ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಗೆ ಅನುಮತಿ

| Published : Jul 10 2024, 12:34 AM IST

ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಗೆ ಅನುಮತಿ
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿಯಲ್ಲಿ ಎಸ್.ಆರ್.ಪಾಟೀಲ ಶಿಕ್ಷಣ ಪ್ರತಿಷ್ಠಾನದಿಂದ ನಿರ್ಮಿಸಿರುವ ವೈದ್ಯಕೀಯ ಮಹಾವಿದ್ಯಾಲಯಕ್ಕೆ ರಾಷ್ಟ್ರೀಯ ವೈದ್ಯಕೀಯ ಪರಿಷತ್ನಿಂದ ಅನುಮತಿ ದೊರೆತಿದ್ದು, ಕಾಲೇಜು ಜು.31 ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಮಾಜಿ ಸಚಿವ ಹಾಗೂ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಪಾಟೀಲ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿಯಲ್ಲಿ ಎಸ್.ಆರ್.ಪಾಟೀಲ ಶಿಕ್ಷಣ ಪ್ರತಿಷ್ಠಾನದಿಂದ ನಿರ್ಮಿಸಿರುವ ವೈದ್ಯಕೀಯ ಮಹಾವಿದ್ಯಾಲಯಕ್ಕೆ ರಾಷ್ಟ್ರೀಯ ವೈದ್ಯಕೀಯ ಪರಿಷತ್‌ನಿಂದ ಅನುಮತಿ ದೊರೆತಿದ್ದು, ಕಾಲೇಜು ಜು.31 ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಮಾಜಿ ಸಚಿವ ಹಾಗೂ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಪಾಟೀಲ ತಿಳಿಸಿದರು.

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಮಹಾವಿದ್ಯಾಲಯ ಉದ್ಘಾಟಿಸುವರು. ಆಸ್ಪತ್ರೆಯನ್ನು ಆರೋಗ್ಯ ಸಚಿವ ದಿನೇಶ ಗುಂಡೂರಾವ್‌ ಉದ್ಘಾಟಿಸಲಿದ್ದಾರೆ ಎಂದರು.

ರಾಜ್ಯದಿಂದ 5 ಹಾಗೂ ದೇಶಾದ್ಯಂತ ಒಟ್ಟು 113 ವೈದ್ಯಕೀಯ ಕಾಲೇಜುಗಳ ಅನುಮತಿಗಾಗಿ ಅರ್ಜಿ ಸಲ್ಲಿಸಲಾಗಿತ್ತು. ರಾಜ್ಯದಲ್ಲಿ ಅನುಮತಿ ಸಿಕ್ಕ ಮೂರು ಕಾಲೇಜುಗಳ ಪೈಕಿ ಹಾಗೂ ರಾಷ್ಟ್ರದಲ್ಲಿ 26 ಕಾಲೇಜುಗಳ ಪೈಕಿ ನಮ್ಮ ಕಾಲೇಜಿಗೆ ಅನುಮತಿ ದೊರಕಿರುವುದು ಸಂತಸ ತಂದಿದೆ ಎಂದರು.

