ಸಾರಾಂಶ
ಧಾರವಾಡ: ಸಾರ್ವಜನಿಕರ ಅನುಕೂಲಕ್ಕಾಗಿ ಅಳ್ನಾವರದ ಕೇಂದ್ರ ಸ್ಥಾನದಲ್ಲಿ ಪ್ರಜಾಸೌಧ ನಿರ್ಮಾಣ ಮಾಡಬೇಕೆಂದು ಬುಧವಾರ ಅಳ್ನಾವರ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಕರೆ ನೀಡಿದ್ದ ಬಂದ್ ಯಶಸ್ವಿಯಾಗಿದೆ.
ವ್ಯಾಪಾರಸ್ಥರು, ರೈತರು, ಸಂಘ- ಸಂಸ್ಥಗಳು, ಸಾರ್ವಜನಿಕರು ಬುಧವಾರ ಬೆಳಗ್ಗೆಯಿಂದ ಸಂಜೆ 6ರ ವರೆಗೆ ಅಂಗಡಿ -ಮುಂಗಟ್ಟು ಬಂದ್ ಮಾಡಿ ತಮ್ಮ ವ್ಯಾಪಾರ - ವಹಿವಾಟು ಸ್ಥಗಿತಗೊಳಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಸಂಪೂರ್ಣ ಶಾಂತಿಯುತವಾಗಿ ನಡೆದ ಹೋರಾಟದಲ್ಲಿ ಪಟ್ಟಣದ ಬಸ್ ನಿಲ್ದಾಣದಿಂದ ತಹಸೀಲ್ದಾರ್ ಕಚೇರಿ ವರೆಗೆ ಪಾದಯಾತ್ರೆ ಮೂಲಕ ಹೋಗಿ ಸಂಜೆ ವರೆಗೂ ಸಭೆ, ಭಾಷಣ, ಭಜನೆ ಮೂಲಕ ಹೋರಾಟಗಾರರು ತಮ್ಮ ಒತ್ತಾಯವನ್ನು ಸರ್ಕಾರದ ಎದುರಿಗೆ ಇಟ್ಟರು.ಅಳ್ನಾವರ ಸಾರ್ವಜನಿಕರ ವಿರೋಧದ ಮಧ್ಯೆಯೂ ನಿಯೋಜಿತ ಸ್ಥಳದಲ್ಲಿ ಭೂಮಿಪೂಜೆ ನಡೆದಿದ್ದು, ಇಲ್ಲಿ ಪ್ರಜಾಸೌಧ ನಿರ್ಮಾಣವಾದರೆ ತುಂಬ ತೊಂದರೆಗಳಿವೆ. ಬಸ್ ನಿಲ್ದಾಣದಿಂದ ಸುಮಾರು ಎರಡೂವರೆ ಕಿ.ಮೀ. ದೂರ ಇದ್ದು ಕಚೇರಿಗೆ ಹೋಗಿ ಬರಲು ಮಹಿಳೆಯರು, ವೃದ್ಧರಿಗೆ ತುಂಬ ತೊಂದರೆ ಆಗಲಿದೆ. ಇಡೀ ಅಳ್ನಾವರ ಉತ್ತರ ಭಾಗಕ್ಕಿದ್ದು, ನಿಯೋಜಿತ ಸ್ಥಳವು ದಕ್ಷಿಣದ ತುದಿಗೆ ಹಳಿಯಾಳ -ಅಳ್ನಾವರ ಗಡಿಗಿದೆ. ಈ ಸ್ಥಳಕ್ಕೆ ಹೋಗಿ ಬರಲು ಇಡೀ ಅಳ್ನಾವರ ಜನತೆ ರೇಲ್ವೆ ಕೆಳಸೇತುವೆ ಬಳಸಬೇಕು. ಮಳೆಗಾಲದಲ್ಲಿ ಅಲ್ಲಿ ನೀರು ನಿಲ್ಲುತ್ತಿದ್ದು, ರಸ್ತೆ ಬಂದ್ ಆಗಿರುತ್ತದೆ. ಎಲ್ಲ ಸೌಕರ್ಯಗಳು ಪಟ್ಟಣದಲ್ಲಿದ್ದು ಪ್ರಜಾಸೌಧ ಕಚೇರಿ ಮಾತ್ರ ಪಟ್ಟಣ ಬಿಟ್ಟು ದೂರ ಇರುವುದು ಯಾವ ನ್ಯಾಯ ಎಂದು ಹೋರಾಟಗಾರರು ಪ್ರಶ್ನಿಸಿದರು.
ನಿಯೋಜಿತ ಸ್ಥಳವು ಸ್ಮಶಾನದ ಜಾಗವನ್ನು ದಾಟಿ ಹೋಗಬೇಕು. ಜತೆಗೆ ಅಪಘಾತದ ವಲಯವೂ ಹೌದು. ನಿರ್ಜನ ಪ್ರದೇಶವಾಗಿದ್ದು, ಈ ಮೊದಲು ತ್ಯಾಜ್ಯ ಸಂಗ್ರಹದ ಸ್ಥಳವಾಗಿತ್ತು. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಅಲ್ಲಿ ಪ್ರಜಾಸೌಧ ಬೇಡ. ಪಟ್ಟಣದ ಎಪಿಎಂಸಿ ಸೇರಿದಂತೆ ಸಾಕಷ್ಟು ಜಾಗಗಳಿದ್ದು, ಜನರ ಅನುಕೂಲ ಗಮನಿಸಿ ಜಿಲ್ಲಾಡಳಿತ ಕೂಡಲೇ ಪ್ರಜಾಸೌಧದ ಜಾಗ ಬದಲಿಸಬೇಕು. ಇಲ್ಲದೇ ಹೋದಲ್ಲಿ ಸಾರ್ವಜನಿಕರು ನಿರಂತರ ಹೋರಾಟ ಮಾಡಬೇಕಾದೀತು ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಹೋರಾಟ ವೇದಿಕೆಯ ಮುಖಂಡರಾದ ಸಂದೀಪ ಪಾಟೀಲ, ಮಹಾದೇವ ಸಾಗರೆಕರ, ಶಿವಾಜಿ ಡೊಳ್ಳಿನ, ಲಿಂಗರಾಜ ಮೂಲಿಮನಿ, ಯಲ್ಲಾರಿ ಹುಬ್ಬಳ್ಳಿಕರ, ರಾಜು ಕರ್ಲೆಕರ, ಲಖನ ಬರಗುಂಡಿ, ಮಲ್ಲಪ್ಪ ಗಾಣಿಗೇರ, ಪುಂಡಲೀಕ ಪಾರಧಿ, ಭರತೇಶ ಪಾಟೀಲ, ಸಂತೋಷ ಪೂಜಾರಿ, ಕಲ್ಮೇಶ ಚಚಡಿ, ಯಲ್ಲಪ್ಪ ಕುನಕಿಕೋಪ್ಪ, ರವಿ ಕಂಬಳಿ, ಪುಂಡಲೀಕ ಕರ್ಜಗಿ, ಪರಶುರಾಮ ಪಾಲಕರ. ಅರ್ಜುನ ಬೆನ್ನಾಳಕರ ಸೇರಿದಂತೆ ಹಲವರಿದ್ದರು.