ಸಾಮಾನ್ಯ ಕಾರ್ಯಕರ್ತನ ಮೈಮುಟ್ಟಿ ನೋಡಲಿ: ಡಾ.ಭರತ್‌ ಶೆಟ್ಟಿಗೆ ರಮಾನಾಥ ರೈ ಸವಾಲು

| Published : Jul 10 2024, 12:34 AM IST

ಸಾಮಾನ್ಯ ಕಾರ್ಯಕರ್ತನ ಮೈಮುಟ್ಟಿ ನೋಡಲಿ: ಡಾ.ಭರತ್‌ ಶೆಟ್ಟಿಗೆ ರಮಾನಾಥ ರೈ ಸವಾಲು
Share this Article
  • FB
  • TW
  • Linkdin
  • Email

ಸಾರಾಂಶ

ಡಾ.ಭರತ್‌ ಶೆಟ್ಟಿ, ರಾಹುಲ್‌ ಗಾಂಧಿಯ ಕಪಾಲಕ್ಕೆ ಹೊಡೆಯುವ ಹೇಳಿಕೆ ಮೂಲಕ ಬಿಜೆಪಿ ಹಿಂಸೆಯನ್ನು ಪರೋಕ್ಷವಾಗಿ ಒಪ್ಪಿಕೊಂಡಂತೆ ಆಗಿದೆ. ಬಿಜೆಪಿಯ ಈ ಹಿಂಸಾ ಪ್ರವೃತ್ತಿಯನ್ನೇ ರಾಹುಲ್‌ ಗಾಂಧಿ ವಿರೋಧಿಸಿ ಹೇಳಿಕೆ ನೀಡಿದ್ದು ಎಂದು ರಮಾನಾಥ ರೈ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಸಂಸತ್ತಿನಲ್ಲಿ ವಿಪಕ್ಷ ನಾಯಕ ರಾಹುಲ್‌ ಗಾಂಧಿ ನೀಡಿರುವ ಹೇಳಿಕೆ ಬಗ್ಗೆ ಪ್ರಚೋದನಾಕಾರಿ ಹಾಗೂ ಅವಹೇಳನಕಾರಿಯಾಗಿ ಮಾತನಾಡಿರುವ ಮಂಗಳೂರು ಉತ್ತರ ಶಾಸಕ ಡಾ. ಭರತ್‌ ಶೆಟ್ಟಿ ಅವರು ಗಂಡು ಮಗ ಆಗಿದ್ದರೆ ನಮ್ಮ ಸಾಮಾನ್ಯ ಕಾರ್ಯಕರ್ತನ ಮೈ ಮುಟ್ಟಿನೋಡಲಿ ಎಂದು ಮಾಜಿ ಸಚಿವ ರಮಾನಾಥ ರೈ ಸವಾಲು ಹಾಕಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್‌ ವಿರುದ್ಧ ಖಂಡನಾರ್ಹ ಹೇಳಿಕೆ ನೀಡಿರುವ ಶಾಸಕ ಡಾ.ಭರತ್‌ ಶೆಟ್ಟಿ ವಿರುದ್ಧ ರಾಜ್ಯ ಸರ್ಕಾರ ಸುಮೊಟೋ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು. ಡಾ.ಭರತ್‌ ಶೆಟ್ಟಿ, ರಾಹುಲ್‌ ಗಾಂಧಿಯ ಕಪಾಲಕ್ಕೆ ಹೊಡೆಯುವ ಹೇಳಿಕೆ ಮೂಲಕ ಬಿಜೆಪಿ ಹಿಂಸೆಯನ್ನು ಪರೋಕ್ಷವಾಗಿ ಒಪ್ಪಿಕೊಂಡಂತೆ ಆಗಿದೆ. ಬಿಜೆಪಿಯ ಈ ಹಿಂಸಾ ಪ್ರವೃತ್ತಿಯನ್ನೇ ರಾಹುಲ್‌ ಗಾಂಧಿ ವಿರೋಧಿಸಿ ಹೇಳಿಕೆ ನೀಡಿದ್ದು ಎಂದು ರಮಾನಾಥ ರೈ ಹೇಳಿದರು.

