2ನೇ ಆಷಾಢ ಶುಕ್ರವಾರ- ಚಾಮುಂಡಿಬೆಟ್ಟದಲ್ಲಿ ಭಕ್ತರ ದಂಡು

| N/A | Published : Jul 05 2025, 12:18 AM IST / Updated: Jul 05 2025, 12:40 PM IST

2ನೇ ಆಷಾಢ ಶುಕ್ರವಾರ- ಚಾಮುಂಡಿಬೆಟ್ಟದಲ್ಲಿ ಭಕ್ತರ ದಂಡು
Share this Article
  • FB
  • TW
  • Linkdin
  • Email

ಸಾರಾಂಶ

ಎರಡನೇ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು.

 ಮೈಸೂರು :  ಎರಡನೇ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು.

ಮುಂಜಾನೆಯಿಂದಲೇ ರಾಜ್ಯದ ಮೂಲೆ ಮೂಲೆಯಿಂದ ಚಾಮುಂಡಿಬೆಟ್ಟಕ್ಕೆ ಆಗಮಿಸಿದ್ದ ಭಕ್ತರು, ಸರತಿ ಸಾಲಿನಲ್ಲಿ ನಿಂತು ಜಯಘೋಷ ಕೂಗುತ್ತ ಚಾಮುಂಡೇಶ್ವರಿ ದರ್ಶನ ಪಡೆದು ಪುನೀತರಾದರು.

ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರ ವಾಹನಕ್ಕೆ ನಿರ್ಬಂಧ ವಿಧಿಸಿದ್ದರಿಂದ ಲಲಿತಮಹಲ್ ಬಳಿಯಿಂದ ಬಸ್ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಮಂದಿ ಮೆಟ್ಟಿಲುಗಳಿಗೆ ಅರಿಶಿಣ ಕುಂಕುಮ ಹಚ್ಚುತ್ತಾ ಬೆಟ್ಟಕ್ಕೆ ಬಂದು ಭಕ್ತಿಭಾವ ಮೆರೆದರು. ಧರ್ಮ ದರ್ಶನದೊಂದಿಗೆ 300 ರೂ, 2000 ರೂ. ವಿಶೇಷ ದರ್ಶನದ ಸರತಿ ಸಾಲಿನಲ್ಲೂ ಹೆಚ್ಚು ಜನ ಕಂಡು ಬಂದರು. 2000 ರೂ. ಟಿಕೆಟ್‌ ಗೆ ಹೆಚ್ಚಿನ ಬೇಡಿಕೆ ಇತ್ತು.

2ನೇ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಮುಂಜಾನೆ 3 ಗಂಟೆಯಿಂದಲೇ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ಆರಂಭವಾಯಿತು. ಮೊದಲಿಗೆ ದೇವಿಗೆ ಮಹಾನ್ಯಾಸಪೂರ್ವಕ ರುದ್ರಾಭಿಷೇಕ, ಅಭಿಷೇಕ, ಪಂಚಾಮೃತ ಅಭಿಷೇಕ ಸಲ್ಲಿಸಿದ ಬಳಿಕ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ನೀಡಲಾಯಿತು. ನಂತರ ಬೆಳಗ್ಗೆ 11ಕ್ಕೆ ಪೂಜೆ ಸಲ್ಲಿಸಿ, ಮಹಾಮಂಗಳಾರತಿ ನೆರವೇರಿಸಲಾಯಿತು.

ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ಪೂಜಾ ವಿಧಿ ವಿಧಾನ ನೆರವೇರಿಸಲಾಯಿತು.

ಚಾಮುಂಡೇಶ್ವರಿಗೆ ಲಕ್ಷ್ಮೀ ಅಲಂಕಾರ

ಆಷಾಢ ಮಾಸದ ಪ್ರತಿ ಶುಕ್ರವಾರಗಳಲ್ಲೂ ಚಾಮುಂಡೇಶ್ವರಿಗೆ ವಿವಿಧ ರೀತಿಯ ಅಲಂಕಾರ ಮಾಡಲಾಗುತ್ತಿದ್ದು, ಈ ವಾರ ದೇವಿಗೆ ಲಕ್ಷ್ಮೀ ಅಲಂಕಾರ ಮಾಡಲಾಗಿತ್ತು. ಕಿತ್ತಳೆ, ನೀಲಿ ಬಣ್ಣದ ಸೀರೆಯುಟ್ಟ, ವಿವಿಧ ಹೂವುಗಳಿಂದ ಸಿಂಗಾರಗೊಂಡು ಕಂಗೊಳಿಸುತ್ತಿದ್ದ ಚಾಮುಂಡೇಶ್ವರಿಯನ್ನು ಕಂಡು ಭಕ್ತರು ಪುನೀತರಾದರು.

