ಸಾರಾಂಶ
ಯುವತಿಗೆ ಬಸ್‌ನಲ್ಲಿ ಕಿರುಕುಳ ನೀಡಿ ಯುವಕನಿಗೆ ಥಳಿಸಿದ ಪ್ರಕರಣದಲ್ಲಿ ಸೋಮವಾರ ಅಮಾಯಕರನ್ನು ಬಂಧಿಸಲಾಗಿದೆ ಎಂದು ಆರೋಪಿಸಿ ಮಂಗಳವಾರ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಸುಳ್ಯ ಪೋಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಸುಳ್ಯ
ಯುವತಿಗೆ ಬಸ್‌ನಲ್ಲಿ ಕಿರುಕುಳ ನೀಡಿ ಯುವಕನಿಗೆ ಥಳಿಸಿದ ಪ್ರಕರಣದಲ್ಲಿ ಸೋಮವಾರ ಅಮಾಯಕರನ್ನು ಬಂಧಿಸಲಾಗಿದೆ ಎಂದು ಆರೋಪಿಸಿ ಮಂಗಳವಾರ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಸುಳ್ಯ ಪೋಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಲಾಯಿತು.ಸುಳ್ಯ ಬಸ್ ನಿಲ್ದಾಣದಲ್ಲಿ ಸೇರಿದ ಹಿಂದೂ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು ಹಾಗೂ ಎಬಿವಿಪಿ ಕಾರ್ಯಕರ್ತರು ಮೆರವಣಿಗೆಯ ಮೂಲಕ ಗಾಂಧಿನಗರ ಕಲ್ಕುಡ ದೈವಸ್ಥಾನಕ್ಕೆ ಹೋದರು.
ಅಲ್ಲಿ ವಿಶ್ವ ಹಿಂದೂ ಪರಿಷತ್ ಸಂಚಾಲಕ ಸೋಮಶೇಖರ ಪೈಕ ಹಾಗೂ ನ.ಪಂ. ಸದಸ್ಯ ವಿನಯ ಕುಮಾರ ಕಂದಡ್ಕ ‘ಸಂಘಟನೆಯ ಕಾರ್ಯಕರ್ತರ ಮೇಲೆ ಸುಳ್ಳು ಕೇಸು ದಾಖಲಿಸಿದ ಅಧಿಕಾರಿಗಳಿಗೆ ದೈವವೇ ಶಿಕ್ಷೆ ನೀಡಬೇಕು’ ಎಂದು ಪ್ರಾರ್ಥನೆ ಸಲ್ಲಿಸಿದರು. ಬಳಿಕ ಅಲ್ಲಿಂದ ಮೆರವಣಿಗೆಯಲ್ಲಿ ಸುಳ್ಯ ಪೋಲೀಸ್ ಠಾಣೆ ಎದುರು ಬರಲಾಯಿತು.ಪೋಲೀಸ್ ಠಾಣೆಯ ಎದುರು ಸೇರಿದ ನಾಯಕರು ಹಾಗೂ ಎಬಿವಿಪಿ ಕಾರ್ಯಕರ್ತರು ಪೋಲೀಸರ ವಿರುದ್ಧ ಘೋಷಣೆ ಕೂಗಿದರು. ಕಾರ್ಯಕರ್ತರು ಪೋಲೀಸ್ ಆವರಣ ಪ್ರವೇಶಿಸದಂತೆ ಪೋಲೀಸ್ ಠಾಣೆಯ ಗೇಟಿಗೆ ಪೋಲೀಸರು ಅಡ್ಡಲಾಗಿ ನಿಂತಿದ್ದರು.
ಈ ವೇಳೆ ಮಾತನಾಡಿದ ಎ.ವಿ. ತೀರ್ಥರಾಮ, ಕಾಂಗ್ರೆಸ್ ಸರ್ಕಾರದ ಒತ್ತಡಕ್ಕೆ ಮಣಿದು ಪೋಲೀಸ್ ಇಲಾಖೆ ಈ ರೀತಿ ಮಾಡಿದ್ದು, ಹಿಂದೂ ಸಮಾಜಕ್ಕೆ ಆದ ಅನ್ಯಾಯ ಸರಿಪಡಿಸಬೇಕು ಎಂದರು.ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ ಪ್ರಕರಣದಲ್ಲಿ ತಪ್ಪೆಸಗಿದ ಸುಳ್ಯ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿದರು. ವಿಶ್ವ ಹಿಂದೂ ಪರಿಷತ್ ನಾಯಕ ನವೀನ್ ನೆರಿಯ, ಬಜರಂಗದಳದ ಪ್ರಮುಖ ಹರಿಪ್ರಸಾದ್ ಎಲಿಮಲೆ ಮಾತನಾಡಿದರು.ಪ್ರತಿಭಟನಾ ಸ್ಥಳಕ್ಕೆ ಬಂದ ಡಿವೈಎಸ್ ಪಿ ಅರುಣ್ ನಾಗೇಗೌಡ, ಘಟನೆಯ ಕುರಿತು ಕೇಸು ದಾಖಲಾಗಿದೆ. ಆ ಕಡೆಯವನ ಮೇಲೂ ಕೇಸು ದಾಖಲಾಗಿದೆ. ನಾವು ತನಿಖೆ ನಡೆಸುತ್ತಿದ್ದೇವೆ. ನಿಮ್ಮ ಅಹವಾಲುಗಳನ್ನು ಆಲಿಸಿದ್ದು ಈ ಕುರಿತು ಮೇಲಾಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದರು.
ನ.ಪಂ. ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಮತ್ತಿತರರಿದ್ದರು.