ಜನಪ್ರತಿನಿಧಿಗಳು ಜನಸಾಮಾನ್ಯರ ಪ್ರಾಣದ ಜೊತೆಗೆ ಉದಾಸೀನ ಭಾವನೆ ತೋರುತ್ತಿದ್ದಾರೆ. ಮಲೆ ಮಹದೇಶ್ವರ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹದೇಶ್ವರ ಬೆಟ್ಟದ ಯಾತ್ರೆಗೆ ತೆರಳುತ್ತಾರೆ. ಅವರಿಗೆ ಸೂಕ್ತ ರಕ್ಷಣೆ ನೀಡಬೇಕು. ಸಂಬಂಧಿಸಿದ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಅದು ಬಿಟ್ಟು ನಿರ್ಲಕ್ಷತೆಯಿಂದ ನಡೆದುಕೊಳ್ಳುವುದು ಸರಿಯಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಾನವ ಮತ್ತು ಪ್ರಾಣಿ ಸಂಘರ್ಷ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಅದರ ತಡೆಗೆ ಪರ್ಯಾಯ ಕ್ರಮ ಕೈಗೊಳ್ಳುವ ಮೂಲಕ ಜನಸಾಮಾನ್ಯರ ಜೀವ ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.

ಮಹದೇಶ್ವರ ಬೆಟ್ಟದಲ್ಲಿ ಚಿರತೆ ದಾಳಿಯಿಂದ ಮೃತಪಟ್ಟ ಮಂಡ್ಯ ತಾಲೂಕು ಚೀರನಹಳ್ಳಿ ಗ್ರಾಮದ ಯುವಕನ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಅರಣ್ಯ ಇಲಾಖೆಗೆ ಹೆಚ್ಚಿನ ಬೋನುಗಳನ್ನು ಒದಗಿಸಬೇಕು. ಅಭಯಾರಣ್ಯ ಹೆಚ್ಚಿಸಿ ಅಂತಹ ಅರಣ್ಯಗಳಿಗೆ ವನ್ಯಜೀವಿಗಳನ್ನು ಬಿಡಬೇಕು ಎಂದು ನಾನು ಶಾಸಕನಾಗಿದ್ದ ವೇಳೆ ಸದನದಲ್ಲೇ ಚರ್ಚೆ ಮಾಡಿದ್ದೆ. ಆದರೆ, ಈವರೆವಿಗೂ ಅದು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜನಪ್ರತಿನಿಧಿಗಳು ಜನಸಾಮಾನ್ಯರ ಪ್ರಾಣದ ಜೊತೆಗೆ ಉದಾಸೀನ ಭಾವನೆ ತೋರುತ್ತಿದ್ದಾರೆ. ಮಲೆ ಮಹದೇಶ್ವರ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹದೇಶ್ವರ ಬೆಟ್ಟದ ಯಾತ್ರೆಗೆ ತೆರಳುತ್ತಾರೆ. ಅವರಿಗೆ ಸೂಕ್ತ ರಕ್ಷಣೆ ನೀಡಬೇಕು. ಸಂಬಂಧಿಸಿದ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಅದು ಬಿಟ್ಟು ನಿರ್ಲಕ್ಷತೆಯಿಂದ ನಡೆದುಕೊಳ್ಳುವುದು ಸರಿಯಲ್ಲ ಎಂದರು.

ಇನ್ನೂ ಬಾಳಿ ಬದುಕಬೇಕಾದ 30 ವರ್ಷ ವಯಸ್ಸಿನ ಯುವಕ ಪ್ರಾಣ ಕಳೆದುಕೊಂಡಿದ್ದಾನೆ. ಮನೆಗೆ ಆಧಾರವಾಗಬೇಕಾಗಿದ್ದ ಮಗನನ್ನು ಕಳೆದುಕೊಂಡ ತಾಯಿಯ ರೋಧನ ನೋಡಲಾಗದು. ಕೆಲ ದಿನಗಳ ಹಿಂದೆ ಯಲಿಯೂರು ಬಳಿ ಓರ್ವ ಮಹಿಳೆ ಮೇಲೆ ಚಿರತೆ ದಾಳಿ ನಡೆಸಿತ್ತು. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂತಹ ಅನೇಕ ಘಟನೆಗಳು ನಡೆಯುತ್ತಲೇ ಇವೆ. ಅರಣ್ಯ ಸಚಿವರು ಒಂದು ದಿನವಾದರೂ ಜಿಲ್ಲೆಗೆ ಭೇಟಿ ನೀಡಿ ಏನೆಲ್ಲಾ ನಡೆಯುತ್ತಿದೆ ಎಂಬುದರ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಇಂತಹ ಘಟನೆಗಳಿಗೆ ಕಡಿವಾಣ ಹಾಕುವ ಬಗ್ಗೆ ಚಿಂತನೆ ನಡೆಸುತ್ತಿಲ್ಲ ಎಂದು ಕಿಡಿಕಾರಿದರು.

ಘಟನೆ ನಡೆದುಹೋಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾದರೂ ಮೃತನ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಕನಿಷ್ಠ ಸಾಂತ್ವನ ಹೇಳುವ ಔದಾರ್ಯವನ್ನೂ ತೋರಲಿಲ್ಲ. ಬೋನುಗಳನ್ನು ಹೆಚ್ಚಿಗೆ ಕೊಟ್ಟು ಪ್ರಾಣಿಗಳನ್ನು ಸಾಕಲಿ, ನಾವು ಪ್ರಾಣಿಗಳ ವಿರೋಧಿಗಳಲ್ಲ. ಆದದರೆ ಜನಸಾಮಾನ್ಯರೂ ಸಹ ಬದುಕಬೇಕು. ಅವರ ಜೀವವೂ ಅಮೂಲ್ಯವಾದದ್ದು. ರೈತಾಪಿ ಕುಟುಂಬದಲ್ಲಿ ಈ ರೀತಿಯ ಘಟನೆ ಆಗಿರುವುದು ಬಹಳ ನೋವಾಗುತ್ತದೆ ಎಂದರು.

ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ, ಧನ ಸಹಾಯ ಮಾಡುವ ಮೂಲಕ ಮಾನವೀಯತೆ ಪ್ರದರ್ಶಿಸಿದರು. ಗ್ರಾಪಂ ಮಾಜಿ ಅಧ್ಯಕ್ಷ ಡಿ.ಲಕ್ಷ್ಮಣ, ಮುಖಂಡರಾದ ಪ್ರಸನ್ನ, ರಮೇಶ, ಸುರೇಶ, ಬೀರೇಶ, ನಾಗೇಶ ಇತರರು ಹಾಜರಿದ್ದರು.