ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರಾಜ್ಯ ಸರ್ಕಾರದಿಂದ ಸ್ವಾಮಿ ವಿವೇಕಾನಂದ ಜಯಂತಿಯಂದು ಯುವನಿಧಿ ಯೋಜನೆ ಅನುಷ್ಠಾನಗೊಳಿಸುತ್ತಿರುವುದು ಯುವಜನತೆಗೆ ಸಿಕ್ಕ ಗೌರವ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ನಗರದ ಫ್ರೀಡಂ ಪಾರ್ಕ್‌ನಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಂಗ್ರೆಸ್ ಸರ್ಕಾರದ ಐದನೇ ಗ್ಯಾರೆಂಟಿ ಯುವ ನಿಧಿ ಯೋಜನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿರುದ್ಯೋಗಿ ಯುವಜನತೆಗೆ ಮೀನು ಹಿಡಿಯಲು ಬಲೆ ನೀಡುವ ಜೊತೆಗೆ ಮೀನು ಹಿಡಿಯಲು ಕಲಿಸಬೇಕು. ಅದೇ ರೀತಿ ನಿರುದ್ಯೋಗಿ ಯುವಕರ ಕೈಗೆ ಭತ್ಯೆ ಮಾತ್ರವಲ್ಲ, ಸ್ವಾವಲಂಬಿಯಾಗಿ ಬದುಕುವ ಕೌಶಲ್ಯಗಳನ್ನು ಕಲಿಸಬೇಕು ಎಂದರು.ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳಡಿ ಅವರನ್ನು ತರಬೇತುಗೊಳಿಸಿ, ಸ್ವಯಂ ಉದ್ಯೋಗ ಕೈಗೊಳ್ಳಲು ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕಿನ ಸಾಲ ಪಡೆಯುವ ಕಾರ್ಯಕ್ಕೆ ನೆರವಾಗಬೇಕು ಎಂದರು.
ಸಾಗರ ತಾಲೂಕಿನ ಇರುವಕ್ಕಿಯಲ್ಲಿ ದಿ. ಬಂಗಾರಪ್ಪ ಅವರು ಕೃಷಿ ಕಾಲೇಜು ಆರಂಭಿಸಿದರು. ಯಡಿಯೂರಪ್ಪ ಅವರು ವಿಶ್ವವಿದ್ಯಾಲಯ ಮಾಡಿದ್ದಾರೆ. ಕೃಷಿ ವಿವಿಯಲ್ಲಿ ಇನ್ನೂ ಹಲವು ಅಭಿವೃದ್ಧಿ ಕಾಮಗಾರಿಗಳು ಆಗಬೇಕಿದೆ. ಅದಕ್ಕೆ ಸರ್ಕಾರ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಬೇಕು.ಶರಾವತಿ ಮುಳುಗಡೆ ಸಂತ್ರಸ್ತರಿಗೆ ಪರಿಹಾರ ನೀಡಲು ಉಂಟಾಗಿರುವ ತಾಂತ್ರಿಕ ತೊಂದರೆ ನಿವಾರಿಸಬೇಕು ಎಂದು ಮನವಿ ಮಾಡಿದರು. -12ಎಸ್ಎಂಜಿಕೆಪಿ02: ಬಿ.ವೈ.