ಕನಕಪುರ: ತಾಲೂಕಿನಲ್ಲಿ ಆಶ್ರಯ ಯೋಜನೆಯಡಿ ಅರ್ಹರಿಗೆ ಮಾತ್ರ ನಿವೇಶನ ಹಂಚಿಕೆ ಮಾಡುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ತಹಶೀಲ್ದಾರ್ ಸಂಜಯ್ ಅವರಿಗೆ ಸೂಚನೆ ನೀಡಿದರು. ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಈಗಾಗಲೇ ನಿವೇಶನ ಇರುವವರು ಅರ್ಜಿ ಪುರಸ್ಕರಿಸಬಾರದು. ಫಲಾನುಭವಿಗಳ ದಾಖಲಾತಿಗಳನ್ನು ಕೂಲಂಕುಷವಾಗಿ ಪರಿಶೀಲಿಸಬೇಕು. ಗ್ರಾಮ ಮಟ್ಟದಲ್ಲಿ ಪಿಡಿಒಗಳು ಆಶ್ರಯ ಯೋಜನೆಯಡಿ ನಿವೇಶನ ಇಲ್ಲದ ಫಲಾನುಭವಿಗಳಿಗೆ ಮಾತ್ರ ಹಂಚುವಂತೆ ಸೂೂಚನೆ ನೀಡಿದರು.

ತಹಸೀಲ್ದಾರ್ ಸಂಜಯ್ ಮಾತನಾಡಿ, ಆಶ್ರಯ ಯೋಜನೆಯಡಿ ಕನಕಪುರ ತಾಲೂಕಿನಲ್ಲಿ ನಿವೇಶನ ಹಂಚಿಕೆಗೆ 272 ಎಕರೆ ಪ್ರದೇಶವನ್ನು ಕಾಯ್ದಿರಿಸಲಾಗಿದ್ದು, ಪಹಣಿಗಳನ್ನು ಇಂಡೀಕರಿಸಲಾಗಿದೆ. ಈಗಾಗಲೇ ಇದರಲ್ಲಿ 211 ಎಕರೆಯಲ್ಲಿ ನಿವೇಶನ ಅಭಿವೃದ್ಧಿ ಪಡಿಸಲಾಗಿದೆ. ಬಾಕಿ ಉಳಿದ 75 ಎಕರೆಯಲ್ಲಿ ಹಕ್ಕುಪತ್ರ ಹಂಚಿದ್ದು 56 ಎಕರೆಯನ್ನು ಗ್ರಾಮ ಪಂಚಾಯತಿ ಮಟ್ಟದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅದೇ ರೀತಿ 20 ಎಕರೆಯಲ್ಲಿ ನಿವೇಶನಗಳ ರಚನೆ ಹಾಗೂ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. 56 ಎಕರೆಯನ್ನು ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಒಟ್ಟು 2,860 ನಿವೇಶನ ರಚಿಸಲಾಗಿದೆ. ಅದರಲ್ಲಿ 1,852 ಹಕ್ಕುಪತ್ರ ಹಂಚಿಕೆ ಮಾಡಲಾಗಿದೆ. ಅದೇ ರೀತಿ 387 ಸಾರ್ವಜನಿಕರ ಉಪಯೋಗಕ್ಕಾಗಿ ಕಾಯ್ದಿರಿಸಲಾಗಿದೆ. 621 ಹಕ್ಕುಪತ್ರ ವಿತರಿಸಲು ಬಾಕಿ ಉಳಿದಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾ ಕೆಡಿಪಿ ಸದಸ್ಯರನ್ನು ಅಂಗನವಾಡಿಗೆ ಆಹ್ವಾನಿಸಿ ಅಲ್ಲಿ ಮಕ್ಕಳಿಗೆ ನೀಡುವ ಆಹಾರದ ಗುಣಮಟ್ಟದ ಬಗ್ಗೆ ಮಾಹಿತಿ ಒದಗಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿ ಜಿಲ್ಲೆಯಲ್ಲಿ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುತ್ತಿರುವ ಗುತ್ತಿಗೆದಾರರು ಗುಣಮಟ್ಟದ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುತ್ತಿರುವ ಬಗ್ಗೆ ನಿಗಾ ವಹಿಸುವಂತೆ ಆಹಾರ ಇಲಾಖೆಯ ಉಪ ನಿರ್ದೇಶಕರಿಗೆ ಸಲಹೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಕೆ.ರಾಜು, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಪಂ ಸಿಇಒ ಅನ್ಮೋಲ್ ಜೈನ್, ಎಸ್ಪಿ ಶ್ರೀನಿವಾಸಗೌಡ, ಕೆಡಿಪಿ ಸಭೆಯ ನಾಮನಿರ್ದೇಶಿತ ಸದಸ್ಯರಾದ ಜಿಲ್ಲಾ ಗುರುಮೂರ್ತಿ, ಆಶಾ ಗುರುಮೂರ್ತಿ, ಉಮಾಶಂಕರ್, ಬಸವರಾಜ್, ಮುತ್ತುರಾಜ್, ನಾಸಿರ್ ಆಲಿಖಾನ್, ಶಿವಣ್ಣ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಜನಪ್ರತಿನಿದಿಗಳು ಉಪಸ್ಥಿತರಿದ್ದರು.

