ಅಭಿವ್ಯಕ್ತಿ ಮಾಧ್ಯಮ ಬೇರೆ ಬೇರೆಯಾದರೂ ಭಾವವೊಂದೇ: ದಿನ್ನಿ

| Published : Jan 06 2025, 01:01 AM IST

ಸಾರಾಂಶ

ಸಾಹಿತ್ಯ, ಕಲೆ ಹಾಗೂ ಸಂಗೀತ ಇವೆಲ್ಲವುಗಳಿಗೆ ಒಂದು ಅವಿನಾಭಾವ ಸಂಬಂಧವಿದೆ.

ಬಳ್ಳಾರಿ: ಸಾಹಿತ್ಯ, ಕಲೆ ಹಾಗೂ ಸಂಗೀತ ಇವೆಲ್ಲವುಗಳಿಗೆ ಒಂದು ಅವಿನಾಭಾವ ಸಂಬಂಧವಿದೆ. ಇಲ್ಲಿ ರೂಪ ಮತ್ತು ಅಭಿವ್ಯಕ್ತಿ ಮಾಧ್ಯಮ ಬೇರೆಯಾಗಿದ್ದರೂ ಅದು ಹೊಮ್ಮಿಸುವ ಭಾವ ಒಂದೇ ಎಂದು ಲೇಖಕ ದಸ್ತಗೀರಸಾಬ್ ದಿನ್ನಿ ನುಡಿದರು.ಬಳ್ಳಾರಿ ಜಿಲ್ಲಾ ಕಲಾವಿದರ ಸಂಘ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಆಯೋಜಿಸಿದ್ದ ಕಲಾವೈಭವ ಕಾರ್ಯಕ್ರಮದ ಎರಡನೇ ದಿನ ನಡೆದ ಕವಿ ಕಾವ್ಯ ಕುಂಚ ಗಾಯನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭಾವ, ಬಣ್ಣ, ಸಂಗೀತದ ಪಲಕು, ಲಯಗಾರಿಕೆ ನಮ್ಮ ಬದುಕಿಗೆ ನಿತ್ಯ ಬೇಕು. ಹಾಗೆ ನೋಡಿದರೆ ನಮಗೆ ಗೊತ್ತಿಲ್ಲದಂತೆ ನಾವು ಸಂಗೀತವನ್ನು ಉಸಿರಾಡುತ್ತಿರುತ್ತೇವೆ. ನಡೆಯುವಾಗ ನಮ್ಮ ಕೈಕಾಲುಗಳ ಚಲನೆಯಲ್ಲೂ ಲಯವಿರುತ್ತದೆ. ನಮ್ಮ ಮಾತುಗಳು ಅರ್ಥ ತಪ್ಪಿದಾಗಲೆಲ್ಲ ಅಲ್ಲಿ ಲಯ ತಪ್ಪಿದ್ದನ್ನು ಎದುರಿಗಿದ್ದವರು ಗುರುತಿಸುತ್ತಾರೆ ಎಂದು ತಿಳಿಸಿದರು.

ಕವಿಗೆ ಧ್ಯಾನಸ್ಥ ಸ್ಥಿತಿ ಮುಖ್ಯ. ಬರೆದದ್ದನ್ನು ಮತ್ತೆ ಮುರಿದು ಕಟ್ಟುವ ಕುಶಲತೆ ಬೇಕು. ಸಂಗೀತದ ಬಗೆಗೆ ಪ್ರಾಥಮಿಕ ತಿಳಿವಳಿಕೆ ಇದ್ದಾಗ ಮಧುರವಾದ ಹಾಡುಗಳನ್ನು ಬರೆಯಲು ಸಾಧ್ಯವಾಗುತ್ತದೆ. ನಾವೀಗ ಭಾವಗೀತೆಗಳ ಲಯ, ಮಟ್ಟುಗಳನ್ನು ವರ್ತಮಾನದ ಅಗತ್ಯಕ್ಕೆ ಅನುಗುಣವಾಗಿ ಮರು ರೂಪಿಸಿಕೊಳ್ಳಬೇಕಾದ ಜರೂರು ಇದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಕ್ಕಳ ಸಾಹಿತಿ ಶಿವಲಿಂಗಪ್ಪ, ಹಂದಿಹಾಳು 90ರ ದಶಕದ ನಂತರ ಕಾವ್ಯ ಕ್ಷೇತ್ರವು ಅನೇಕ ಪಲ್ಲಟಗಳಿಗೆ ತೆರೆದುಕೊಂಡಿದೆ. ಇತ್ತೀಚಿನ ಬರಹಗಾರರಲ್ಲಿ ಹೊಸ ಸಂವೇದನೆಯ ಕೊರತೆ ಎದ್ದು ಕಾಣುತ್ತದೆ. ಕವಿಗಳು ವರ್ತಮಾನದ ತಲ್ಲಣಗಳಿಗೆ ಮಿಡಿಯುತ್ತಲೇ ಜೀವಪರ ಹಾಗೂ ಮಧುರವಾದ ಕಾವ್ಯಗಳನ್ನು ಕಟ್ಟಿ ಕೊಡಲಿ ಎಂದು ಆಶಿಸಿದರು.

ಕವಿಗಳಾದ ವೀರೇಂದ್ರ ರಾವಿಹಾಳ್, ಎ.ಎರಿಸ್ವಾಮಿ, ಅಂಕಲಿ ಬಸಮ್ಮ, ನಾಗೇಂದ್ರ ಬಂಜಿಗೆರೆ ಮುಂತಾದವರು ಕವನ ವಾಚಿಸಿದರು. ಆನಂದ ರೆಡ್ಡಿ, ಗೋವಿಂದ ರೆಡ್ಡಿ, ಸುದರ್ಶನ್, ನರಸಿಂಹಮೂರ್ತಿ ಮುಂತಾದ ಕಲಾವಿದರು ಚಿತ್ರ ಬಿಡಿಸಿದರು.

ಸಂಗೀತ ಕಲಾವಿದರಾದ ದೊಡ್ಡ ಬಸವ ಗವಾಯಿ, ವಸಂತಕುಮಾರ್, ಜಡೇಶ ಎಮ್ಮಿಗನೂರ್, ವೀರೇಶ ದಳವಾಯಿ ಕವಿ ಭಾವನೆಗಳಿಗೆ ಜೀವ ತುಂಬಿದರು.

ಬಳ್ಳಾರಿಯಲ್ಲಿ ಭಾನುವಾರ ಜರುಗಿದ ಬಳ್ಳಾರಿ‌ ಜಿಲ್ಲಾ ಕಲಾವೈಭವದ ಕವಿ-ಕಾವ್ಯ-ಕುಂಚ ಗಾಯನ ಕಾರ್ಯಕ್ರಮದಲ್ಲಿ ಲೇಖಕ ದಸ್ತಗೀರ್ ಸಾಬ್ ದಿನ್ನಿ ಮಾತನಾಡಿದರು.