ರಾಘವೇಂದ್ರ- - - ಯುವನಿಧಿ ಚಾಲನೆ ರಾಜ್ಯ ಅಭಿವೃದ್ಧಿ ಬಲಿಕೊಟ್ಟು ನಡೆಸುವ ಕಾರ್ಯಕ್ರಮ: ಜ್ಞಾನೇಂದ್ರ ಟೀಕೆಕನ್ನಡಪ್ರಭ ವಾರ್ತೆ ತೀರ್ಥಹಳ್ಳಿರಾಜ್ಯ ಸರ್ಕಾರದ ಯುವನಿಧಿ ಕಾರ್ಯಕ್ರಮ ಸರ್ಕಾರಿ ಕಾರ್ಯಕ್ರಮವಾಗದೇ ರಾಜ್ಯದ ಅಭಿವೃದ್ದಿಯನ್ನು ಬಲಿ ಕೊಟ್ಟು ನಡೆಸುವ ಪಕ್ಷದ ಕಾರ್ಯಕ್ರಮವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದ್ದಾರೆ.ಶುಕ್ರವಾರ ಪಟ್ಟಣದಲ್ಲಿ ರಾಮೇಶ್ವರ ದೇವರ ರಥೋತ್ಸವದ ಸಂಧರ್ಭದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿ, ಈ ಕಾರ್ಯಕ್ರಮದ ಬಗ್ಗೆ ತಾಲೂಕಿನಲ್ಲಿ ನೀರಸ ಅಭಿಪ್ರಾಯ ವ್ಯಕ್ತವಾಗಿದೆ. ಈ ತಾಲೂಕಿನಿಂದ ಹೆಚ್ಚು ಜನರು ಕೂಡ ಹೋಗಲ್ಲ. ಜನರನ್ನು ಕರೆದೊಯ್ಯಲು ಬಂದಿದ್ದ ಬಸ್ಸುಗಳು ಇಲ್ಲಿಯೇ ನಿಂತಿದ್ದು, ಕೆಲವು ಬಸ್ಸುಗಳಲ್ಲಿ ನಾಲ್ಕೈದು ಜನರು ಈ ಸಮಾವೇಶಕ್ಕೆ ಹೋಗಿದ್ದಾರೆ ಎಂದೂ ಲೇವಡಿ ಮಾಡಿದರು. ರಾಜ್ಯಕ್ಕೆ ಬರ ಬಂದಿದ್ದು, ಜನರು ಸಂಕಷ್ಠದಲ್ಲಿ ಇರುವ ಸಂಧರ್ಭದಲ್ಲಿ ರಾಜ್ಯದ ಅಭಿವೃದ್ಧಿ ಬಲಿ ಕೊಟ್ಟು ಇಂಥ ಕಾರ್ಯಕ್ರಮ ನಡೆಸುವ ಅಂಧ ದರ್ಬಾರ್ ಈ ಸರ್ಕಾರದಿಂದ ನಡೆದಿದೆ. ರಾಜ್ಯ ಸರ್ಕಾರದ ಆಡಳಿತದ ಪರಿಯನ್ನು ನೋಡಿದರೆ ಈ ಸರ್ಕಾರ ಹೆಚ್ಚು ಕಾಲ ಉಳಿಯುವಂತೆ ಕಾಣುತ್ತಿಲ್ಲ ಎಂದೂ ಹೇಳಿದರು. ಶ್ರೀರಾಮ ಜನ್ಮತಾಳಿದ ಸ್ಥಳದಲ್ಲಿ ಮಂದಿರ ನಿರ್ಮಾಣಗೊಳ್ಳುತ್ತಿದ್ದು, ಈ ಮಂದಿರ ಭಾರತೀಯರ ಶ್ರದ್ಧಾಕೇಂದ್ರವೂ ಆಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ರಾಮನ ಪ್ರಾಣಪ್ರತಿಷ್ಠೆ ಆಗಲಿದೆ. ಮೋದಿಯಂಥ ಓರ್ವ ಹಿಂದುಳಿದ ವರ್ಗದ ನಾಯಕ ಪ್ರಧಾನಿ ಆಗಿರೋದೇ ಶ್ರೀರಾಮನ ಕೃಪೆಯಿಂದ. ಈ ದೇಶದ ಏಕತೆ ಮತ್ತು ಸಮಗ್ರತೆ ರಾಮಮಂದಿರದ ಮೂಲಕ ಆಗಲಿದೆ ಎಂದೂ ಭವಿಷ್ಯ ನುಡಿದರು. ಈ ಸಂದರ್ಭ ಬಿಜೆಪಿ ಮುಖಂಡರಾದ ಕೆ.ನಾಗರಾಜ ಶೆಟ್ಟಿ, ಪ್ರಶಾಂತ್ ಕುಕ್ಕೆ ಹಾಗೂ ಸಂದೇಶ್ ಜವಳಿ ಇದ್ದರು. - - - (-ಫೋಟೋ: ಆರಗ ಜ್ಞಾನೇಂದ್ರ)