ಸಾರಾಂಶ
ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನಡಿ ನೇತ್ರಾವತಿ ಜಲಾಭಿಮುಖ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಆದರೆ ಇಲ್ಲಿ ಸಿಆರ್‌ಝಡ್ ನಿಯಮವನ್ನು ಉಲ್ಲಂಘಿಸಿ ಕಾಮಗಾರಿ ನಡೆಸಲಾಗುತ್ತಿದೆ ಎಂಬುದಾಗಿ ಎನ್‌ಜಿಟಿ ಸುಮೋಟೋ ಪ್ರಕರಣ ದಾಖಲಿಸಿತ್ತು.
ಕನ್ನಡಪ್ರಭ ವಾರ್ತೆ ಮಂಗಳೂರು
ನೇತ್ರಾವತಿ ವಾಟರ್ ಫ್ರಂಟ್ ಯೋಜನೆಗೆ ಸಂಬಂಧಿಸಿ ಸಿಆರ್‌ಝಡ್ ನಿಯಮ ಉಲ್ಲಂಘನೆಯಾಗಿರುವ ಆರೋಪದ ಬಗ್ಗೆ ವರದಿ ನೀಡುವಂತೆ ಚೆನ್ನೈನ ರಾಷ್ಟ್ರೀಯ ಹಸಿರು ಪೀಠ (ಎನ್‌ಜಿಟಿ) ಆದೇಶದ ಮೇರೆಗೆ ದ.ಕ. ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ. ಜೂ.24ರೊಳಗೆ ಸಮಿತಿ ಎನ್‌ಜಿಟಿಗೆ ವರದಿ ಸಲ್ಲಿಸಲಿದೆ.ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನಡಿ ನೇತ್ರಾವತಿ ಜಲಾಭಿಮುಖ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಆದರೆ ಇಲ್ಲಿ ಸಿಆರ್‌ಝಡ್ ನಿಯಮವನ್ನು ಉಲ್ಲಂಘಿಸಿ ಕಾಮಗಾರಿ ನಡೆಸಲಾಗುತ್ತಿದೆ ಎಂಬುದಾಗಿ ಎನ್‌ಜಿಟಿ ಸುಮೋಟೋ ಪ್ರಕರಣ ದಾಖಲಿಸಿತ್ತು. ನಿಯಮ ಉಲ್ಲಂಘನೆಯಾಗಿರುವ ಬಗ್ಗೆ ಪರಿಶೀಲನೆ ನಡೆಸಿದ ವರದಿ ನೀಡುವಂತೆ ಜಿಲ್ಲಾಡಳಿತ ಸೇರಿದಂತೆ ಸಂಬಂಧಪಟ್ಟ ಸಂಸ್ಥೆಗಳಿಗೆ ನೋಟೀಸ್ ನೀಡಿತ್ತು. ಪರಿಶೀಲನೆ ನಡೆಸಿ ವರದಿಯನ್ನು ಜೂ.24ರೊಳಗೆ ಸಲ್ಲಿಸುವಂತೆಯೂ ಎನ್‌ಜಿಟಿ ತನ್ನ ಆದೇಶದಲ್ಲಿ ತಿಳಿಸಿತ್ತಲ್ಲದೆ, ಮುಂದಿನ ಆದೇಶದವರೆಗೆ ಅಲ್ಲಿ ನಡೆಸಲಾಗುತ್ತಿರುವ ಕಾಮಗಾರಿಗೆ ತಡೆ ನೀಡಿತ್ತು. ಅದರಂತೆ ಜಿಲ್ಲಾಡಳಿತದ ಪರವಾಗಿ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಕರಾವಳಿ ಸಂಶೋಧನೆಗಾಗಿನ ರಾಷ್ಟ್ರೀಯ ಕೇಂದ್ರ (ನ್ಯಾಷನಲ್ ಸೆಂಟರ್ ಫೋರ್ ಕೋಸ್ಟಲ್ ರಿಸರ್ಚ್- ಎನ್‌ಸಿಸಿಆರ್) ಅಧಿಕಾರಿಗಳನ್ನು ಒಳಗೊಂಡ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ಸಂದರ್ಭ ಸ್ಥಳೀಯರು ಹಾಗೂ ಪರಿಸರ ಹೋರಾಟಗಾರರು ಭೇಟಿ ನೀಡಿದ್ದು, ಜಿಲ್ಲಾಧಿಕಾರಿಯ ಬಳಿ ಯೋಜನೆಯ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು. ಈ ಭೇಟಿ ಎನ್‌ಜಿಟಿ ಆದೇಶದಂತೆ ನಿಯಮ ಉಲ್ಲಂಘನೆಯ ಪರಿಶೀಲನೆಗಾಗಿ ಮಾತ್ರವೇ ನಡೆಸಲಾಗಿದ್ದು, ಸಾರ್ವಜನಿಕ ವಿಚಾರಣೆ ಅಲ್ಲ ಎಂಬುದಾಗಿ ಅಲ್ಲಿ ಸೇರಿದ್ದವರನ್ನು ಸಮಾಧಾನ ಪಡಿಸಲೆತ್ನಿಸಿದರು. ಪರಿಸರಕ್ಕೆ ಮಾರಕವಾಗಿ ಯೋಜನೆ ರೂಪಿಸಲಾಗಿದ್ದು, ಸ್ಥಳೀಯರನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ ಎಂದು ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳು ಆರೋಪಿಸಿದ್ದರು. ನೇತ್ರಾವತಿ ಜಲಾಭಿಮುಖ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಯಲ್ಲಿ ನಿಯಮ ಉಲ್ಲಂಘನೆಯಾಗಿರುವುದು ಕಂಡು ಬಂದಿದೆ. ಮುಂದಿನ ವಿಚಾರಣೆವರೆಗೆ ಇಲ್ಲಿ ಯಾವುದೇ ರೀತಿಯ ಕಾಮಗಾರಿ ನಡೆಸಬಾರದು ಎಂದು ಮೇ 31ರಂದು ಎನ್‌ಜಿಟಿ ನಡೆಸಿರುವ ವಿಚಾರಣೆಯ ವೇಳೆ ಆದೇಶ ನೀಡಿತ್ತು. ಅಲ್ಲದೆ ಸಂಬಂಧಪಟ್ಟ ಸಮಿತಿ ಜೂ. 24ರೊಳಗೆ ನಿಯಮ ಉಲ್ಲಂಘನೆಯಾಗಿರುವ ಕುರಿತಂತೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ತಿಳಿಸಿತ್ತು. ನೇತ್ರಾವತಿ ನದಿ ದಡದಲ್ಲಿ ಮೋರ್ಗನ್ಸ್‌ಗೇಟ್‌ನಿಂದ ಬೋಳಾರದವರೆಗೆ 2.1 ಕಿ.ಮೀ.ವರೆಗೆ ವಾಯು ವಿಹಾರ ಪ್ರದೇಶವಾಗಿ ಅಭಿವೃದ್ಧಿ ಪಡಿಸುವುದು ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಇದೀಗ ಎನ್‌ಜಿಟಿ ಈ ಯೋಜನೆಯಡಿ ನಿಯಮವನ್ನು ಉಲ್ಲಂಘಿಸಿರುವ ಬಗ್ಗೆ ಪತ್ರಿಕಾ ವರದಿ ಹಾಗೂ ಎನ್‌ಇಸಿಎಫ್ (ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ)ನ ದೂರಿನ ಮೇರೆಗೆ ಎನ್‌ಜಿಟಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಜೂ.24ರೊಳಗೆ ವರದಿ ಸಲ್ಲಿಕೆ: ಎನ್‌ಜಿಟಿಯು ಈ ಯೋಜನೆಯ ಕುರಿತಂತೆ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಆಧಾರದಲ್ಲಿ ಸುಮೋಟೋ ಪ್ರಕರಣ ದಾಖಲಿಸಿಕೊಂಡಿದೆ. ಸಿಆರ್‌ಝೆಡ್ ಅನುಮತಿ ಪಡೆದು ಈ ಯೋಜನೆ ಆರಂಭಿಸಲಾಗಿತ್ತು. ಆದರೆ ಆ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸುವಂತೆ ಎನ್‌ಜಿಟಿ ತನ್ನ ಆದೇಶದಲ್ಲಿ ತಿಳಿಸಿತ್ತು. ಅದರಂತೆ ಎನ್‌ಸಿಸಿಆರ್‌ನ ಅಧಿಕಾರಿಗಳನ್ನು ಒಳಗೊಂಡ ಸಮಿತಿ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಅಲ್ಲಿ ಸೇರಿದ್ದ ಪರಿರಾಸಕ್ತರು ಹಾಗೂ ಸ್ಥಳೀಯರು ಅವರ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದಾರೆ. ಸಮಿತಿಯು ಜೂ. 24ರೊಳಗೆ ತನ್ನ ವರದಿಯನ್ನು ಎನ್‌ಜಿಟಿಗೆ ಸಲ್ಲಿಸಲಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.