ಹಸಿರೀಕರಣದೊಂದಿಗೆ ಅಭಿವೃದ್ಧಿಗೂ ಅವಕಾಶ ನೀಡಿ: ಸಚಿವ ಆರ್.ಬಿ.ತಿಮ್ಮಾಪೂರ

| Published : Jan 23 2025, 12:49 AM IST

ಸಾರಾಂಶ

ಜಿಲ್ಲೆಯ ರೈತರಿಗೆ ಕೆನಾಲ್ ಮಾಡಿಕೊಡುವ, ರಸ್ತೆ ಕಾಮಗಾರಿಗಳಿಗೆಲ್ಲ ಅರಣ್ಯ ಕಾಯ್ದೆಯಡಿ ಅಡ್ಡಿಪಡಿಸಿ ಬಂದ್‌ ಮಾಡಿಸುವುದರ ಬದಲು ಅವುಗಳಿಗೆ ಪರಿಹಾರ ಹುಡುಕಿ ಸಮಸ್ಯೆ ಬಗೆಹರಿಸುವಲ್ಲಿ ಅರಣ್ಯ ಅಧಿಕಾರಿ ಆಸಕ್ತಿವಹಿಸಬೇಕು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯನ್ನು ಹಸಿರೀಕರಣಗೊಳಿಸುವುದರೊಂದಿಗೆ ಅಭಿವೃದ್ಧಿ ಕಾರ್ಯಗಳಿಗೂ ಅವಕಾಶ ನೀಡಬೇಕು ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.

ಜಿಲ್ಲಾ ಪಂಚಾಯಿತಿ ನೂತನ ಸಭಾಂಗಣದಲ್ಲಿ ಬುಧವಾರ ನಡೆದ 3ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ರೈತರಿಗೆ ಕೆನಾಲ್ ಮಾಡಿಕೊಡುವ, ರಸ್ತೆ ಕಾಮಗಾರಿಗಳಿಗೆಲ್ಲ ಅರಣ್ಯ ಕಾಯ್ದೆಯಡಿ ಅಡ್ಡಿಪಡಿಸಿ ಬಂದ್‌ ಮಾಡಿಸುವುದರ ಬದಲು ಅವುಗಳಿಗೆ ಪರಿಹಾರ ಹುಡುಕಿ ಸಮಸ್ಯೆ ಬಗೆಹರಿಸುವಲ್ಲಿ ಅರಣ್ಯ ಅಧಿಕಾರಿ ಆಸಕ್ತಿವಹಿಸಬೇಕು. ಸಮಸ್ಯೆ ಎಲ್ಲೆಲ್ಲಿವೆ ಎಂಬುದನ್ನು ಒಂದು ಪಟ್ಟಿ ಮಾಡಿ ಅವುಗಳನ್ನು ಬಗೆಹರಿಸಿ, ತೊಂದರೆ ಮಾಡುವುದು ಬೇಡ ಎಂದರು.

ಸಾಮಾಜಿಕ ಅರಣ್ಯ ಇಲಾಖೆಯು ಸರ್ಕಾರಿ ಶಾಲೆ ಕಾಲೇಜು, ಆಸ್ಪತ್ರೆಯಂತಹ ಕಟ್ಟಡಗಳ ಆವರಣದೊಳಗೆ ಸಸಿ ನೆಟ್ಟು ನರೇಗಾದಡಿ ಸಂರಕ್ಷಿಸುವ ಕೆಲಸ ಮಾಡಿ ಎಂದು ಸೂಚಿಸಿದರು. ಅರಣ್ಯಾಧಿಕಾರಿ ಸಭೆಗೆ ಮಾಹಿತಿ ನೀಡಿ, ಬಾಗಲಕೋಟೆ ಸಾಮಾಜಿಕ ಅರಣ್ಯ ವಿಭಾಗ ವ್ಯಾಪ್ತಿಯಲ್ಲಿ 2024-25ನೇ ಸಾಲಿಗೆ 311 ಹೆ. ಕಿ.ಮೀ ನೆಡುತೋಪು ನಿರ್ಮಾಣದ ಗುರಿ ನಿಗದಿಪಡಿಸಿದ್ದು, ಅದರಲ್ಲಿ ಈಗ 311.00 ಹೆ. ಕಿ.ಮೀ ನೆಡುತೋಪು ನಿರ್ಮಾಣದ ಕಾಮಗಾರಿ ಕೈಗೊಳ್ಳಲಾಗಿರುತ್ತದೆ. 2024-25ನೇ ಸಾಲಿಗೆ ಸಾರ್ವಜನಿಕರಿಗೆ ಮತ್ತು ರೈತರಿಗೆ ಸಸಿ ನೆಡಲು ಉತ್ತೇಜಿಸಲು ವಿವಿಧ ಯೋಜನೆಯಡಿ ವಿವಿಧ ಅಳತೆಯ ಒಟ್ಟು 2,28,000 ಸಸಿ ಬೆಳೆಸಿ ಈಗಾಗಲೇ ರೈತರಿಗೆ ರಿಯಾತಿ ದರದಲ್ಲಿ ವಿತರಿಸಲಾಗಿರುತ್ತದೆ ಎಂದು ಹೇಳಿದರು.

