ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಾಲೂಕಿನ ವೆಂಕಟಯ್ಯನಛತ್ರ ಸರ್ಕಾರಿ ಶಾಲಾವರಣದಲ್ಲಿ 1996ನೇ ಸಾಲಿನ ಎಸ್ಸೆಸ್ಸೆಲ್ಸಿ ಹಿರಿಯ ವಿದ್ಯಾರ್ಥಿಗಳಿಂದ ಅರ್ಥಪೂರ್ಣ ಗುರುವಂದನಾ ಕಾರ್ಯಕ್ರಮ ನಡೆಯಿತು.ಕವಿ ಸಿ.ಶಂಕರ ಅಂಕನಶೆಟ್ಟಿಪುರ ಅವರು ಸಂಪಾದಕತ್ವದ ಇತಿಹಾಸ ಪುಟದಲ್ಲೊಂದು ಸ್ನೇಹ ಚರಿತ್ರೆ ಪುಸ್ತಕ ಬಿಡುಗಡೆ ಮತ್ತು ಹಳೆಯ ವಿದ್ಯಾರ್ಥಿಗಳೇ ನಿರ್ಮಿಸಿರುವ ಶಾಲೆಯ ನಾಮಫಲಕದ ಕಮಾನು ಉದ್ಘಾಟಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ, ಅಭಿನಂದನೆ ಸ್ವೀಕರಿಸಿದ ಪದವಿಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಎನ್.ಪುಟ್ಟರಾಜ ಮಾತನಾಡಿ, ಗುರುಗಳ ಸೇವೆಯನ್ನು ಸ್ಮರಿಸುವುದು ಮತ್ತು ಅವರಿಗೆ ಧನ್ಯತಾ ಗೌರವ ಸಮರ್ಪಣೆ ಮಾಡುವುದು ಸಾರ್ಥಕ ಕಾರ್ಯ. ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಹಿರಿಯ ವಿದ್ಯಾರ್ಥಿಗಳು 28 ವರ್ಷಗಳ ನಂತರ ಒಂದೆಡೆ ಸೇರಿ ಕಾರ್ಯಕ್ರಮ ಹಮ್ಮಿಕೊಂಡು ಪಾಠ ಹೇಳಿಕೊಟ್ಟ ಗುರುಗಳಿಗೆ ಅಭಿನಂದನೆ ಸಲ್ಲಿಸುವ ಕೆಲಸ ಒಂದು ಶ್ಲಾಘನೀಯ ಎಂದರು.
ಸಾಹಿತಿ ಮಹೇಶ್ ಹರವೆ ಇತಿಹಾಸ ಪುಟ್ಟದಲ್ಲೊಂದು ಸ್ನೇಹ ಚರಿತ್ರೆ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಮಲೆಗಳ ಮದುಮಗಳು ಕಾದಂಬರಿ ಮಾದರಿಯಲ್ಲಿ ಇತಿಹಾಸ ಪುಟ್ಟದಲ್ಲೊಂದು ಸ್ನೇಹ ಚರಿತ್ರೆ ಪುಸ್ತಕ ಮೂಡಿಬಂದಿದ್ದು, ಒಂದು ಕಾದಂಬರಿ ಆಗಲಿದೆ. ಈ ಪುಸ್ತಕದಲ್ಲಿ ಪ್ರೀತಿ, ಪ್ರೇಮ, ಹೋರಾಟ ಇದ್ದು, ಸಾಮಾಜಿಕ, ಸಾಂಸ್ಕೃತಿಕ ಜೀವನ ಕಾಣುತ್ತಿದೆ. ಬದುಕಿನಲ್ಲಿ ಸಾಧನೆ ಮಾಡಿರುವ ನೀವು ನಮಗೆ ಶಿಕ್ಷಕರು, ಸಮಾಜ ಕಟ್ಟುವ ಕೆಲಸದಲ್ಲಿ ನಿರತರಾಗಿರುವ ನಿಮ್ಮ ಜೀವನ ಉತ್ತಮವಾಗಲಿ ಎಂದು ಆಶಿಸಿದರು.ಅಧ್ಯಕ್ಷತೆ ವಹಿಸಿದ ಕಾಲೇಜು ಉಪಪ್ರಾಂಶುಪಾಲೆ ನಾಗರತ್ನಮ್ಮ ಮಾತನಾಡಿ, ಹಳೆ ವಿದ್ಯಾರ್ಥಿಗಳು ಒಂದೆ ಕಡೆ ಸೇರಿ ತಮಗೆ ಪಾಠ ಹೇಳಿಕೊಟ್ಟ ಗುರುಗಳನ್ನು ಅಭಿನಂದಿಸುತ್ತಿರುವುದು ನಿಜಕ್ಕೂ ಅರ್ಥಪೂರ್ಣವಾದದ್ದು, ಶಾಲೆಯ 1996 ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಇಂದಿನ ವಿದ್ಯಾರ್ಥಿಗಳಿಗೆ ಮಾದರಿ ಆಗಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಕಾಲೇಜು ಪ್ರಭಾರ ಪ್ರಾಂಶುಪಾಲ ಮಲ್ಲೇಶ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಎಸ್.ಶಶಿಕುಮಾರ್ ಇದ್ದರು.
ಗೌರವ ಸಮರ್ಪಣೆ:ನಿವೃತ್ತ ಶಿಕ್ಷಕರಾದ ಎಚ್.ಎಂ.ವೀರೇಶ್ವರಯ್ಯ, ಎಂ.ನಟರಾಜು, ಜಿ.ಚನ್ನಂಜಯ್ಯ, ಆರ್.ಶ್ರೀಕಂಠಸ್ವಾಮಿ, ಅಂಬರೀಶ್ ರಾಜೇ ಅರಸ್, ಎನ್.ಮಹದೇವಯ್ಯ, ಡಿ.ಎನ್.ಮಹದೇವಪ್ಪ ಅವರಿಗೆ ಹಳೆಯ ವಿದ್ಯಾರ್ಥಿಗಳು ಗೌರವ ಸಮರ್ಪಣೆ ಮಾಡಿದರು. ಶಾಲಾ ನಿವೇಶನದ ದಾನಿಗಳ ಕುಟುಂಬಸ್ಥರನ್ನು ಹಾಗೂ ಖೋಖೋ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.