ಮಾವಿನಕಾಯಿ, ಮೆಕ್ಕೆಜೋಳ, ಮೋಸಂಬಿ, ಅನಾನಸ್ ಸೇರಿದಂತೆ ವಿವಿಧ ಫಲಪುಷ್ಪಗಳಿಂದ ದೇವಸ್ಥಾನದ ಆವರಣವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.

ಬೆಟ್ಟಕ್ಕೆ ಭೇಟಿ ನೀಡಿದ ಭಕ್ತರಿಗೆ ಅರಣ್ಯ ಮಾಹಿತಿ ಭವನದ ಆವರಣದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಉಪ್ಪಿಟ್ಟು, ಕೇಸರಿಬಾತ್, ಬಾತ್ ವಿತರಿಸಲಾಯಿತು. ಬೆಳಗ್ಗೆ 6.30 ರಿಂದ ಆರಂಭವಾದ ಪ್ರಸಾದ ವಿತರಣೆ ಸಂಜೆ 4 ರವರೆಗೂ ನಡೆಯಿತು.

ನೂಕು ನುಗ್ಗಲಿಲ್ಲ, ಕಾಯಲಿಲ್ಲ

ಮೊದಲ ಆಷಾಢ ಶುಕ್ರವಾರ ಅವ್ಯವಸ್ಥೆಯಿಂದ ಹೈರಾಣಾಗಿದ್ದ ಭಕ್ತರು 2ನೇ ಶುಕ್ರವಾರ ಯಾವುದೇ ನೂಕುನುಗ್ಗಲ್ಲಿಲ್ಲದೆ, ಗಂಟೆಗಟ್ಟಲೆ ಸರತಿ ಕಾಯದೆ ದರ್ಶನ ಪಡೆದರು.

ಮೊದಲ ಶುಕ್ರವಾರ ನಿರೀಕ್ಷೆಗೂ ಮೀರಿ ಭಕ್ತರು ಬೆಟ್ಟಕ್ಕೆ ಬಂದಿದ್ದರು. ಜೊತೆಗೆ ಜಿಲ್ಲಾಡಳಿತ ಮೆಟ್ಟಿಲುಹತ್ತಿ ಬಂದವರಿಗೆ ನೇರ ದರ್ಶನ ಎಂದು ಹೇಳಿದ್ದರಿಂದ ಮೆಟ್ಟಿಲಿನ ಮೂಲಕವೇ ಸಾವಿರಾರು ಭಕ್ತರು ಬಂದಿದ್ದರು. ಇದರಿಂದ ನೂಕುನುಗ್ಗಲು ಉಂಟಾಗಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಹಲವರು ಸಾಮಾಜಿಕ ಜಾಲತಾಣದಲ್ಲಿ ಅವ್ಯವಸ್ಥೆಯ ಕುರಿತು ಕಿಡಿಕಾರಿದ್ದರು. ಇದರಿಂದ ಎಚ್ಚೆತ್ತ ಜಿಲ್ಲಾಡಳಿತ ಸಮಸ್ಯೆ ಸರಿಪಡಿಸಿ ಸೂಕ್ತ ದರ್ಶನಕ್ಕೆ ಅನುವು ಮಾಡಿಕೊಟ್ಟಿದೆ. ಭಕ್ತರು ಖುಷಿಯಿಂದಲೇ ದರ್ಶನ ಪಡೆದು ತೆರಳುತ್ತಿದ್ದರು. ಮೆಟ್ಟಿಲುಗಳ ಮೂಲಕ ಬೆಟ್ಟಕ್ಕೆ ಬರಲು ಸಮಯ ನಿಗದಿ ಮಾಡಿದ್ದರಿಂದ ಮೆಟ್ಟಿಲುಗಳಲ್ಲಿ ಹೆಚ್ಚು ಭಕ್ತರು ಕಾಣಿಸಲಿಲ್ಲ. ಅಲ್ಲದೆ ಮೊದಲ ಶುಕ್ರವಾರಕ್ಕೆ ಹೋಲಿಸಿದರೆ ಎರಡನೇ ಶುಕ್ರವಾರ ಭಕ್ತರ ಸಂಖ್ಯೆ ಕಡಿಮೆಯಿತ್ತು. ಧರ್ಮ ದರ್ಶನ ಮಾಡಿದವರಿಗೆ ಡ್ರೈ ಫ್ರೂಟ್ಸ್, ಮಹಿಳೆಯರಿಗೆ ಮಡಿಲಕ್ಕಿ ವಿತರಿಸಲಾಯಿತು.

