ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ 96 ಕೋಟಿ ಒಡೆಯ : ಚಿನ್ನವಿಲ್ಲ

| Published : Apr 05 2024, 01:02 AM IST / Updated: Apr 05 2024, 06:40 AM IST

Dr. CN Manjunath

ಸಾರಾಂಶ

ರಾಮನಗರ: ಜಯದೇವ ಹೃದ್ರೋಗ ಕೇಂದ್ರದಲ್ಲಿ ನಿರ್ದೇಶಕರಾಗಿ ನಿವೃತ್ತರಾಗಿ ರಾಜಕಾರಣ ಪ್ರವೇಶಿಸಿರುವ ಡಾ.ಸಿ.ಎನ್.ಮಂಜುನಾಥ್ ತಮ್ಮ ಕುಟುಂಬ ಒಟ್ಟು 96 ಕೋಟಿ ರು. ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

ರಾಮನಗರ: ಜಯದೇವ ಹೃದ್ರೋಗ ಕೇಂದ್ರದಲ್ಲಿ ನಿರ್ದೇಶಕರಾಗಿ ನಿವೃತ್ತರಾಗಿ ರಾಜಕಾರಣ ಪ್ರವೇಶಿಸಿರುವ ಡಾ.ಸಿ.ಎನ್.ಮಂಜುನಾಥ್ ತಮ್ಮ ಕುಟುಂಬ ಒಟ್ಟು 96 ಕೋಟಿ ರು. ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಡಾ.ಮಂಜುನಾಥ್ ಅವರ ಚರ ಮತ್ತು ಸ್ಥಿರ ಆಸ್ತಿ 43.63 ಕೋಟಿ ರು. ಬೆಲೆ ಬಾಳುತ್ತದೆ. ಇವರ ಪತ್ನಿ ಅನುಸೂಯ ಅವರ ಚರ ಮತ್ತು ಸ್ಥಿರ ಆಸ್ತಿಯ ಮೌಲ್ಯ 52.66 ಕೋಟಿ ರು. ಇದೆ. ಡಾ.ಮಂಜುನಾಥ್ ಅವರ ಸ್ಥಿರಾಸ್ತಿಯ ಸದ್ಯದ ಮಾರುಕಟ್ಟೆ ಮೌಲ್ಯ 36.65. ಕೋಟಿ ರು. ಇದೆ. ಇವರ ಚರಾಸ್ತಿ ಮೌಲ್ಯ 6.98 ಕೋಟಿ ಎಂದು ಘೋಷಿಸಿಕೊಂಡಿದ್ದಾರೆ.

ಡಾ.ಮಂಜುನಾಥ್ ಬಳಿ ಇರುವ ಸ್ಥಿರಾಸ್ತಿ ಪೈಕಿ ಕೃಷಿ ಭೂಮಿಯ ಮಾರುಕಟ್ಟೆಯ ಮೌಲ್ಯ 1.20 ಕೋಟಿ ರು. ಕೃಷಿ ಭೂಮಿ ಎಲ್ಲವೂ ಅವರಿಗೆ ತಮ್ಮ ಹಿರಿಯರಿಂದ ಬಳುವಳಿಯಾಗಿ ಬಂದಿರುವ ಆಸ್ತಿ. ಇವರು ಖರೀದಿಸಿರುವ ಕೃಷಿಯೇತರ ಭೂಮಿಯ ಮೌಲ್ಯ 3.63 ಕೋಟಿ ರು., ವಾಣಿಜ್ಯ ಬಳಕೆಯ ಕಟ್ಟಡಗಳು ತಮ್ಮ ತಂದೆಯವರಿಂದ ಬಳುವಳಿಯಾಗಿ ಬಂದಿದ್ದು ಇದರ ಮೌಲ್ಯ 31.77 ಕೋಟಿ ರು.ಆಗಿದೆ.

ಡಾ.ಸಿ.ಎನ್.ಮಂಜುನಾಥ್ ಅವರ ಬಳಿ ಸದ್ಯ 1.97 ಲಕ್ಷ ರು.ನಗದು ಇದೆ. 2018-19ನೇ ಸಾಲಿನಲ್ಲಿ 80 ಲಕ್ಷ ರು.ಗಳಿದ್ದ ವಾರ್ಷಿಕ ಆದಾಯವನ್ನು 2022-23ರಲ್ಲಿ 1.57 ಕೋಟಿ ರು. ವಾರ್ಷಿಕ ಆದಾಯ ಘೋಷಿಸಿಕೊಂಡಿದ್ದಾರೆ.

ವೈದ್ಯಕೀಯ ವ್ಯಾಸಂಗ :

1982ರಲ್ಲಿ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್, 1985 ರಲ್ಲಿ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂ.ಡಿ (ಜನರಲ್ ಮೆಡಿಸಿನ್), 1988 ರಲ್ಲಿ ಮಂಗಳೂರಿನ ಕಸ್ತೂರಬಾ ಮೆಡಿಕಲ್ ಕಾಲೇಜಿನಲ್ಲಿ ಡಿ.ಎಂ ಕಾರ್ಡಿಯಾಲಜಿ ವ್ಯಾಸಂಗ ಮಾಡಿದ್ದಾರೆ. ಅಮೇರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ, ಇಂಟರ್‌ನ್ಯಾಷನಲ್ ಕಾಲೇಜ್ ಆಫ್ ಚಿರೋಪ್ರಾಕ್ಟರ್ಸ್‌ ಮತ್ತು ರಾಯಲ್ ಕಾಲೇಜ್ ಆಫ್ ಫಿಸಿಷಿಯನ್ಸ್‌ನಲ್ಲಿ ಫೆಲೋಷಿಪ್ ಪಡೆದಿದ್ದಾರೆ.  

ವೈದ್ಯರಲ್ಲಿ ಚಿನ್ನ ಇಲ್ಲ, ಮಡದಿ ಬಳಿ ಚಿನ್ನದ ಗಟ್ಟಿಯೇ ಇದೆ ಡಾ.ಮಂಜುನಾಥ್ 3.74 ಕೋಟಿ ರು. ಸಾಲ ಮರುಪಾವತಿ ಮಾಡಬೇಕಾಗಿದೆ. ಅವರ ಬಳಿ ಯಾವುದೇ ಚಿನ್ನಾಭರಣ ಇಲ್ಲ. ಆದರೆ 1 ಲಕ್ಷ ರು. ಬೆಲೆಬಾಳುವ ಪುಸ್ತಕಗಳಿವೆ ಎಂದು ತಿಳಿಸಿದ್ದಾರೆ. 45 ಲಕ್ಷ ರು. ಬೆಲೆ ಬಾಳುವ ಬೆಂಜ್ ಕಾರು ಮತ್ತು 9.57 ಲಕ್ಷ ರು. ಹ್ಯೂಂಡೈ ವೆರ್ನಾ ಕಾರು ಇದೆ. ಆದರೆ , ಅವರ ಮಡದಿಯವರ ಬಳಿ 32 ಲಕ್ಷ ರು. ಬೆಲೆ ಬಾಳುವ 5079 ಗ್ರಾಂ ಚಿನ್ನಾಭರಣವಿದೆ. 69.11 ಲಕ್ಷ ರು. ಮೌಲ್ಯದ ಚಿನ್ನದ ಗಟ್ಟಿ, 25.50 ಲಕ್ಷ ಬೆಲೆ ಬಾಳುವ ವಜ್ರ, ಮತ್ತು 30 ಲಕ್ಷ ರು. ಬೆಲೆ ಬಾಳುವ ಬೆಳ್ಳಿ ವಸ್ತುಗಳಿವೆ.