವಾಡ:
ಇಲ್ಲಿಯ ಕೃಷಿ ವಿಶ್ವವಿದ್ಯಾಲಯದಲ್ಲಿ ಮನವಿ ಆಧಾರಿತ ಹಾಗೂ ವಿವಿ ಹಿತದ ದೃಷ್ಟಿಗಿಂತ ವೈಯಕ್ತಿಕ ಹಿತಾಸಕ್ತಿಗೆ ಅನುಗುಣವಾಗಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗಾವಣೆ ನಡೆಯುತ್ತಿದೆ ಎಂದು ವಿಶ್ವವಿದ್ಯಾಲಯಕ್ಕೆ ಸರ್ಕಾರದಿಂದ ನಾಮನಿರ್ದೇಶನಗೊಂಡ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ರವಿಕುಮಾರ ಮಾಳಗೇರ, ಮಾಲತೇಶ ಸಾಗೋಟಿ, ವೀರಣಗೌಡ ಪೊಲೀಸಗೌಡರ, ಪಾರ್ವತಿ ಕುರ್ಲೆ, ಬಸವರಾಜ ಕುಂದಗೋಳಮಠ ಆರೋಪಿಸಿದರು.ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿ ಕುಲಪತಿಗಳು ವಿವಿ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಮನಬಂದಂತೆ ವರ್ಗಾವಣೆ ಮಾಡಿದ್ದಲ್ಲದೇ, ಕೆಲವೇ ದಿನ ಹಾಗೂ ತಿಂಗಳುಗಳಲ್ಲಿ ಮತ್ತೆ ಅದೇ ಜಾಗಕ್ಕೆ ಮರು ವರ್ಗಾವಣೆಗಳನ್ನು ಸಹ ಮಾಡಿಕೊಂಡಿರುವ ಉದಾಹರಣೆಗಳಿವೆ. ಇದು ವಿವಿ ಆರ್ಥಿಕ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರಿದ್ದು, ಸಮರ್ಪಕ ಬೋಧನೆ, ಸಂಶೋಧನೆ ನಡೆಸಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ ಎಂದರು.
ಕೃಷಿ ವಿವಿಯಲ್ಲಿ ತಮ್ಮ ಅವಧಿಯಲ್ಲಿ ಆಗಿರುವ ವರ್ಗಾವಣೆಗಳ ಪಟ್ಟಿ ನೀಡುವಂತೆ ಇತ್ತೀಚಗೆ ನಡೆದ 81ನೇ ಆಡಳಿತ ಮಂಡಳಿ ಸಭೆಯಲ್ಲಿ ಲಿಖಿತವಾಗಿ ಕೇಳಿದರೂ ಕುಲಪತಿಗಳು ಪಟ್ಟಿ ನೀಡುತ್ತಿಲ್ಲ. ಕುಲಪತಿಗಳ ನಿರ್ದೇಶನದಂತೆ ವಿವರ ನೀಡಲು ಅಸಹಾಯಕತೆ ವ್ಯಕ್ತಪಡಿಸಿ ಕಾರ್ಯನಿರ್ವಹಣಾ ಆಡಳಿತಾಧಿಕಾರಿ ಪ್ರೊ.ಎ.ಜಿ. ಕೊಪ್ಪದ ತಮ್ಮ ಹೆಚ್ಚುವರಿ ಹುದ್ದೆಯಿಂದ ಹಿಂದೆ ಸರಿದ ಘಟನೆಯೂ ನಡೆದಿದೆ. ಮಾರ್ಗಸೂಚಿ ಇಲ್ಲದೇ ನಡೆಯುತ್ತಿರುವ ವರ್ಗಾವಣೆ ಹಾಗೂ ವರ್ಗಾವಣೆ ವಿವರ ಬಹಿರಂಗಪಡಿಸದೇ ಇರುವುದು ಭ್ರಷ್ಟಾಚಾರದ ಸಂಶಯದ ಜತೆಗೆ ಇದರಿಂದ ವಿವಿ ಆರ್ಥಿಕ ಹೊಡೆತ ಸಹ ಬೀಳುತ್ತದೆ. ಮೇ ತಿಂಗಳ ವರೆಗೆ ಪ್ರೊ. ಪಿ.ಎಲ್. ಪಾಟೀಲ ಅವರ ಅಧಿಕಾರಾವಧಿ ಇದ್ದು, ಇನ್ಮುಂದೆ ವರ್ಗಾವಣೆ ಮಾಡಬಾರದು ಎಂದು ಆಗ್ರಹಿಸಿದರು. ನಿಯಮಾವಳಿ ಪ್ರಕಾರವೇ ವರ್ಗಾವಣೆ..ವಿಶ್ವವಿದ್ಯಾಲಯದ ಹಿತದೃಷ್ಟಿ ಹಾಗೂ ಮನವಿ ಆಧಾರಿತ ವರ್ಗಾವಣೆ ಮಾಡಲು ತಮಗೆ ಸಂಪೂರ್ಣ ಅಧಿಕಾರವಿದೆ. ವಿವಿಯಲ್ಲಿ ಆಗಿರುವ ವರ್ಗಾವಣೆಗಳ ವಿರುದ್ಧ ಯಾವುದೇ ಸಿಬ್ಬಂದಿ, ನೌಕರರ ಸಂಘಕ್ಕೂ ಮನವಿ ಮಾಡಿಲ್ಲ. ನಿವೃತ್ತಿ ಹಾಗೂ ಹೊಸ ನೇಮಕಾತಿ ಇಲ್ಲದ ಹಿನ್ನೆಲೆಯಲ್ಲಿ ಶೇ. 50ರ ಆಧಾರದಲ್ಲಿ ವಿವಿ ನಡೆಸುತ್ತಿದ್ದು, ವರ್ಗಾವಣೆಗಳು ಸಾಮಾನ್ಯ ಪ್ರಕ್ರಿಯೆ. ಈ ವಿಷಯದಲ್ಲಿ ವ್ಯವಸ್ಥಾಪನಾ ಮಂಡಳಿ ಹಸ್ತಾಕ್ಷೇಪ ಬರಬಾರದು. ನಿಯಮಾವಳಿ ಪ್ರಕಾರವೇ ವರ್ಗಾವಣೆಗಳಾಗಿವೆ.
ಪ್ರೊ. ಪಿ.ಎಲ್. ಪಾಟೀಲ, ಕೃಷಿ ವಿವಿ ಕುಲಪತಿ