ಶಾಸಕ ಡಾ. ಭರತ್‌ ಶೆಟ್ಟಿಗೆ ತಾಕತ್ತಿದ್ದರೆ ನಮ್ಮ ಸಾಮಾನ್ಯ ಕಾರ್ಯಕರ್ತನ ಮೇಲೆ ಕೈಮಾಡಿ ನೋಡಲಿ, ಆ ಮೇಲೆ ನೋಡೋಣ ಏನಾಗಲಿದೆ ಎಂದು ಸವಾಲನ್ನು ಪುನರುಚ್ಚರಿಸಿದ ಮಾಜಿ ಸಚಿವ ರಮಾನಾಥ ರೈ, ಬೆಳ್ತಂಗಡಿಯಲ್ಲಿ ಶಾಸಕರು ಅಧಿಕಾರಿಗಳ ಮೇಲೆ ಕೈ ಮಾಡಲು ಹೋಗಿದ್ದಾರೆ. ಬಿಜೆಪಿ ಸಮುದಾಯ ಮಧ್ಯ ವಿಭಜನೆ ಮಾಡಿ ಮತ ಗಳಿಸುವ ಯತ್ನ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.ಮುಖಂಡರಾದ ಶಶಿಧರ್‌ ಹೆಗ್ಡೆ, ಶುಭೋದಯ ಆಳ್ವ, ನವೀನ್‌ ಡಿಸೋಜಾ, ಎಂ.ಜಿ. ಹೆಗಡೆ, ಅಶ್ರಫ್‌, ಪ್ರಕಾಶ್‌ ಸಾಲಿಯಾನ್‌, ಅಪ್ಪಿ, ರಮಾನಂದ ಪೂಜಾರಿ, ನೀರಜ್‌ಪಾಲ್‌, ಚಿತ್ತರಂಜನ್‌ ಶೆಟ್ಟಿ, ಸಲೀಂ, ಸುರೇಂದ್ರ ಕಾಂಬ್ಳಿ, ಇಮ್ರಾನ್‌, ಸವಾದ್‌, ನಝೀರ್‌ ಬಜಾಲ್‌ ಇದ್ದರು.

------------

ಭರತ್‌ ಶೆಟ್ಟಿ ಬಂಧನಕ್ಕೆ ಒತ್ತಾಯ

ಮಂಗಳೂರು ಉತ್ತರ ಶಾಸಕ ಡಾ. ಭರತ್‌ ಶೆಟ್ಟಿಯವರು ರಾಹುಲ್‌ ಗಾಂಧಿ ಬಗ್ಗೆ ಅವಾಚ್ಯವಾಗಿ ಹೇಳಿದ್ದಲ್ಲದೆ, ಶಸ್ತ್ರಾಸ್ತ್ರ ಹಿಡಿಯುವ ಬಗ್ಗೆ ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ. ಆದ್ದರಿಂದ ನಗರ ಪೊಲೀಸ್‌ ಆಯುಕ್ತರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿ ಶಾಸಕರನ್ನು ಬಂಧನ ಮಾಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ಆಗ್ರಹಿಸಿದ್ದಾರೆ.

ಮಂಗಳವಾರ ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವತಃ ಪ್ರಧಾನಿಯವರಿಗೇ ರಾಹುಲ್‌ ಗಾಂಧಿಯವರನ್ನು ಎದುರಿಸಲು ತಾಕತ್ತಿಲ್ಲ, ಇನ್ನು ಚಿಲ್ಲರೆ ಗಿರಾಕಿಯಾಗಿರುವ ಭರತ್‌ ಶೆಟ್ಟಿ ಯಾವ ಲೆಕ್ಕ. ತಾಕತ್ತಿದ್ದರೆ ಅವರಿಗೆ ಹೊಡೆದು ನೋಡಲಿ ಎಂದರು.

ಗಲಭೆ ಸೃಷ್ಟಿಗೆ ಶಾಸಕರ ಹೇಳಿಕೆ: ಕೆಪಿಸಿಸಿ ವಕ್ತಾರ ಎಂ.ಜಿ. ಹೆಗಡೆ ಮಾತನಾಡಿ, ಶಸ್ತ್ರಾಸ್ತ್ರ ಹಿಡಿಯುವುದು ಹಿಂದುತ್ವವಾಗಿದ್ದರೆ, ಹಿಂದು ಧರ್ಮದ ಆಶಯಗಳಿಗೆ ವಿರುದ್ಧವಾಗಿ ನಡೆಯುತ್ತಿದ್ದಾರೆ ಎಂದು ಅರ್ಥ. ಇದನ್ನೇ ರಾಹುಲ್‌ ಗಾಂಧಿಯವರು ಹೇಳಿದ್ದು. ಮುಂದಿನ ಚುನಾವಣೆಯಲ್ಲಿ ಭರತ್‌ ಶೆಟ್ಟಿ, ವೇದವ್ಯಾಸ ಕಾಮತ್‌, ಹರೀಶ್‌ ಪೂಂಜಾ ಅವರಿಗೆ ಟಿಕೆಟ್‌ ದೊರೆಯುವುದಿಲ್ಲ. ಅದಕ್ಕೆ ಈಗಲೇ ಅನಂತ ಕುಮಾರ್‌ ಹೆಗಡೆ ರೀತಿಯಲ್ಲಿ ಮಾತನಾಡಲು ಆರಂಭಿಸಿದ್ದಾರೆ ಎಂದರು.