ಗಣ್ಯರಿಂದ ದರ್ಶನ

ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ್ದ ಅಸಂಖ್ಯಾತ ಭಕ್ತರೊಂದಿಗೆ ಹಲವು ಗಣ್ಯರು ದೇವಿಯ ದರ್ಶನ ಪಡೆದರು. ಡಿಸಿಎಂ ಡಿ.ಕೆ. ಶಿವಕುಮಾರ್- ಪತ್ನಿ ಉಷಾ, ಸಚಿವ ಚಲುವರಾಯಸ್ವಾಮಿ, ಮಾಜಿ ಸಚಿವ ಎಚ್.ಡಿ. ರೇವಣ್ಣ, ಎಂಎಲ್ಸಿ ಸೂರಜ್ ರೇವಣ್ಣ, ಶಾಸಕ ಜಿ.ಡಿ. ಹರೀಶ್‌ ಗೌಡ, ನಟ ದರ್ಶನ್- ಪತ್ನಿ ವಿಜಯಲಕ್ಷ್ಮೀ, ನಿರ್ದೇಶಕ ದಿನಕರ್ ತೂಗುದೀಪ್- ಪತ್ನಿ ಮಾನಸ, ನಟರಾದ ಡಾಲಿ ಧನಂಜಯ್, ಧನ್ವೀರ್, ಚಿಕ್ಕಣ್ಣ, ಕುರಿ ಪ್ರತಾಪ್ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿದ್ದರು.

ನಗರದ ವಿವಿಧೆಡೆ ಆಚರಣೆ

ಚಾಮುಂಡಿಬೆಟ್ಟದಂತೆ ನಗರದ ವಿವಿಧೆಡೆ ಎರಡನೇ ಆಷಾಢ ಶುಕ್ರವಾರದ ಸಂಭ್ರಮ ಮನೆ ಮಾಡಿತ್ತು. ವಿವಿಧ ಬಡಾವಣೆಗಳಲ್ಲಿ ಚಾಮುಂಡೇಶ್ವರಿ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ತಮ್ಮ ಸಮೀಪದ ದೇವಸ್ಥಾನಗಳಿಗೆ ಭೇಟಿ ನೀಡಿದ ಭಕ್ತರು ದೇವಿಯ ದರ್ಶನ ಪಡೆದು, ಪೂಜೆ ಸಲ್ಲಿಸಿದರು.

ನಗರದ ಹಲವು ಬಡಾವಣೆಗಳು ಹಾಗೂ ವೃತ್ತಗಳಲ್ಲೂ 2ನೇ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡಿ ದೇವಿಗೆ ಪೂಜೆ ಸಲ್ಲಿಸಿ, ಪ್ರಸಾದ ವಿತರಿಸಲಾಯಿತು. ನಟ ದರ್ಶನ್ ಅಭಿಮಾನಿಗಳು ಚಾಮುಂಡಿಬೆಟ್ಟದ ಮೆಟ್ಟಿಲು ಹತ್ತಿ ಸಾಗಿದ ಭಕ್ತರಿಗೆ ಬಾದಾಮ್ ಪುರಿ, ಲಾಡು, ಮೈಸೂರು ಪಾಕ್ ವಿತರಿಸಿದರು.

Read more Articles on