ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಮುಖ್ಯಸ್ಥ ಅಲೋಕಕುಮಾರ ಧಾರವಾಡ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಕಾರಾಗೃಹದ ಭದ್ರತೆ, ಕಾರ್ಯಚಟುವಟಿಕೆಗಳು ಮತ್ತು ಆಡಳಿತ ಪರಿಶೀಲನೆ ಮಾಡಿದರು.

ಧಾರವಾಡ:

ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಮುಖ್ಯಸ್ಥ ಅಲೋಕಕುಮಾರ ಧಾರವಾಡ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಕಾರಾಗೃಹದ ಭದ್ರತೆ, ಕಾರ್ಯಚಟುವಟಿಕೆಗಳು ಮತ್ತು ಆಡಳಿತ ಪರಿಶೀಲನೆ ಮಾಡಿದರು.

ಬಂದಿಗಳ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದ ಭಾಗವಾಗಿ ರುಡ್‌ಸೆಟ್ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಎರೆಗೊಬ್ಬರ ತಯಾರಿಕೆ ಮತ್ತು ಬ್ಯಾಗ್ ಹಾಗೂ ಎನ್ವೆಲಪ್ ತಯಾರಿಕೆ ತರಬೇತಿಯನ್ನು ಇದೇ ಸಂದರ್ಭದಲ್ಲಿ ಅವರು ಉದ್ಘಾಟಿಸಿದರು. ಕಾರಾಗೃಹದಲ್ಲಿ ಹಮ್ಮಿಕೊಳ್ಳಲಾಗುವ ಪ್ರತಿಯೊಂದು ತರಬೇತಿಗಳು ಹಾಗೂ ಮನಃಪರಿವರ್ತನಾ ಕಾರ್ಯಕ್ರಮಗಳ ಸದುಪಯೋಗವನ್ನು ಬಂಧಿಗಳು ಪಡೆದುಕೊಂಡು ಉತ್ತಮ ನಾಗರಿಕರಾಗಿ ಹೊರಬರಬೇಕೆಂದು ತಿಳಿಸಿದರು.

ಉತ್ತಮ ನಡತೆಯುಳ್ಳ ಬಂಧಿಗಳಿಗೆ ಇಲಾಖೆಯಿಂದ ನೀಡಲಾಗುವ ಸೌಲಭ್ಯಗಳ ಬಗ್ಗೆ ವಿವರಿಸಿದ ಅವರು, ಕಾರಾಗೃಹದಲ್ಲಿ ಉತ್ತಮ ವಾತಾವರಣ ನಿರ್ಮಿಸಲು ಕಾರಾಗೃಹ ಸಿಬ್ಬಂದಿಗಳೊಂದಿಗೆ ಸಹಕರಿಸಲು ಸೂಚಿಸಿದರು. ಕಾರಾಗೃಹದ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಹಾನಿರ್ದೇಶಕರು ಭಜನಾ ತಂಡವನ್ನು ಪ್ರಶಂಸಿಸಿ, ಕಾರಾಗೃಹದ ವಿವಿಧ ವಿಭಾಗಗಳಲ್ಲಿ ಉತ್ತಮ ಕೆಲಸ ನಿರ್ವಹಿಸುವ ಬಂದಿಗಳಿಗೆ ವಿಶೇಷ ಮಾಫಿಯನ್ನು ಮಂಜೂರು ಮಾಡಿದರು. ಕಾರಾಗೃಹದ ಕಾರ್ಖಾನೆ ಉತ್ಪನ್ನಗಳನ್ನು ಪರಿಶೀಲಿಸಿ, ಗುಣಮಟ್ಟ ಕಾಯ್ದುಕೊಳ್ಳುವಂತೆ ಸಿಬ್ಬಂದಿಗೆ ಸೂಚಿಸಿದರು.

ಸಂಸ್ಥೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಶಿಸ್ತು, ಸಮಯಪಾಲನೆ ಹಾಗೂ ಜವಾಬ್ದಾರಿಯುತ ಕರ್ತವ್ಯವನ್ನು ನಿರ್ವಹಿಸುವಂತೆ ಹಾಗೂ ಬಂದಿಗಳ ಸಂಬಂಧಿಗಳಿಂದ ಯಾವುದೇ ಕಾರಣಕ್ಕೂ ಒಳಗೆ ನಿಷೇಧಿತ ವಸ್ತುಗಳು ಬರದಂತೆ ಎಚ್ಚರ ವಹಿಸಬೇಕು. ಈ ವಿಷಯದಲ್ಲಿ ಕಟ್ಟುನಿಟ್ಟಿನ ಭದ್ರತೆ ಇರಬೇಕೆಂದು ಸೂಚನೆ ಹಾಗೂ ನಿರ್ದೇಶನ ನೀಡಿದರು.

ನಂತರ ಕಾರಾಗೃಹ ಅಧಿಕಾರಿಗಳೊಂದಿಗೆ ಆಡಳಿತ ಮತ್ತು ಭದ್ರತೆ ಕುರಿತಂತೆ ಸಭೆ ನಡೆಸಿದರು. ಕಾರಾಗೃಹಗಳ ಉಪಮಹಾನಿರೀಕ್ಷಕ ಟಿ.ಪಿ. ಶೇಷ, ಕೇಂದ್ರ ಕಾರಾಗೃಹ ಅಧೀಕ್ಷಕ ರಘುಪತಿ ಸಿ.ಜೆ., ಸಹಾಯಕ ಅಧೀಕ್ಷಕ ಎನ್.ಎಸ್. ಶಿವಕುಮಾರ, ಹಾವೇರಿಯ ಜಿಲ್ಲಾ ಕಾರಾಗೃಹ ಅಧೀಕ್ಷಕಿ ನಾಗರತ್ನಾ ದಾಶ್ಯಾಳ, ಶಹಾಬೊದ್ದೀನ್ ಕೆ. ಇದ್ದರು.