ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಸಪ್ತನದಿಗಳು, ಜಲಾಶಯಗಳು, ಜಲಪಾತಗಳಿಗೆ ಜೀವ ಕಳೆ ಬಂದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಘಟಪ್ರಭಾ ಜಲಾಶಯದ ಹಿನ್ನೀರಿನಲ್ಲಿ ವಿಠ್ಠಲ ಮಂದಿರ ಮುಳುಗಡೆಯಾಗಿದೆ.ಕಳೆದ ವರ್ಷ ಭೀಕರ ಬರಗಾಲದಿಂದ ಕಂಗೆಟ್ಟಿದ್ದ ಜಿಲ್ಲೆಯ ರೈತರಿಗೆ ಈ ಬಾರಿ ವರುಣರಾಯ ಕೃಪೆ ತೋರಿದ್ದಾನೆ. ಮಹಾರಾಷ್ಟ್ರ ಮತ್ತು ಪಶ್ಚಿಮ ಘಟ್ಟದಲ್ಲಿ ನಿರಂತರ ಮಳೆ ಆಗುತ್ತಿದ್ದು, ಕೃಷ್ಣಾ, ಮಲಪ್ರಭಾ, ಘಟಪ್ರಭಾ, ವೇದಗಂಗಾ, ದೂಧಗಂಗಾ, ಹಿರಣ್ಯಕೇಶಿ, ಮಾರ್ಕಂಡೇಯ ನದಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಮಂಗಳವಾರ ಮಳೆ ಅಬ್ಬರ ತಗ್ಗಿದೆ.
ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಹುಣ್ಣೂರ ಗ್ರಾಮದ ಹೊರವಲಯದ ವಿಠ್ಠಲ ಮಂದಿರ ಮುಳುಗಡೆಯಾಗಿದೆ. ಈಗ ಮಂದಿರದ ನಾಲ್ಕು ಅಡಿಯಷ್ಟು ಗೋಪುರ ಮಾತ್ರ ಕಾಣಿಸುತ್ತಿದೆ. ನೀರು ಜಾಸ್ತಿಯಾದರೆ ಮಂದಿರ ಸಂಪೂರ್ಣವಾಗಿ ಮುಳುಗಡೆಯಾಗಲಿದೆ. ಜಲಾಶಯದ ಹಿನ್ನೀರು ಸಂಪೂರ್ಣವಾಗಿ ಖಾಲಿಯಾದ ವೇಳೆ ಮಾತ್ರ ಈ ವಿಠ್ಠಲ ಮಂದಿರಕ್ಕೆ ಭಕ್ತರು ಆಗಮಿಸಿ, ದರ್ಶನ ಪಡೆಯುತ್ತಾರೆ. ಕಳೆದ ವರ್ಷ ಭೀಕರ ಬರಗಾಲ ಕಾಣಿಸಿಕೊಂಡಿದ್ದರಿಂದ ವಿಠ್ಠಲ ಮಂದಿರ ಭಕ್ತರ ದರ್ಶನಕ್ಕೆ ಮುಕ್ತಗೊಂಡಿತ್ತು. ಬಳಿಕ ನೀರಿನಲ್ಲೇ ಮಂದಿರ ಮುಳುಗಿದೆ. ದೇವಸ್ಥಾನದ ಎತ್ತರ 148ಅಡಿ, ಆದರೆ ಅದರ ಗೋಪುರ ಮಾತ್ರ ಚುರಿಸುವಷ್ಟು ನೀರು ಆವರಿಸಿದೆ. 97 ವರ್ಷಗಳ ಹಿಂದೆ ಈ ದೇವಸ್ಥಾ ನಿರ್ಮಿಸಲಾಗಿದೆ.ಉತ್ತಮ ಮಳೆ: ಜೂನ್ 1ರಿಂದ ಈವರೆಗೆ 201 ಮಿ.ಮೀ. ವಾಡಿಕೆಗೆ 266 ಮಿ.ಮೀ. ಮಳೆ ದಾಖಲಾಗಿದ್ದು, ಶೇ.33ರಷ್ಟು ಅಧಿಕ ಮಳೆಯಾಗಿದೆ. ಜು.1ರಿಂದ ಜುಲೈ 9ರವರಗೆ 55 ಮಿ.ಮೀ. ಮಳೆಯಾಗಬೇಕಿತ್ತು. 78 ಮಿ.ಮೀ. ಮಳೆಯಾಗಿದ್ದು, ಶೇ.43ರಷ್ಟು ಹೆಚ್ಚು ಮಳೆ ದಾಖಲಾಗಿದೆ. ಈ ಬಾರಿ ಮುಂಗಾರು ಮಳೆ ಕೈಹಿಡಿದಿದ್ದರಿಂದ ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು, ಜಿಲ್ಲೆಯ ರೈತರಲ್ಲಿ ಸಂತಸ ಮನೆ ಮಾಡಿದೆ.
51 ಟಿಎಂಸಿ ಗರಿಷ್ಠ ಸಂಗ್ರಹ ಸಾಮರ್ಥ್ಯದ ಹಿಡಕಲ್ ಜಲಾಶಯದಲ್ಲಿ ಜುಲೈ 9ರಂದು 21.105 ಟಿಎಂಸಿ ನೀರು ಸಂಗ್ರಹವಿದ್ದರೆ, 25,677 ಕ್ಯುಸೆಕ್ ಒಳಹರಿವು, 3007 ಕ್ಯುಸೆಕ್ ಹೊರ ಹರಿವು ಇದೆ. ಹಿಂದಿನ ವರ್ಷ ಈ ದಿನಕ್ಕೆ 4.479 ಟಿಎಂಸಿ ನೀರು ಸಂಗ್ರಹವಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ 16.626 ಟಿಎಂಸಿ ನೀರು ಹೆಚ್ಚಿಗೆ ಸಂಗ್ರಹವಾಗಿದೆ. ಒಂದೇ ವಾರದಲ್ಲಿ 10 ಟಿಎಂಸಿ ನೀರು ಏರಿಕೆಯಾಗಿದೆ.ಖಾನಾಪುರ ತಾಲ್ಲೂಕಿನಾದ್ಯಂತ ಬಿಟ್ಟು ಬಿಡದೇ ಮಳೆ ಸುರಿಯುತ್ತಿದ್ದು, ಮಲಪ್ರಭಾ ನದಿಯ ನವೀಲುತೀರ್ಥ ಜಲಾಶಯದ ನೀರಿನ ಮಟ್ಟ ಕೂಡ ಏರಿಕೆಯಾಗಿದೆ. ಇದರ ಗರಿಷ್ಠ ಸಾಮರ್ಥ್ಯ-37.731 ಟಿಎಂಸಿ, ಇಂದಿನ ಸಂಗ್ರಹ-10.936 ಟಿಎಂಸಿ, ಗರಿಷ್ಠ ಮಟ್ಟ-2079.50, ಇಂದಿನ ಮಟ್ಟ-2052.00, ಒಳ ಹರಿವು- 8504 ಕ್ಯುಸೆಕ್, ಹೊರ ಹರಿವು 194 ಕ್ಯುಸೆಕ್ ಇದೆ. ಕಳೆದ ವರ್ಷ ಈ ದಿವಸ 6.838 ಟಿಎಂಸಿ ನೀರು ಸಂಗ್ರಹವಾಗಿತ್ತು. ಹಾಗಾಗಿ, ಈ ವರ್ಷ 4 ಟಿಎಂಸಿ ನೀರು ಹೆಚ್ಚಿಗೆ ಸಂಗ್ರಹವಾಗಿದೆ.