ಸಾರಾಂಶ
ಬೆಂಗಳೂರು : ಹೊಸಕೋಟೆಯ ಅವಿಮುಕ್ತೇಶ್ವರ ಸ್ವಾಮಿ ದೇವಾಲಯದ ಬ್ರಹ್ಮೋತ್ಸವ ಸಮಿತಿಯಲ್ಲಿ ಮುಸ್ಲಿಂ ವ್ಯಕ್ತಿಗೆ ಅವಕಾಶ ನೀಡಿರುವುದನ್ನು ಟೀಕಿಸಿ ಬಳಿಕ ತನ್ನ ಪೋಸ್ಟ್ ಡಿಲೀಟ್ ಮಾಡಿರುವ ರಾಜ್ಯ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ‘ಬಿಜೆಪಿಯು ತಾನು ಹೇಳಿದ ಸುಳ್ಳನ್ನು ಅಳಿಸಿಹಾಕುವುದೆಂದರೆ ವಾಂತಿ ಮಾಡಿ, ಅದನ್ನು ಮಾಡಿದವರೇ ತಿಂದ ಹಾಗೆ. ತಾನು ಹೇಳಿದ ಸುಳ್ಳಿಗೆ ಮೊದಲು ರಾಜ್ಯದ ಕ್ಷಮೆ ಕೋರಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಹೊಸಕೋಟೆಯ ಅವಿಮುಕ್ತೇಶ್ವರ ಸ್ವಾಮಿ ದೇವಾಲಯದ ಬ್ರಹ್ಮೋತ್ಸವ ಸಮಿತಿಯಲ್ಲಿ ನವಾಜ್ ಎಂಬ ಒಬ್ಬ ಮುಸ್ಲಿಂ ವ್ಯಕ್ತಿಗೆ ಅವಕಾಶ ನೀಡಿ ಹೊಸಕೋಟೆ ತಹಸೀಲ್ದಾರ್ ಕಚೇರಿ ಆದೇಶ ಹೊರಡಿಸಿತ್ತು.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ರಾಜ್ಯ ಬಿಜೆಪಿಯು, ‘ನಮ್ಮ ದೇವಾಲಯಗಳನ್ನು ಲೂಟಿ ಮಾಡಿದ ಬಳಿಕ ಹಿಂದೂ ವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೇವಾಲಯ ಹಾಗೂ ಅವುಗಳ ಸಂಪನ್ಮೂಲವನ್ನು ನಿಯಂತ್ರಿಸಲು ಹಿಂದೂಯೇತರ ವ್ಯಕ್ತಿಗಳಿಗೆ ಅವಕಾಶ ನೀಡಿದ್ದಾರೆ. ಇಂದು ಒಂದು ದೇವಾಲಯ ಮುಂದೆ ರಾಜ್ಯದ ಎಲ್ಲಾ ದೇವಾಲಯ. ಕಾಂಗ್ರೆಸ್ ಬಗ್ಗೆ ಎಚ್ಚರವಿರಲಿ’ ಎಂದು ಟೀಕಿಸಿತ್ತು.ಸುಳ್ಳಿನಿಂದ ಸಾಮಾಜಿಕ ಸ್ವಾಸ್ಥ್ಯ
ಹಾಳು ಮಾಡಲು ಯತ್ನ: ರೆಡ್ಡಿ
ಇದರ ಬೆನ್ನಲ್ಲೇ ಎಕ್ಸ್ ಖಾತೆ ಮೂಲಕ ಸ್ಪಷ್ಟನೆ ನೀಡಿದ್ದ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಬ್ರಹ್ಮೋತ್ಸವ ಸಮಿತಿಯಲ್ಲಿ ಸರ್ವ ಸಮುದಾಯದ ಸದಸ್ಯರಿಗೂ ಅವಕಾಶ ನೀಡುವುದು ಎಲ್ಲಾ ಸರ್ಕಾರಗಳ ಅವಧಿಯಲ್ಲೂ ಇದೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಸಹ ಅಂದಿನ ಸಚಿವರಾಗಿದ್ದ ಎಂಟಿಬಿ ನಾಗರಾಜ್ ಅವರು 2022ನೇ ಸಾಲಿನಲ್ಲಿ ಅಫ್ಸರ್ ಹಾಗೂ 2020-21ರಲ್ಲಿ ಇಮ್ತಿಯಾಜ್ ಪಾಷಾ ಅವರನ್ನು ನೇಮಿಸಲಾಗಿತ್ತು ಎಂದು ಹಿಂದಿನ ಆದೇಶಗಳನ್ನು ಬಹಿರಂಗಪಡಿಸಿದರು.