ಬಾಕ್ಸ್‌...........


ಗ್ಯಾರಂಟಿ ಯೋಜನೆ ಫಲಾನುಭವಿಗಳ ಪರೀಶೀಲಿಸಿ: ಡಿಸಿಎಂ

ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಯಡಿ ನೋಂದಾಯಿಸಿಕೊಂಡು, ಸೌಲಭ್ಯ ಪಡೆದು ಸ್ಥಳೀಯ ವಿಳಾಸದಲ್ಲಿ ವಾಸವಿರದೇ ವಂಚಿಸುವವರನ್ನು ಪತ್ತೆ ಮಾಡಿ ಅಗತ್ಯ ಕ್ರಮ ಜರುಗಿಸಬೇಕು. ಈ ದಿಸೆಯಲ್ಲಿ

ಪ್ರತಿಯೊಂದು ಮನೆಯನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳು ಹಾಗೂ ಗ್ಯಾರಂಟಿ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆ ಡಿಸಿಎಂ ಸೂಚನೆ ನೀಡಿದರು.

ರಾಜ್ಯದ ಇತರೆ ಜಿಲ್ಲೆಗಳಲ್ಲಿ ಗ್ಯಾರಂಟಿ ಸಮಾವೇಶಗಳನ್ನು ಮಾಡಲಾಗಿದೆ. ಅದೇ ರೀತಿ ಬೆಂಗಳೂರು ದಕ್ಷಿಣ

ಜಿಲ್ಲೆಯ ಕನಕಪುರ ತಾಲೂಕಿನಲ್ಲೂ ಪಂಚ ಗ್ಯಾರಂಟಿ ಯೋಜನೆಯ ಸಮಾವೇಶ ಏರ್ಪಡಿಸಲಾಗುವುದು. ಈ ಕಾರ್ಯಕ್ರಮಕ್ಕೆ ಆಶ್ರಯ ಯೋಜನೆ, ಅಂಬೇಡ್ಕರ್ ವಸತಿ ಯೋಜನೆ, ಉಪ ಗ್ರಾಮ ಯೋಜನೆ ಸೇರಿದಂತೆ ಇತರೆ ಯೋಜನೆಗಳ ಫಲಾನುಭವಿಗಳ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಸೇರಿದಂತೆ ಅವರ ವಿವರಗಳನ್ನು ಪಡೆಯುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.

ಬಾಕ್ಸ್‌............

ಶುದ್ಧ ನೀರು ಘಟಕ ಗುಣಮಟ್ಟ ಪರೀಶೀಲಿಸಿ

ತಾಲೂಕಿನಲ್ಲಿ ಶುದ್ಧ ಕುಡಿಯುವ ನೀರು ಪೂರೈಸುವ ಸರ್ಕಾರಿ ಹಾಗೂ ಖಾಸಗಿ ನೀರು ಘಟಕಗಳನ್ನು ಪರಿಶೀಲನೆ ನಡೆಸಿ ದುರಸ್ತಿ ಇರುವುದನ್ನು ಕೂಡಲೇ ರಿಪೇರಿ ಮಾಡಿಸಿ ಎಲ್ಲರಿಗೂ ಶುದ್ಧ ಕುಡಿಯುವ ನೀರು ಒದಗಿಸಬೇಕು. ಅದು ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯವಾಗಿದೆ. ಇದಕ್ಕೆ ಹಣದ ಅಭಾವವಿದ್ದರೆ ಅದನ್ನು ಒದಗಿಸುವುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಜಿಲ್ಲೆ ಹಾಗೂ ತಾಲೂಕಿನಲ್ಲಿ ಕೆಪಿಎಸ್ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಅಲ್ಲಿನ ಸವಲತ್ತುಗಳು ಹಾಗೂ ಅಲ್ಲಿನ ಉಪಯೋಗಗಳ ಬಗ್ಗೆ ಫೋಟೋ, ವಿಡಿಯೋವನ್ನು ಚಿತ್ರಣ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಪ್ರಚಾರ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.

ಕೆ ಕೆ ಪಿ ಸುದ್ದಿ 04:

ಕನಕಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಿತು.