ಸಾರಾಂಶ
ರಾಮಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ
ಹನೂರು: ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಅಪ್ರಾಪ್ತ ಯುವತಿಯರನ್ನು ಮದುವೆಯಾಗಿದ್ದ ಇಬ್ಬರ ವಿರುದ್ಧ ರಾಮಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೌದಳ್ಳಿ ಜಿಪಂ ವ್ಯಾಪ್ತಿಯ ದೇವರಾಜು ಹಾಗೂ ಸುನೀಲ್ ಬಂಧಿತ ವ್ಯಕ್ತಿಗಳಾಗಿದ್ದಾರೆ.
ಘಟನೆ ವಿವರ: ಹನೂರು ತಾಲೂಕಿನ ಶೆಟ್ಟಳ್ಳಿ ಗ್ರಾಮದ ದೇವರಾಜು ತಾಲೂಕು ವ್ಯಾಪ್ತಿಯ ಗ್ರಾಮವೊಂದರ ಅಪ್ರಾಪ್ತ 16 ವರ್ಷದ ಯುವತಿಯನ್ನು ಮದುವೆಯಾಗಿದ್ದ, ಈ ಯುವತಿ ಗರ್ಭಿಣಿಯಾಗಿದ್ದು, ಕೌದಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಯಿಯ ಕಾರ್ಡ್ ನೋಂದಾವಣೆ ಮಾಡಲು ತೆರಳಿದ್ದಾಗ ವೈದ್ಯಾಧಿಕಾರಿಗಳಿಗೆ ಅನುಮಾನ ಬಂದು ಶಿಶು ಅಭಿವೃದ್ಧಿ ಯೋಜನಾ ಕಚೇರಿ ಮೇಲ್ವಿಚಾರಕಿಗೆ ಮಾಹಿತಿ ನೀಡಿದ್ದು ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಮೇಲ್ವಿಚಾರಕಿ ಗೌಸಿಯ ಫಿರ್ದೋಸ್ ದೂರು ನೀಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಹೊಸಳ್ಳಿ ಗ್ರಾಮದ ಸುನಿಲ್ ಎಂಬಾತ ಇದೇ ಗ್ರಾಮದ ಅಪ್ರಾಪ್ತ 17 ವರ್ಷದ ಯುವತಿಯನ್ನು ಮದುವೆಯಾಗಿದ್ದ ಯುವತಿಯು ತಾಯಿ ಕಾರ್ಡ್ ಮಾಡಿಸಲು ಹೋಗಿದ್ದಾಗ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ ಹಿನ್ನೆಲೆ ಈತನ ವಿರುದ್ಧವು ರಾಮಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.