ಒಂದು ಸಣ್ಣ ಹಳ್ಳಿಯಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭಿಸುವ ಯೋಚನೆ ಬಗ್ಗೆ ಹಿತೈಷಿಗಳಲ್ಲಿ ತಿಳಿಸಿದಾಗ ಅನೇಕರು ನಗರ ಪ್ರದೇಶಗಳಲ್ಲಿ ಮಾಡಿದರೆ ಅನುಕೂಲ. ಇಲ್ಲದಿದ್ದರೆ ನಷ್ಟವಾಗುತ್ತದೆ ಎಂದು ಸಲಹೆ ನೀಡಿದರು. ಆದರೆ, ಮಹಾತ್ಮ ಗಾಂಧಿ ಹಾಗೂ ಎಪಿಜೆ ಅಬ್ದುಲ್ ಕಲಾಂ ಅವರ ಮಾತಿನಂತೆ ನಡೆಯುವ ನಾನು ಹಳ್ಳಿಗಳತ್ತ ಜನರು ಬರಬೇಕು ಹಾಗೂ ಗ್ರಾಮೀಣ ಭಾಗದವರಿಗೆ ಒಳ್ಳೆಯ ಆರೋಗ್ಯ ಸೇವೆ ನೀಡಬೇಕು ಎಂಬ ಉದ್ದೇಶದಿಂದ ನನ್ನ ಜನ್ಮಸ್ಥಳವಾದ ಬಾಡಗಂಡಿಯಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭಿಸಿದ್ದೇನೆ ಎಂದು ತಿಳಿಸಿದರು.ನಂಜುಂಡಪ್ಪನವರ ವರದಿ ಪ್ರಕಾರ ಬೀಳಗಿ ತಾಲೂಕು ಅತೀ ಹಿಂದುಳಿದ ತಾಲೂಕಾಗಿದೆ. ಇಂತಹ ತಾಲೂಕಿನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಿ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ಗಡಿಭಾಗದ ಅಂದಾಜು 350 ಗ್ರಾಮಗಳ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವುದೇ ನಮ್ಮ ಉದ್ದೇಶವಾಗಿದೆ. ಜತೆಗೆ ಇದರಿಂದ ಉದ್ಯೋಗ ಕೂಡ ಸೃಷ್ಟಿಯಾಗಿದೆ ಎಂದು ತಿಳಿಸಿದರು.

ಅತ್ಯಾಧುನಿಕ ಸೇವೆ ಲಭ್ಯ:

ರೈತಾಪಿ ಜನಗಳೇ ಇರುವ ನಮ್ಮ ಭಾಗದಲ್ಲಿ ವಿವಿಧ ಆರೋಗ್ಯ ಸೇವೆಗಳಿಗಾಗಿ ಜನರು ಬಾಗಲಕೋಟೆ, ವಿಜಯಪುರ, ಹುಬ್ಬಳ್ಳಿ, ಬೆಳಗಾವಿಯಂತಹ ನಗರಗಳತ್ತ ಹೋಗುವುದು ಅನಿವಾರ್ಯವಾಗಿತ್ತು. ಆದರೆ, ನಮ್ಮ ರೈತ ಕುಟುಂಬಗಳಿಗೆ ಉತ್ತಮ ಆರೋಗ್ಯ ಸೇವೆ ನೀಡಬೇಕು ಎಂಬ ಉದ್ದೇಶದಿಂದ ಇಸಿಜಿ, ಸಿಟಿ ಸ್ಕ್ಯಾನ್ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳು ಆಸ್ಪತ್ರೆಯಲ್ಲಿ ಮಾಡಲಾಗಿದೆ ಎಂದು ತಿಳಿಸಿದರು.

ಉಚಿತ ಆರೋಗ್ಯ ಸೇವೆ:

ಎಸ್.ಆರ್.ಪಾಟೀಲ ಶಿಕ್ಷಣ ಪ್ರತಿಷ್ಠಾನದಿಂದ ನಿರ್ಮಿಸಿರುವ ಆಸ್ಪತ್ರೆಯಲ್ಲಿ 2023ರ ಆಗಸ್ಟ್ 1 ರಿಂದ ಎಲ್ಲ ಆರೋಗ್ಯ ಸೇವೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಇಲ್ಲಿಯವರೆಗೆ 3,44,400 ಹೊರ ರೋಗಿಗಳು, 2,06,305 ರೋಗಿಗಳು ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆದಿದ್ದಾರೆ. ಜತೆಗೆ ಆಸ್ಪತ್ರೆಯಲ್ಲಿರುವ 9 ಶಸ್ತ್ರಚಿಕಿತ್ಸಾ ಕೊಠಡಿಗಳಲ್ಲಿ ಇಲ್ಲಿಯವರೆಗೆ 3,015 ವಿವಿಧ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದೆ. ಉಚಿತ ಸೇವೆಯನ್ನು ಬರುವ ಆಗಸ್ಟ್ 15ರ ವರೆಗೆ ನೀಡಲು ನಿರ್ಧಾರಮಾಡಲಾಗಿದೆ ಎಂದು ತಿಳಿಸಿದರು.

