ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂಧನೂರು:
ಇಲ್ಲಿನ ಸರ್ಕಾರಿ ಮಹಾವಿದ್ಯಾಲಯದ ಸುವರ್ಣ ಸಂಭ್ರಮ ಕಾರ್ಯಕ್ರಮ ಡಿ.೧೯ ರಂದು ನಡೆಯಲಿದ್ದು, ಕಾರ್ಯಕ್ರಮಕ್ಕೆ ಹಳೆಯ ವಿದ್ಯಾರ್ಥಿಗಳು ತನು-ಮನ-ಧನದಿಂದ ಸಂಪೂರ್ಣವಾಗಿ ಸಹಕರಿಸಬೇಕು ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಪ್ರಹ್ಲಾದರೆಡ್ಡಿ ಹೇಳಿದರು.ಸರ್ಕಾರಿ ಮಹಾವಿದ್ಯಾಲಯದಲ್ಲಿ ಹಳೆ ವಿದ್ಯಾರ್ಥಿಗಳ ಎರಡನೇ ಸಭೆ ಉದ್ಧೇಶಿಸಿ ಮಾತನಾಡಿದ ಅವರು, ಗುಲ್ಬರ್ಗ ವಿಶ್ವವಿದ್ಯಾಲಯದ ನಂತರ ತಾಲೂಕ ಮಟ್ಟದಲ್ಲಿ ಆರಂಭಗೊಂಡ ಅತ್ಯಂತ ಹಳೆಯ ಕಾಲೇಜುಗಳಲ್ಲಿ ಇದು ಒಂದಾಗಿದೆ. ಸುವರ್ಣ ಸಂಭ್ರಮ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ, ಉನ್ನತ ಶಿಕ್ಷಣ ಸಚಿವ ಸುಧಾಕರ, ರಾಯಚೂರು ವಿಶ್ವವಿದ್ಯಾಲಯ ಉಪಕುಲಪತಿ ಪ್ರೋ.ಹರಿಶ್ರಾಮಸ್ವಾಮಿ, ಕಲಬುರ್ಗಿ ವಿವಿಯ ಕುಲ ಸಚಿವರು ಸೇರಿ ವಿವಿಧ ಗಣ್ಯರು, ಜನಪ್ರತಿನಿಧಿಗಳು, ಕಾಲೇಜಿನ ನಿವೃತ್ತ ಉಪನ್ಯಾಸಕರು, ಪ್ರಾಧ್ಯಾಪಕರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಲವಾರು ಮಹನೀಯರನ್ನು ಸನ್ಮಾನಿಸಲಾಗುವುದು. ಸುವರ್ಣ ಸಂಭ್ರಮ ಕಾರ್ಯಕ್ರಮ ಒಂದು ವರ್ಷ ಪೂರ್ತಿ ನಡೆಯಲಿದ್ದು, ಹಳೆಯ ವಿದ್ಯಾರ್ಥಿಗಳು, ನಿವೃತ್ತ ಪ್ರಾಚಾರ್ಯರು, ಪ್ರಾಧ್ಯಾಪಕರ ಸಲಹೆ ಸೂಚನೆಗಳನ್ವಯ ಪ್ರತಿ ತಿಂಗಳು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಸುವರ್ಣ ಸಂಭ್ರಮದ ಸವಿ ನೆನೆಪಿಗಾಗಿ ಸ್ಮರಣ ಸಂಚಿಕೆಯನ್ನು ಹೊರ ತರಲಾಗುತ್ತದೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ರಾಜಶೇಖರ ಪಾಟೀಲ್, ನಗರಸಭೆ ಮಾಜಿ ಅಧ್ಯಕ್ಷ ಸೈಯದ್ ಜಾಫರಅಲಿ ಜಾಗೀರದಾರ್, ಮಾಜಿ ಉಪಾಧ್ಯಕ್ಷ ಎಂ.ಡಿ.ನದಿಮ ಮುಲ್ಲಾ, ನಗರಸಭೆ ಸದಸ್ಯ ಚಂದ್ರಶೇಖರ ಮೈಲಾರ, ಮುಖಂಡರಾದ ಮೊಹಿನುದ್ದಿನ್ ಯತ್ಮಾರಿ, ನಾರಾಯಣಪ್ಪ ಕಿಲ್ಲೆದ್, ಎಂ.ಕೃಷ್ಣ, ಪ್ರಹ್ಲಾದಗುಡಿ ಸಲಹೆ ಸೂಚನೆಗಳನ್ನು ನೀಡಿದರು. ಪ್ರಾಧ್ಯಾಪಕರಾದ ವೈಜನಾಥ ಹಿರೇಮಠ, ಖಾದರಬಾಷ ನಿರೂಪಿಸಿದರು.