ಬೀಳಗಿ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷ ಜೆ.ಟಿ.ಪಾಟೀಲ ಮಾತನಾಡಿ, ಜಿಲ್ಲಾ ಆರೋಗ್ಯ ಅಧಿಕಾರಿಯು ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಮುಖ್ಯವಾಗಿ ಆ ಆಸ್ಪತ್ರೆಗಳ ಶೌಚಾಲಯ ಆವರಣ ಸ್ವಚ್ಛವಾಗಿ ಇಡುವಲ್ಲಿ ಕ್ರಮ ತೆಗೆದುಕೊಳ್ಳಬೇಕು. ಸ್ಕ್ಯಾನಿಂಗ್ ಸೆಂಟರ್ ಸಮಸ್ಯೆ ಬಗೆಹರಿಸಬೇಕು ಎಂದರು. ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಮಂಜುನಾಥ ಬಿ ಅವರು ಶಾಸಕರಿಗೆ ವಿವರಿಸುತ್ತಾ ಜಿಲ್ಲಾ ಆಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಸೆಂಟರ್ ತೆರೆಯಲು ಈಗಾಗಲೇ ಸ್ಥಳ ಗುರುತಿಸಲಾಗಿದೆ. ಸ್ಕ್ಯಾನಿಂಗ್ ಮಷೀನ್‌ಗಾಗಿ ಟೆಂಡರ್ ಕರೆಯಲಾಗಿದ್ದು ಶೀಘ್ರದಲ್ಲಿ ಕಾರ್ಯರೂಪಕ್ಕೆ ತರಲಾಗುವುದು ಎಂದರು.

ಬಾದಾಮಿ ಶಾಸಕ ಬಿ ಬಿ. ಚಿಮ್ಮನಕಟ್ಟಿ ಮಾತನಾಡಿ, ಕೃಷಿ ಅಧಿಕಾರಿಗಳು ಮತ್ತು ಸಹಾಯಕ ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸದೇ ಇರುವುದರಿಂದ ರೈತನ ಹೆಸರು ಬೇರೆ ಮತ್ತು ಆತ ಬೆಳೆದ ಬೆಳೆಯ ಹೆಸರು ಬೇರೆ ಬೇರೆಯಾಗಿ ಬರುತ್ತಿರುವುದರಿಂದ ರೈತರ ದತ್ತಾಂಶಕ್ಕೂ ಮತ್ತು ನೈಜತೆಗೂ ಬಹಳ ವ್ಯತ್ಯಾಸವಾಗುತ್ತಿದ್ದು ಕೃಷಿ ಅಧಿಕಾರಿಗಳು ಇದನ್ನು ಸರಿ ಪಡಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಜಾನಕಿ.ಕೆ.ಎಂ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್, ಡಿಎಫ್ಒ ಸೇರಿ ವಿವಿಧ ಇಲಾಖೆ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ಸಭೆಯಿಂದ ಅಧಿಕಾರಿ ಹೊರಗೆ ಕಳಿಸಿದ ತಿಮ್ಮಾಪೂರ

ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಜೆ.ಡಿ.ಲಕ್ಷ್ಮಣ ಕಳ್ಳೆಣ್ಣವರ ಅವರನ್ನು ಸಭೆಯಿಂದ ಸಚಿವ ತಿಮ್ಮಾಪೂರ ಅವರು ಹೊರ ಕಳಿಸಿದ ಘಟನೆ ನಡೆಯಿತು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಕೃಷಿ ಇಲಾಖೆ ವಿವಿಧ ಕೆಲಸಗಳ ಬಗ್ಗೆ ಮಾಹಿತಿ ಕೇಳಿದ ಸಚಿವ ಆರ್.ಬಿ ತಿಮ್ಮಾಪೂರ ಅವರಿಗೆ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಜೆ.ಡಿ.ಲಕ್ಷ್ಮಣ ಕಳ್ಳೆಣ್ಣವರ ಅವರನ್ನು ಸಭೆಯಿಂದ ಹೊರ ಕಳಿಸುವ ಮುನ್ನ ಸಚಿವರು, ಸಮರ್ಪಕ ಮಾಹಿತಿ ಇರದೇ ಯಾಕೆ ಬರ್ತೀರಿ? ಸಮರ್ಪಕ ಮಾಹಿತಿ ಪಡೆದು ಬಾ, ನಡೆ ಹೊರಗೆ ಎಂದು ಕಳಿಸಿದರು. ಸಚಿವರ ಸೂಚನೆ ಮೇರೆಗೆ ಅಧಿಕಾರಿ ಹೊರ ನಡೆದರು.