ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಲೋಕಸಭಾ ಚುನಾವಣಾ ಆರಂಭಕ್ಕೂ ಮುನ್ನವೇ ಬಿಜೆಪಿ ವಿರುದ್ಧ ಕಾಂಗ್ರೆಸ್ಸಿಗರು ಮಾಡಿದ ನಿರಂತರ ಅಪ್ರಚಾರ ಹಾಗೂ ಸಂವಿಧಾನ ಬದಲಿಸಿ ಬಿಡುತ್ತಾರೆ ಎಂಬ ಹಸಿ ಸುಳ್ಳನ್ನು ಪದೇ ಪದೇ ಹೇಳಿ ವೈಯಕ್ತಿಕ ತೇಜೋವಧೆ ಮಾಡಿದ ಸಚಿವ ಡಾ.ಎಚ್.ಸಿ.ಮಹದೇವಪ್ಪ ನನ್ನ ಸೋಲಿಗೆ ಕಾರಣರಾಗಿದ್ದಾರೆ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಮೀಸಲು ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಮಾಜಿ ಶಾಸಕ ಎಸ್.ಬಾಲರಾಜು ವಾಗ್ದಾಳಿ ಮಾಡಿದರು.ಜಿಲ್ಲಾ ಬಿಜೆಪಿ ಕಚೇರಿ ಸಭಾಂಗಣದಲ್ಲಿ ನಡೆದ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಕೃತಜ್ಞತಾ ಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿಗೆ ಕ್ಷೇತ್ರದಲ್ಲಿ ಗೆಲ್ಲುವ ಎಲ್ಲಾ ವಾತಾವರಣ ಇತ್ತು. ಆದರೆ, ಸಚಿವ ಎಚ್.ಸಿ.ಮಹದೇವಪ್ಪ ತನ್ನ ಮಗನನ್ನು ಗೆಲ್ಲಿಸಿಕೊಳ್ಳುವುದಕ್ಕಾಗಿ ಮತ್ತೊಬ್ಬ ದಲಿತ ನಾಯಕನಿಗೆ ಅನ್ಯಾಯ ಮಾಡಿ, ಬೆನ್ನಿಗೆ ಚೂರಿ ಹಾಕಿದ್ದಾರೆ. ಇದು ಅಂಬೇಡ್ಕರ್ ಅಶಯಕ್ಕೆ ವಿರುದ್ಧವಾಗಿದೆ. ಎಚ್.ಸಿ.ಮಹದೇವಪ್ಪ ಅವರು ಕುಟುಂಬ ಹಾಗೂ ಪುತ್ರ ವ್ಯಾಮೋಹಕ್ಕೆ ಬಲಿಯಾಗಿದ್ದಾರೆಯೇ ಹೊರತು ಯಾವುದೇ ಅಂಬೇಡ್ಕರ್ ತತ್ವ ಸಿದ್ಧಾಂತಗಳು ಅವರಲ್ಲಿ ಎಳ್ಳಷ್ಟು ಇಲ್ಲ ಎಂದರು. ಸರ್ಕಾರದಲ್ಲಿ ಜವಾಬ್ದಾರಿಯುತ ಸಚಿವರಾಗಿದ್ದು, ನನ್ನೊಬ್ಬ ದಲಿತ ನಾಯಕ, ಶ್ರೀನಿವಾಸ ಪ್ರಸಾದ್, ಧ್ರುವನಾರಾಯಣ ಅವರ ನಂತರ ಜಿಲ್ಲೆಯಲ್ಲಿ ಯಾರು ದಲಿತರು ನಾಯಕರು ಎಂದು ಪ್ರಶ್ನೆ ಮಾಡುತ್ತಿದ್ದ ಮಹದೇವಪ್ಪ ಅವರು, ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಕಲ್ಯಾಣ ನಿಧಿಯ ೨೫೦ ಕೋಟಿಗೂ ಹೆಚ್ಚು ಹಣ ಗ್ಯಾರಂಟಿ ಯೋಜನೆಗೆ ಬಳಸಿಕೊಂಡಾಗ ಎಲ್ಲಿ ಹೋಗಿತ್ತು ನಿಮ್ಮ ದಲಿತರ ಮೇಲಿನ ಪ್ರೀತಿ ಎಂದು ಪ್ರಶ್ನಿಸಿದರು.
