ಭಾರತೀಯ ಜನಗಣತಿ ಪ್ರಯುಕ್ತ ಮನೆಗಳ ಪಟ್ಟಿ ಮತ್ತು ಮನೆಗಳ ಗಣತಿ ಕಾರ್ಯವು ಏ. 1ರಿಂದ 15ನೇ ಮೇ 2026ರವರೆಗೆ ನಡೆಯಲಿದ್ದು, ಜನಗಣತಿ ಕಾರ್ಯಾಚರಣೆಗಳ ನಿರ್ದೇಶನಾಲಯ ಈ ಬಾರಿ ಸಾರ್ವಜನಿಕರಿಗೆ ಏ. 1ರಿಂದ 15ರವರೆಗೆ ಸ್ವಯಂ ಗಣತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ.

ಕನ್ನಡಪ್ರಭ ವಾರ್ತೆ ಕಾರವಾರ

ಭಾರತೀಯ ಜನಗಣತಿ ಪ್ರಯುಕ್ತ ಮನೆಗಳ ಪಟ್ಟಿ ಮತ್ತು ಮನೆಗಳ ಗಣತಿ ಕಾರ್ಯವು ಏ. 1ರಿಂದ 15ನೇ ಮೇ 2026ರವರೆಗೆ ನಡೆಯಲಿದ್ದು, ಜನಗಣತಿ ಕಾರ್ಯಾಚರಣೆಗಳ ನಿರ್ದೇಶನಾಲಯ ಈ ಬಾರಿ ಸಾರ್ವಜನಿಕರಿಗೆ ಏ. 1ರಿಂದ 15ರವರೆಗೆ ಸ್ವಯಂ ಗಣತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ.ಜಿಲ್ಲೆಯ ಎಲ್ಲ ಸಾರ್ವಜನಿಕರು ವೆಬ್ ಪೋರ್ಟಲ್ https://se.census.gov.in ಮೂಲಕ ಸ್ವಯಂ ಗಣತಿ ಮಾಡಿಕೊಳ್ಳಬಹುದಾಗಿದ್ದು, ಕುಟುಂಬದ ಯಾವುದೇ ಒಬ್ಬ ಸದಸ್ಯರು ಸ್ವಯಂ ಗಣತಿ ಮಾಡಿ ಮನೆಯ ವಿವರಗಳನ್ನು ಒದಗಿಸಿ ಮೊಬೈಲ್ /ಇಮೇಲ್‌ನಲ್ಲಿ ಸ್ವಯಂ ಗಣತಿ ಐಡಿಯನ್ನು ಪಡೆಯಬಹುದಾಗಿದೆ. ಗಣತಿದಾರರು ಮನೆಗೆ ಭೇಟಿ ನೀಡಿದಾಗ ದೃಢೀಕರಿಸಲು ಮತ್ತು ಸ್ವಯಂ ಗಣತಿ ತಂತ್ರಾಂಶದ ಅಂತಿಮ ಸಲ್ಲಿಕೆಗಾಗಿ ಸ್ವಯಂ ಗಣತಿ ಐಡಿಯನ್ನು ಅವರೊಂದಿಗೆ ಹಂಚಿಕೊಳ್ಳಬೇಕಾಗಿರುತ್ತದೆ.ಆದ್ದರಿಂದ ಜಿಲ್ಲೆಯ ಸಾರ್ವಜನಿಕರು ಸ್ವಯಂ ಗಣತಿ ಕಾರ್ಯದಲ್ಲಿ ಪಾಲ್ಗೊಂಡು ನಿಖರವಾದ ಮಾಹಿತಿಯನ್ನು ಒದಗಿಸಿ ಗಣತಿ ಕಾರ್ಯವನ್ನು ಯಶಸ್ವಿಗೊಳಿಸಬೇಕು. ಸಾರ್ವಜನಿಕರು ನೀಡಿದ ಮಾಹಿತಿಯು ಸುರಕ್ಷಿತವಾಗಿ ಹಾಗೂ ಗೌಪ್ಯವಾಗಿ ಉಳಿಯುತ್ತದೆ. ಈ ಮಾಹಿತಿಯನ್ನು ರಾಷ್ಟ್ರ ನಿರ್ಮಾಣಕ್ಕಾಗಿ ಮಾತ್ರ ಬಳಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಸ್ಕೂಟಿ ಸವಾರನ ವಿರುದ್ಧ ಪ್ರಕರಣ ದಾಖಲು:

ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ ಹಾಗೂ ನಿರ್ಲಕ್ಷ್ಯತನದಿಂದ ಸ್ಕೂಟಿ ಚಲಾಯಿಸಿ, ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ವರ್ತಿಸಿದ ಸವಾರನ ವಿರುದ್ಧ ಕಾರವಾರದ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸೋಮವಾರ ಬೆಳಗ್ಗೆ 9.30ರ ಸುಮಾರಿಗೆ ಎ.ಎಸ್.ಐ ವಿನ್ಸೆಂಟ್ ಫರ್ನಾಂಡೀಸ್ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ, ಸ್ಕೂಟಿ ನಂಬರ್ ಕೆಎ30ಯು5197ರ ಚಾಲಕ ಕೋಡಿಭಾಗದ ಸರ್ವೋದಯ ನಗರ ನಿವಾಸಿ, ಮೀನುಗಾರಿಕೆ ವೃತ್ತಿಯಲ್ಲಿರುವ ಉದಯ ಮಾರಿ ಅಂಬಿಗ(41) ಪತ್ರಿಕಾಭವನ ಕಡೆಯಿಂದ ಅಂಬೇಡ್ಕರ್ ಸರ್ಕಲ್ ಕಡೆಗೆ ಹೋಗುತ್ತಿದ್ದರು.ಎಂ.ಜಿ. ರಸ್ತೆಯಲ್ಲಿ ಸಂಚರಿಸುವ ಇತರ ವಾಹನ ಗಮನಿಸದೆ, ಯಾವುದೇ ಮುನ್ಸೂಚನೆ ನೀಡದೆ, ಅತಿವೇಗ ಹಾಗೂ ಅತ್ಯಂತ ನಿರ್ಲಕ್ಷ್ಯತನದಿಂದ ಸ್ಕೂಟಿ ಚಲಾಯಿಸಿದ್ದಾರೆ. ಇದರಿಂದ ಸಾರ್ವಜನಿಕರ ಜೀವಕ್ಕೆ ಅಪಾಯವಾಗುವ ಸಂಭವವಿತ್ತು.

ಈ ಘಟನೆಗೆ ಸಂಬಂಧಿಸಿದಂತೆ ಉದಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.