ಬಿಜೆಪಿ ಕಣ್ಣು ತೆರೆದು ನೋಡಿ ವಿವೇಕದಿಂದ ವರ್ತಿಸಿದರೆ ಉತ್ತಮ. ಅನ್ಯ ಧರ್ಮೀಯರ ಬಗ್ಗೆ ದ್ವೇಷವನ್ನು ಬಿತ್ತಿ ಅವರ ವಿರುದ್ದ ಹಿಂದೂ ಸಮುದಾಯವನ್ನು ಎತ್ತಿ ಕಟ್ಟುತ್ತಿದ್ದಾರೆ. ತನ್ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರಣಹದ್ದುಗಳಂತೆ ಸದಾ ಹಪಹಪಿಸುವ ಬಿಜೆಪಿಗರು ಸುಳ್ಳು ಮಾಹಿತಿಯನ್ನು ಹಂಚಿಕೊಳ್ಳುತ್ತಾ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಗೆಡವುತ್ತಿದ್ದಾರೆಂದು ಟೀಕಿಸಿದರು.
ನಮ್ಮ ಕೈಗೆ ಬಡಿಗೆ ಕೊಟ್ಟು ಯಾಕೆ ಬಡಿಸಿಕೊಳ್ತೀರಿ: ಸಿದ್ದರಾಮಯ್ಯ
ಇದೇ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಬಿಜೆಪಿ ನಾಯಕರೇ, ನಮ್ಮ ಕೈಗೆ ಬಡಿಗೆ ಕೊಟ್ಟು ಮತ್ತೆ ಮತ್ತೆ ಯಾಕೆ ಬಡಿಸಿಕೊಳ್ಳೀರಿ? ನಿಮ್ಮ ಸುಳ್ಳುಗಳನ್ನು ಬಯಲು ಮಾಡಲು ಅವಕಾಶ ಕೊಟ್ಟು ಸಮಾಜದ ಎದುರು ಯಾಕೆ ಬೆತ್ತಲಾಗುತ್ತೀರಿ?’ ಎಂದು ಪ್ರಶ್ನಿಸಿದರು.
ನಿಮ್ಮದೇ ಪಕ್ಷದ ಸರ್ಕಾರ 2020 ಮತ್ತು 2022ರ ಸಾಲಿನಲ್ಲಿ ಇದೇ ಬ್ರಹ್ಮೋತ್ಸವ ಸಮಿತಿಗೆ ಮುಸ್ಲಿಮ್ ಸಮುದಾಯ ವ್ಯಕ್ತಿಗಳನ್ನು ಸದಸ್ಯರನ್ನಾಗಿ ಮಾಡಿತ್ತು. ಆಗ ದೇವಸ್ಥಾನದ ಸಂಪತ್ತು ಲೂಟಿ ಮಾಡುವ ದುರುದ್ದೇಶದಿಂದಲೇ ಬಿಜೆಪಿ ಸರ್ಕಾರ ನೇಮಿಸಿತ್ತೇ? ನಿಮಗೆ ಮಾನ-ಮರ್ಯಾದೆ ಎನ್ನುವುದೇನಾದರೂ ಇದ್ದರೆ ಹೇಳಿಕೆ ಹಿಂಪಡೆದು ರಾಜ್ಯದ ಜಾತ್ಯತೀತ ಕನ್ನಡಿಗರ ಕ್ಷಮೆ ಕೇಳಬೇಕೆಂದು ಒತ್ತಾಯಿಸುತ್ತೇನೆ ಎಂದು ಹೇಳಿದರು.
ಇದರ ಬೆನ್ನಲ್ಲೇ ರಾಜ್ಯ ಬಿಜೆಪಿ ಟ್ವೀಟ್ ಡಿಲೀಟ್ ಮಾಡಿತು.ವಾಂತಿ ಮಾಡಿ, ಮಾಡಿದವರೇ ತಿಂದ ಹಾಗೆ: ಸಿಎಂ
ಬಿಜೆಪಿ ಡಿಲೀಟ್ ಮಾಡಿದ ಪೋಸ್ಟ್‌ನ್ನು ಉಲ್ಲೇಖಿಸಿ ಮತ್ತೆ ಸರಣಿ ಪೋಸ್ಟ್ ಮಾಡಿದ ಸಿದ್ದರಾಮಯ್ಯ, ‘ತಾನು ಹೇಳಿದ ಸುಳ್ಳನ್ನು ಅಳಿಸಿಹಾಕುವುದೆಂದರೆ ವಾಂತಿ ಮಾಡಿ, ಅದನ್ನು ಮಾಡಿದವರೇ ತಿಂದ ಹಾಗೆ. ಸುಳ್ಳು ಹೇಳಿ ಸಿಕ್ಕಿಹಾಕಿಕೊಂಡ ಲಜ್ಜಗೆಟ್ಟ ಬಿಜೆಪಿಯವರು ನಾವು ಸತ್ಯವನ್ನು ಬಿಚ್ಚಿಟ್ಟ ಕೂಡಲೇ ಹೇಳಿಕೆಯನ್ನು ಅಳಸಿಹಾಕಿದ್ದಾರೆ. ಈ ಬಗ್ಗೆ ಇನ್ನೂ ರಾಜ್ಯದ ಜನರ ಕ್ಷಮೆ ಕೇಳಿಲ್ಲ’ ಎಂದು ಹೇಳಿದ್ದಾರೆ.