ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ನಗರ, ಜಿಲ್ಲೆಯ ಎಲ್ಲಾ ಪ್ರೇಕ್ಷಣೀಯ, ಪ್ರವಾಸಿ ತಾಣಗಳು, ದೇವಸ್ಥಾನಗಳಲ್ಲಿ ಫ್ರೀವೆಡ್ಡಿಂಗ್ ಫೋಟೋ ಹಾಗೂ ವೀಡಿಯೋ ಶೂಟ್ ಮಾಡಲು ಅವಕಾಶ ಮಾಡಿಕೊಡುವಂತೆ ಕರ್ನಾಟಕ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಅಸೋಸಿಯೇಷನ್, ಜಿಲ್ಲಾ, ತಾಲೂಕು ಘಟಕಗಳಿಂದ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರಿಗೆ ಮನವಿ ಅರ್ಪಿಸಲಾಯಿತು.ನಗರದ ಜಿಲ್ಲಾಡಳಿತ ಭವನದ ಕಚೇರಿಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರಿಗೆ ಸಂಘದ ರಾಜ್ಯಾಧ್ಯಕ್ಷ ದೇವನಗರಿ ಎಂ.ಮನು, ಕಾರ್ಯಾಧ್ಯಕ್ಷ ಕೊಂಡಜ್ಜಿ ಎಸ್.ರಾಜಶೇಖರ, ಜಂಟಿ ಕಾರ್ಯದರ್ಶಿ ಡಿ.ರಂಗನಾಥ, ಜಿಲ್ಲಾಧ್ಯಕ್ಷ ಬಿ.ಮಂಜುನಾಥ, ತಾಲೂಕು ಅಧ್ಯಕ್ಷ ಎಚ್.ಎಫ್.ಸಂಜಯ್ ಇತರರ ನೇತೃತ್ವದಲ್ಲಿ ಮನವಿ ಪತ್ರವನ್ನು ಅರ್ಪಿಸಿ, ಫೋಟೋ ಮತ್ತು ವಿಡಿಯೋ ಶೂಟ್ ಗೆ ಅವಕಾಶ ನೀಡುವಂತೆ ಆಗ್ರಹಿಸಲಾಯಿತು.
ಇದೇ ವೇಳೆ ಮಾತನಾಡಿದ ದೇವನಗರಿ ಎಂ.ಮನು, ಜಿಲ್ಲೆಯ ಹರಿಹರ ದೇವಸ್ಥಾನ, ಸಂತೇಬೆನ್ನೂರು ಪುಷ್ಕರಣಿ, ನೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬಾಗಳಿ, ನೀಲಗುಂದಿ ದೇವಸ್ಥಾನ ಸೇರಿದಂತೆ ದಾವಣಗೆರೆ ಜಿಲ್ಲೆಯ ಇತರೆ ದೇವಸ್ಥಾನಗಳು, ಪ್ರವಾಸಿ ತಾಣಗಳಲ್ಲಿ ಹೊರಾಂಗಣದ ಚಿತ್ರೀಕರಣ, ಫ್ರಿ ವೆಡ್ಡಿಂಗ್ ಫೋಟೋ ಶೂಟ್ ಮತ್ತು ವಿಡಿಯೋ ಶೂಟ್‌ಗೆ ಅವಕಾಶ ಮಾಡಿಕೊಡುವಂತೆ ಸಂಘದಿಂದ ಮನವಿ ಅರ್ಪಿಸಿದ್ದೇವೆ ಎಂದರು.ದೇವಸ್ಥಾನಗಳು, ಪ್ರವಾಸಿ ತಾಣಗಳು, ಪ್ರೇಕ್ಷಣೀಯ ಸ್ಥಳಗಳಲ್ಲೇ ಟಿಕೆಟ್ ಕೌಂಟರ್ ಮಾಡುವ ಮೂಲಕ ನಿರ್ದಿಷ್ಟ ದರ ನಿಗದಿಪಡಿಸಿ, ಫೋಟೋ ಮತ್ತು ವಿಡಿಯೋ ಶೂಟ್‌ಗೆ ಅನುಮತಿ ನೀಡಬೇಕು. ನಿರ್ದಿಷ್ಟ ದರ ಸಂಗ್ರಹಿಸುವುದರಿಂದ ದೇವಸ್ಥಾನದ ಅಭಿವೃದ್ಧಿ ಮತ್ತು ಜೀರ್ಣೋದ್ಧಾರಕ್ಕೂ ಆದಾಯ ಬರುತ್ತದೆ. ಈಚಿನ ದಿನಗಳಲ್ಲಿ ಫೋಟೋ ಶೂಟ್ ಮಾಡಲು ಅನುಮತಿ ಇಲ್ಲವೆಂದು ದೇವಸ್ಥಾನಗಳ ಅರ್ಚಕರು, ಸಿಬ್ಬಂದಿ ಆಕ್ಷೇಪಿಸುತ್ತಿದ್ದಾರೆ ಎಂದು ತಿಳಿಸಿದರು.
ನಿರ್ದಿಷ್ಟ ದರ ನಿಗದಿಪಡಿಸಿ, ಟೆಕೆಟ್ ಮಾಡುವ ಮೂಲಕ ಅನುಮತಿ ನೀಡಬೇಕು. ಚಿತ್ರೀಕರಣ, ಫೋಟೋ ಶೂಟ್ ಮಾಡುವುದರಿಂದ ದೇವಸ್ಥಾನವನ್ನು ರಾಜ್ಯ, ರಾಷ್ಟ್ರ, ಇತರೆ ದೇಶಗಳಲ್ಲೂ ಪ್ರಚಾರ ಮಾಡಿದಂತಾಗುತ್ತದೆ. ಇದರಿಂದ ದಾವಣಗೆರೆ ಜಿಲ್ಲೆಯ ಪ್ರವಾಸೋದ್ಯಮಕ್ಕೂ ಹೆಚ್ಚು ಒತ್ತು ನೀಡಿದಂತಾಗುತ್ತದೆ. ಛಾಯಾಗ್ರಾಹಕರು ಈಚೆಗೆ ಫೋಟೋ, ವಿಡಿಯೋ ಶೂಟ್‌ಗಾಗಿ ಮೈಸೂರು, ಹೊನ್ನಾವರ, ಉಡುಪಿ, ಬೆಂಗಳೂರು, ಗೋವಾ ಇತರೆ ಊರಿಗೆ ಹೋಗುತ್ತಿರುವುದೂ ತಪ್ಪುತ್ತದೆ ಎಂದು ಹೇಳಿದರು.ಸಮಯ, ಇಂಧನ ಹಾಗೂ ಹಣ ವ್ಯರ್ಥವಾಗುವುದನ್ನು ತಡೆಯಲು ನಮ್ಮ ಜಿಲ್ಲೆಯಲ್ಲೇ ಫೋಟೋ ಶೂಟ್‌ಗೆ ಅವಕಾಶ ಮಾಡಿಕೊಡಲು ಜಿಲ್ಲಾಧಿಕಾರಿಗಳು ಪರಿಶೀಲಿಸಬೇಕು. ಪ್ರಿ ವೆಡ್ಡಿಂಗ್ ಫೋಟೋ ಹಾಗೂ ವಿಡಿಯೋ ಶೂಟ್ ಮಾಡಲು ಅನುಮತಿ ಮಾಡಿಕೊಡಬೇಕು. ಜಿಲ್ಲಾಧಿಕಾರಿಗಳು ಈ ಬಗ್ಗೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೂ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.