10 ಸಾವಿರ ಜನರಿಗೆ ಉದ್ಯೋಗ:

ರಾಜಕೀಯ ಸ್ಥಾನಮಾನ ಕಳೆದ ಎರಡು ವರ್ಷದಿಂದ ದೊರೆಯದ ಕಾರಣ ವೈದ್ಯಕೀಯ ಮಹಾವಿದ್ಯಾಲಯದ ನಿರ್ಮಿಸಲು ನನಗೆ ಸಮಯ ದೊರಕಿತು. ಇಲ್ಲಿಯವರೆಗೆ ಉದ್ಯಮ, ಶಿಕ್ಷಣ, ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ನನಗೆ ಆರೋಗ್ಯ ಕ್ಷೇತ್ರದಲ್ಲೂ ಜನರಿಗೆ ಸಹಾಯ ಮಾಡುವ ಉದ್ದೇಶವಿತ್ತು. ಆ ಕಾಲ ಇದೀಗ ಕೂಡಿ ಬಂದಿದೆ. ಈ ಎಲ್ಲ ರಂಗಳಲ್ಲಿ ತೊಡಗಿಸಿಕೊಂಡಿರುವ ನಾನು ಅಂದಾಜು 10 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಉದ್ಯೋಗ ನೀಡಿದ್ದೇನೆ ಎಂದು ತಿಳಿಸಿದರು.

ಎಸ್.ಆರ್.ಪಾಟೀಲ ಮೆಡಿಕಲ್ ಕಾಲೇಜಿನ ಕಾರ್ಯದರ್ಶಿ ಎಂ.ಎನ್.ಪಾಟೀಲ ಮಾತನಾಡಿ, ಎಸ್.ಆರ್.ಪಾಟೀಲ ಅವರು 55 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಅನೇಕ ಕೆಲಸಗಳಿಗೆ ಕೈ ಹಾಕಿ ಯಶಸ್ವಿಯಾಗಿದ್ದಾರೆ. ನರ್ಸಿಂಗ್ ಕಾಲೇಜು, ಎಂಬಿಬಿಎಸ್ ಹಾಗೂ ಬಿಎಎಂಎಸ್ ಕಾಲೇಜು ಸ್ಥಾಪಿಸುವ ಮೂಲಕ ಬಡ ಜನರಿಗೆ ಒಳ್ಳೆಯ ಆರೋಗ್ಯ ಕಲ್ಪಿಸುವ ಯೋಚನೆ ಇತ್ತು. ಅದರಂತೆ ಇಂದು ವೈದ್ಯಕೀಯ ವಿದ್ಯಾಲಯ ಸ್ಥಾಪನೆಯಾಗಿ, ಜನರಿಗೆ ಉಚಿತವಾಗಿ ಆರೋಗ್ಯ ಸೇವೆ ಒದಗಿಸುತ್ತಿದೆ. ಕಳೆದ ಆಗಸ್ಟ್ 1 ರಿಂದ ಇಲ್ಲಿಯವರೆಗೆ ₹7 ಕೋಟಿ ಮೌಲ್ಯದ ಔಷಧಿಯನ್ನು ಜನರಿಗೆ ಉಚಿತವಾಗಿ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.

----

ಕೋಟ್

250 ವಿದ್ಯಾರ್ಥಿಗಳ ಓದಿಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಆಸ್ಪತ್ರೆಯಲ್ಲಿ ಮಾಡಿಕೊಳ್ಳಲಾಗಿದೆ. ಸದ್ಯ 100 ವಿದ್ಯಾರ್ಥಿಗಳ ಪ್ರವೇಶಕ್ಕೆ ಮಾತ್ರ ಅನುಮತಿ ದೊರೆತಿದ್ದು, ಮುಂದಿನ ವರ್ಷ ಸ್ನಾತಕೋತ್ತರ ಪ್ರಾರಂಭಿಸಲು ಅರ್ಜಿ ಸಲ್ಲಿಸಲಾಗುತ್ತದೆ.

- ಎಸ್.ಆರ್.ಪಾಟೀಲ, ಮಾಜಿ ಸಚಿವ ಹಾಗೂ ಎಸ್.ಆರ್.ಪಾಟೀಲ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