ಶಿಕ್ಷಣ ಜತೆ ಕ್ರೀಡಾ ಮನೋಭಾವನೆ ಅಗತ್ಯ

| Published : Nov 11 2023, 01:16 AM IST / Updated: Nov 11 2023, 01:17 AM IST

ಸಾರಾಂಶ

ಕ್ರೀಡಾ ಸ್ಪರ್ಧೆಯಲ್ಲಿ ಸೋಲು-ಗೆಲುವು ಸಹಜ. ಅವುಗಳನ್ನು ಸಮವಾಗಿ ಸ್ವೀಕರಿಸಿ ಕ್ರೀಡಾಪಟುಗಳು ಕ್ರೀಡೆಯಲ್ಲಿ ಭಾಗಿಯಾಗಬೇಕು. ನಿತ್ಯವೂ ಅಭ್ಯಾಸಗೈದು ಕ್ರೀಡೆಯಲ್ಲಿ ಗೆಲ್ಲಬೇಕು ಎಂಬ ಹಂಬಲ ಪ್ರತಿಯೊಬ್ಬರಲ್ಲಿ ಇರುತ್ತದೆ. ಕ್ರೀಡೆಯೆಂಬುದು ಸ್ನೇಹದ ಸಂಕೇತ. ಕ್ರೀಡೆಯಲ್ಲಿ ಗೆದ್ದ ಎದುರಾಳಿಗಳು ಗೆದ್ದಿರುವುದು ಸ್ನೇಹವನ್ನು ಎಂದು ಭಾವಿಸಬೇಕು

ಕನ್ನಡಪ್ರಭ ವಾರ್ತೆ ಕೊಪ್ಪಳ

ಶಿಕ್ಷಣ ಜತೆ ಕ್ರೀಡಾ ಮನೋಭಾವನೆ ಪ್ರತಿಯೊಬ್ಬರಲ್ಲಿ ಅತ್ಯಗತ್ಯ ಎಂದು ಡಿಡಿಪಿಯು ಜಗದೀಶ ಜಿ. ಹೇಳಿದರು.

ನಗರದ ಕಿಡದಾಳದ ಶಾರದಾ ಪದವಿ ಪೂರ್ವ ಕಾಲೇಜು, ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರ‍ಯದಲ್ಲಿ ಜರುಗಿದ ರಾಜ್ಯ ಮಟ್ಟದ ನೆಟ್‌ಬಾಲ್ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳಲ್ಲಿ ಕ್ರ‍ೀಡಾ ಮನೋಭಾವನೆ ಕಡಿಮೆಯಾಗುತ್ತಿದೆ. ಶಿಕ್ಷಣದ ಜೊತೆಗೆ ಕ್ರ‍ೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಕ್ರೀಡೆಯಿಂದ ಕ್ರೀಯಾಶೀಲತೆ ಹೆಚ್ಚುತ್ತದೆ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗಿಯಾಗುವುದರಿಂದ ಅವರಲ್ಲಿ ದೈಹಿಕ ಶಕ್ತಿ, ಏಕಾಗ್ರತೆ ಹೆಚ್ಚುತ್ತದೆ. ಸಕ್ರಿಯವಾಗಿ ಶಾಲೆ, ಕಾಲೇಜುಗಳಲ್ಲಿ ಕ್ರೀಡೆಯಲ್ಲಿ ಭಾಗಿಯಾಗಬೇಕು. ಕ್ರೀಡೆಯಲ್ಲಿ ಆಸಕ್ತಿ ವಹಿಸಿದರೆ ಅಭ್ಯಾಸದಲ್ಲೂ ಆಸಕ್ತಿ ವಹಿಸಲು ಸಾದ್ಯವಾಗುತ್ತದೆ. ಕ್ರೀಡಾ ಸ್ಪರ್ಧೆಯಲ್ಲಿ ಸೋಲು-ಗೆಲುವು ಸಹಜ. ಅವುಗಳನ್ನು ಸಮವಾಗಿ ಸ್ವೀಕರಿಸಿ ಕ್ರೀಡಾಪಟುಗಳು ಕ್ರೀಡೆಯಲ್ಲಿ ಭಾಗಿಯಾಗಬೇಕು. ನಿತ್ಯವೂ ಅಭ್ಯಾಸಗೈದು ಕ್ರೀಡೆಯಲ್ಲಿ ಗೆಲ್ಲಬೇಕು ಎಂಬ ಹಂಬಲ ಪ್ರತಿಯೊಬ್ಬರಲ್ಲಿ ಇರುತ್ತದೆ. ಕ್ರೀಡೆಯೆಂಬುದು ಸ್ನೇಹದ ಸಂಕೇತ. ಕ್ರೀಡೆಯಲ್ಲಿ ಗೆದ್ದ ಎದುರಾಳಿಗಳು ಗೆದ್ದಿರುವುದು ಸ್ನೇಹವನ್ನು ಎಂದು ಭಾವಿಸಬೇಕು ಎಂದು ಹೇಳಿದರು.

ಶಾರದಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಾಗೇಶಬಾಬು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ರ‍ೀಡಾ ಜ್ಯೋತಿಯನ್ನು ಶಾರದಾ ಫೌಂಡೇಶನ್ ಟ್ರಸ್ಟ್‌ನ ನಿರ್ದೇಶಕ ಕಿರಣ್ ವಿ. ಪಾಟೀಲ್ ಬೆಳಗಿಸಿದರು. ಕ್ರ‍ೀಡಾ ಧ್ವಜಾರೋಹಣವನ್ನು ಕೊ.ಪ.ಪೂ.ಕಾ. ಪ್ರಾಂಶುಪಾಲರ ಸಂಘದ ಅಧ್ಯಕ್ಷ ಅನಿಲಕುಮಾರ್ ಜಿ. ನೆರವೇರಿಸಿದರು. ದೈಹಿಕ ಉಪನ್ಯಾಸಕಿ ಅಮೃತ ಕ್ರ‍ೀಡಾ ಪ್ರತಿಜ್ಞಾವಿಧಿ ಬೋಧಿಸಿದರು. ನೆಟ್‌ಗೆ ಬಾಲ್ ಹಾಕುವುದರ ಮೂಲಕ ಉಪನ್ಯಾಸಕರ ಸಂಘದ ಸೋಮಶೇಖರಗೌಡ ಕ್ರ‍ೀಡೆಗೆ ಚಾಲನೆ ನೀಡಿದರು.

ಸೆಮಿಫೈನಲ್ ಪ್ರವೇಶಿಸಿದ ಕೊಪ್ಪಳ ತಂಡ: ಕೊಪ್ಪಳ ತಾಲೂಕಿನ ಕಿಡದಾಳ ಶಾರದ ಇಂಟರ್ ನ್ಯಾಷನಲ್ ಸ್ಕೂಲ್ ನಡೆದ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜು ನೆಟ್‌ಬಾಲ್ ಟೂರ್ನಿಯಲ್ಲಿ ಕೊಪ್ಪಳ ಬಾಲಕಿಯರ ತಂಡ ಸಮಿಫೈನಲ್ ಪ್ರವೇಶಿಸಿದೆ.ಕೊಡಗು ತಂಡವನ್ನು 12-8 ಅಂಕಗಳ ಮೂಲಕ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲಿಸುವ ಮೂಲಕ ಕೊಪ್ಪಳ ತಂಡ ಮೈಲುಗೈ ಸಾಧಿಸಿ, ಸೆಮಿಫೈನಲ್ ಪ್ರವೇಶಿಸಿದೆ. ಉಳಿದ ಪಂದ್ಯದಲ್ಲಿ ದಕ್ಷಿಣ ಕನ್ನಡ ತಂಡ ಮಂಡ್ಯ ವಿರುದ್ಧ ಹಾಗೂ ಹಾಸನ ತಂಡ ಚಿಕ್ಕೋಡಿ ತಂಡದ ವಿರುದ್ಧ ಗೆಲುವು ಸಾಧಿಸಿದೆ. ಇನ್ನಷ್ಟು ಪಂದ್ಯಗಳು ನ.11ರಂದು ನಡೆಯಲಿವೆ.ಬಾಲಕರ ವಿಭಾಗದಲ್ಲಿ ಬೆಂಗಳೂರು ಉತ್ತರ ತಂಡವು ಶಿವಮೊಗ್ಗ ವಿರುದ್ಧ, ದಕ್ಷಿಣ ಕನ್ನಡ ತಂಡವು ಬಾಗಲಕೋಟೆ ವಿರುದ್ಧ, ಮಂಡ್ಯ ತಂಡವು ದಾವಣಗೆರೆ ವಿರುದ್ಧ ಗೆಲುವು ಸಾಧಿಸಿ ಮುನ್ನಡೆ ಸಾಧಿಸಿವೆ.