ಸಾರಾಂಶ
ಗ್ರಾಮೀಣ ಪ್ರದೇಶದ ಬಡಜನರು ಬಡತನದಲ್ಲಿ ಸಾಗಬೇಕಿದೆ. ಕಾಯ್ದೆಯನ್ನು ಸಮರ್ಪಕವಾಗಿ ಜಾರಿ ಮಾಡುವಲ್ಲಿ ಅಧಿಕಾರಿಗಳು ಸೋತಿದ್ದು, ಬಡಜನರು ತಮ್ಮ ದೈನಂದಿನ ಜೀವನ ನಿರ್ವಹಣೆ ಮಾಡಲು ಪರಿತಪಿಸುವಂತಾಗಿದೆ ಎಂದು ನೋವು ತೋಡಿಕೊಂಡರು.
ಹಲಗೂರು: ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕೆಲಸ ಮಾಡಿದ ಕಾರ್ಮಿಕರಿಗೆ ಕಡಿಮೆ ಕೂಲಿ ಪಾವತಿ ಮಾಡಲಾಗಿದೆ ಎಂದು ಆರೋಪಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಸದಸ್ಯರು ಬ್ಯಾಡರಹಳ್ಳಿ ಗ್ರಾಪಂ ಎದುರು ಪ್ರತಿಭಟನೆ ನಡೆಸಿದರು.
ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಂ.ಶಿವಮಲ್ಲಯ್ಯ ಮಾತನಾಡಿ, ಉದ್ಯೋಗ ಖಾತರಿ ಕಾಯಿದೆಯು ಬಡಜನರ ಸಂಜೀವಿನಿಯಾಗಿದೆ. ಆರಂಭದ ದಿನಗಳಿಂದಲೂ ಕಡಿಮೆ ಕೂಲಿ ಪಾವತಿಸುವುದು, ಎನ್.ಎಂ.ಆರ್ ಶೂನ್ಯ ಮಾಡುವುದು ಸೇರಿ ಹಲವು ತೊಂದರೆಗಳನ್ನು ಎದುರಿಸಬೇಕಾಗಿದೆ ಎಂದರು.ಗ್ರಾಮೀಣ ಪ್ರದೇಶದ ಬಡಜನರು ಬಡತನದಲ್ಲಿ ಸಾಗಬೇಕಿದೆ. ಕಾಯ್ದೆಯನ್ನು ಸಮರ್ಪಕವಾಗಿ ಜಾರಿ ಮಾಡುವಲ್ಲಿ ಅಧಿಕಾರಿಗಳು ಸೋತಿದ್ದು, ಬಡಜನರು ತಮ್ಮ ದೈನಂದಿನ ಜೀವನ ನಿರ್ವಹಣೆ ಮಾಡಲು ಪರಿತಪಿಸುವಂತಾಗಿದೆ ಎಂದು ನೋವು ತೋಡಿಕೊಂಡರು.
ಹಲಗೂರು ವ್ಯಾಪ್ತಿಯಲ್ಲಿ ಮಳೆ ಇಲ್ಲದೇ ಬರಗಾಲದಿಂದ ತತ್ತರಿಸಿರುವ ನೂರಾರು ಕುಟುಂಬಗಳಿಗೆ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಕೆಲಸವೇ ಆಶ್ರಯ ನೀಡಿದೆ. ಆದರೆ, ನರೇಗಾ ಇಂಜಿನಿಯರ್ ಅರುಣ್ ಕುಮಾರ್ ಮತ್ತು ಅಧಿಕಾರಿಗಳು ಇಲ್ಲ ಸಲ್ಲದ ಸಬೂಬು ಹೇಳಿ, ದಿನಕ್ಕೆ 260 ರು. ಮಾತ್ರ ಕೂಲಿ ಪಾವತಿಸಿರುವುದನ್ನು ಖಂಡಿಸಿದರು.ಕೂಡಲೇ ಎಲ್ಲಾ ಕೂಲಿಕಾರರಿಗೂ ಸರ್ಕಾರದ ನಿಯಮದಂತೆ 349 ರು. ಕೂಲಿ ಪಾವತಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ
ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹನುಮೇಶ್, ಹಲಗೂರು ಹೋಬಳಿ ಘಟಕದ ಅಧ್ಯಕ್ಷೆ ಕುಂತೂರು ಲಕ್ಷ್ಮೀ, ಕಾರ್ಯದರ್ಶಿ ಗೊಲ್ಲರಹಳ್ಳಿ ಲಕ್ಷ್ಮೀ, ಮುಖಂಡರಾದ ರಾಮಣ್ಣ, ಕಾಯಕ ಬಂಧು ತೊಳಸಮ್ಮ, ರಾಜಮ್ಮ, ಮಹದೇವಮ್ಮ, ಮಂಜುಳ, ಗೋಪಿ, ಶಿವಕುಮಾರ್ ಸೇರಿ ಹಲವರು ಭಾಗವಹಿಸಿದ್ದರು.