ವಾಲ್ಮೀಕಿ ನಿಗಮದಲ್ಲಿ ೧೮೭ ಕೋಟಿ ರು. ಭ್ರಷ್ಟಾಚಾರ ನಡೆದಿದೆ. ಕಾಂಗ್ರೆಸ್ ನಿರಂತರವಾಗಿ ಸಂವಿಧಾನದ ಮೇಲೆ ಅಪಪ್ರಚಾರ ಮಾಡುತ್ತಾ ಬಂದಿದೆ. ಇದರ ಬಗ್ಗೆ ಮಾತನಾಡಲಿಲ್ಲ. ಕೇವಲ ಪುತ್ರನನ್ನು ಎಂಪಿ ಮಾಡಲು ನಮ್ಮವರ ಬೀದಿಯಲ್ಲಿ ಬಿಜೆಪಿಗೆ ಮತ ಹಾಕಬೇಡಿ ಎಂದು ಹೇಳಿದ್ದೀರಲ್ಲ ಇದು ನಾಚಿಕೆಯಾಗಬೇಕು. ಇದು ಅಂಬೇಡ್ಕರ್ ಅವರ ತತ್ವ ಸಿದ್ಧಾಂತವೇ ? ಗೆದ್ದು ಒಂದು ತಿಂಗಳಾಗಿದೆ ಇನ್ನು ನಿಮ್ಮ ಮಗ ಕ್ಷೇತ್ರದ ಜನರತ್ತ ಬಂದಿಲ್ಲ ಎಂದು ಕಿಡಿಕಾರಿದರು.ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ್ ಮಾತನಾಡಿ, ನಾಳೆ ಜಿಲ್ಲಾ ಕೇಂದ್ರದಲ್ಲಿ ಕಾಂಗ್ರೆಸ್‌ನವರು ಮಾಡುತ್ತಿರುವುದು ಅಭಿನಂದನಾ ಸಮಾರಂಭವಲ್ಲ. ಎಲ್ಲಾ ಹಗರಣಗಳಲ್ಲಿಯು ಸಿಲುಕಿಕೊಂಡು ನರಳಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನವಾಗಿದೆ. ಹಗರಣ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿರುವ ಸಿದ್ದರಾಮಯ್ಯ ಮತ್ತು ಅವರ ಸಚಿವ ಸಂಪುಟದ ಸಚಿವರು ಒಂದು ತಿಂಗಳ ಬಳಿಕ ಕ್ಷೇತ್ರದಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಬರುತ್ತಿದ್ದಾರೆ. ನೂತನ ಸಂಸದರು ಇನ್ನು ಸಹ ನಮ್ಮ ಕ್ಷೇತ್ರಕ್ಕೆ ಬಂದಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಗ್ಯಾರಂಟಿ ಯೋಜನೆಗಳು ಹಾಗೂ ಸಂವಿಧಾನ ವಿರೋಧಿ ಬಿಜೆಪಿ ಎಂಬ ಹೇಳಿಕೆಗಳು ನಮ್ಮ ಪಕ್ಷ ಸೋಲಲು ಪ್ರಮುಖ ಕಾರಣವಾಗಿದೆ. ಗ್ಯಾರಂಟಿ ಜಾರಿಯಿಂದ ಹಾಗೂ ಚುನಾವಣೆ ಹತ್ತಿರದಲ್ಲಿ ಮಹಿಳೆಯರ ಖಾತೆಗೆ ೨ ಸಾವಿರ ರು. ಹಾಕಿದ್ದರಿಂದ ಮಹಿಳೆಯರ ಮತಗಳು ಕಾಂಗ್ರೆಸ್ ಕಡೆ ಹೋದವು. ಕಾಂಗ್ರೆಸ್ಸಿಗರು ಪ್ರತಿ ಸಭೆಗಳಲ್ಲಿ ಬಿಜೆಪಿ ಗೆದ್ದರೆ ಸಂವಿಧಾನ ಬದಲಿಸುತ್ತಾರೆ. ದಲಿತರು ಸಮುದ್ರಕ್ಕೆ ಬೀಳಬೇಕಾಗುತ್ತದೆ ಎಂಬ ಹಸಿ ಸುಳ್ಳನ್ನು ಬಿತ್ತುವ ಮೂಲಕ ದಲಿತರ ಮತಗಳು ಬರದಂತೆ ಮಾಡಿದರು. ಇವೆಲ್ಲವು ನಮ್ಮ ಸೋಲಿಗೆ ಕಾರಣವಾಗಿರಬಹುದು ಎಂದು ಅಪ್ರಾಯಪಟ್ಟರು.ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್‌ಕುಮಾರ್ ಮಾತನಾಡಿ, ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜು ಅವರು ಸೋತಿರಬಹುವುದು. ಇದಕ್ಕೆ ನಾನಾ ಕಾರಣಗಳಿವೆ. ಆದರೆ, ಕ್ಷೇತ್ರದ ಮತದಾರರು ಬಿಜೆಪಿಗೆ ೫.೫೦ ಲಕ್ಷ ಮತಗಳನ್ನು ನೀಡಿದ್ದಾರೆ. ಇವರ ಪರವಾಗಿ ನಾವು ಕ್ಷೇತ್ರದಲ್ಲಿ ಧ್ವನಿ ಎತ್ತ ಬೇಕಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರು ಒಗ್ಗಟ್ಟಿನಿಂದ ಪಕ್ಷ ಸಂಘಟನೆ ಮಾಡಿ, ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯುವ ಮೂಲಕ ಈ ಸೋಲಿಗೆ ತಕ್ಕ ಉತ್ತರ ನೀಡೋಣ ಎಂದು ಕರೆ ನೀಡಿದರು.
ಕೇಂದ್ರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಚಾಮುಲ್ ಅಧ್ಯಕ್ಷ ವೈ.ಸಿ.ನಾಗೇಂದ್ರ, ಎಸ್ಟಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಜಯಸುಂದರ್, ರಾಷ್ಟ್ರೀಯ ಓಬಿಸಿ ಮೋರ್ಚಾ ಕಾರ್ಯಕಾರಣಿ ಸದಸ್ಯ ನೂರೊಂದುಶೆಟ್ಟಿ, ನಗರ ಮಂಡಲದ ಅಧ್ಯಕ್ಷ ಶಿವರಾಜು, ಮಾಧ್ಯಮ ಪ್ರಮುಖ್ ವೀರೇಂದ್ರ ಮತ್ತಿತರರಿದ್ದರು.