ಈ ಹಿಂದೆ ನಿವೇಶನ ಹಂಚಿಕೆಗೆ ಒತ್ತಾಯಿಸಿ ಸುಮಾರು 50ಕ್ಕೂ ಹೆಚ್ಚು ಜನ ಬೆಂಗಳೂರಿಗೆ ತೆರಳಿ ಪ್ರತಿಭಟನೆ ನಡೆಸಿ ವಸತಿ ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಮುಂಡರಗಿ: ಪುರಸಭೆ ವ್ಯಾಪ್ತಿಯ ಶಿರೋಳ ಗ್ರಾಮದ ಹೊರವಲಯದಲ್ಲಿ ಸರ್ಕಾರದಿಂದ ಮುಂಡರಗಿ ಪಟ್ಟಣದ 23 ವಾರ್ಡುಗಳ ನಿರಾಶ್ರಿತರಿಗೆ ನಿವೇಶನ ನೀಡುವುದಕ್ಕಾಗಿ ಖರೀದಿಸಿದ ಜಮೀನಿನಲ್ಲಿ ತಕ್ಷಣವೇ ನಿರಾಶ್ರಿತರಿಗೆ ನಿವೇಶನ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿ ತಾಲೂಕು ಕಿಸಾನ್ ಜಾಗೃತಿ ವಿಕಾಸ ಸಂಘದ ಕಾರ್ಯಕರ್ತರ ನೇತೃತ್ವದಲ್ಲಿ ಆಶ್ರಯ ನಿವೇಶನಕ್ಕಾಗಿ ಖರೀದಿಸಿದ ಜಮೀನಿನಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹವನ್ನು ಸೋಮವಾರ ಪ್ರಾರಂಭಿಸಿದ್ದಾರೆ.

ಈ ಸಂದರ್ಭದಲ್ಲಿ ಕಿಸಾನ್ ಜಾಗೃತಿ ವಿಕಾಸ ಸಂಘದ ತಾಲೂಕು ಅಧ್ಯಕ್ಷ ವಿ.ಎಸ್. ಗಟ್ಟಿ ಮಾತನಾಡಿ, ನಿರಾಶ್ರಿತ ಫಲಾನುಭವಿಗಳಿಗೆ ಆಶ್ರಯ ನಿವೇಶನ ನೀಡುವುದಕ್ಕಾಗಿ 10 ವರ್ಷಗಳ ಹಿಂದೆ ಸರ್ಕಾರದಿಂದ ಸುಮಾರು 25 ಎಕರೆ ಜಮೀನು ಖರೀದಿಸಿದ್ದು, ಇದುವರೆಗೂ ಸಂಬಂಧಪಟ್ಟ ಅಧಿಕಾರಿಗಳಾಗಲಿ, ಶಾಸಕರು, ಲೋಕಸಭಾ ಸದಸ್ಯರು ಸೇರಿ ಎಲ್ಲ ಜನಪ್ರತಿನಿಧಿಗಳೂ ಸಹ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ನಿವೇಶನ ಹಂಚಿಕೆ ಪ್ರಕ್ರಿಯೆ ಮಾಡದೇ ವಿ‍ಳಂಬ ನೀತಿ ಅನುಸರಿಸುತ್ತಾ ಬಂದಿದ್ದಾರೆ. ಹಿಂದಿನ ಪುರಸಭೆ ಆಡಳಿತ ಮಂಡಳಿಯೂ ಅನೇಕ ಬಾರಿ ಪ್ರಯತ್ನಿಸಿದರಾದರೂ ಯಾವುದೇ ಪ್ರಯೋಜನವಾಗಿಲ್ಲ.

ಈ ಹಿಂದೆ ನಿವೇಶನ ಹಂಚಿಕೆಗೆ ಒತ್ತಾಯಿಸಿ ಸುಮಾರು 50ಕ್ಕೂ ಹೆಚ್ಚು ಜನ ಬೆಂಗಳೂರಿಗೆ ತೆರಳಿ ಪ್ರತಿಭಟನೆ ನಡೆಸಿ ವಸತಿ ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಇದೀಗ ಎಲ್ಲ ನಿರಾಶ್ರಿತರೊಂದಿಗೆ ಧರಣಿ ಸತ್ಯಾಗ್ರಹ ಪ್ರಾರಂಭಿಸಿದ್ದು, ನಮಗೆ ಸೂಕ್ತ ಭರವಸೆ ದೊರೆಯುವವರೆಗೂ ಈ ಸತ್ಯಾಗ್ರಹ ನಿರಂತರವಾಗಿ ನಡೆಯಲಿದೆ ಎಂದರು.

ಈ ಸಂದರ್ಭದಲ್ಲಿ ಕಿಸಾನ್ ಜಾಗೃತಿ ವಿಕಾಸ್ ಸಂಘದ ರಾಜ್ಯ ಉಪಾಧ್ಯಕ್ಷ ಸತ್ಯಾ ಆಚಾರ, ರಾಜ್ಯ ಪ್ರ. ಕಾರ್ಯದರ್ಶಿ ಅಶ್ವಿನಿ ಟಗರು, ಜಿಲ್ಲಾಧ್ಯಕ್ಷ ನಿಂಗಪ್ಪ ಭಂಡಾರಿ, ಮಂಜುನಾಥ ಉಪ್ಪಾರ, ಅಶೋಕ ಹೊಸಮನಿ, ಮುದಿಯಪ್ಪ ಲಕ್ಕುಂಡಿ, ಗಂಗವ್ವ ಪೂಜಾರ, ಸುಂಕಮ್ಮ ಕೊರವರ, ಈರಮ್ಮ ಪೂಜಾರ, ಜಯಮಾಲಮ್ಮ, ಯಲ್ಲಮ್ಮ, ವೈಶಾಲಿ ಕೊರವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.