ಅವ್ಯವಸ್ಥೆಗಳ ಆಗರವಾದ ಆಲೂರು ಬಸ್‌ ನಿಲ್ದಾಣ

| Published : Sep 11 2025, 12:03 AM IST

ಅವ್ಯವಸ್ಥೆಗಳ ಆಗರವಾದ ಆಲೂರು ಬಸ್‌ ನಿಲ್ದಾಣ
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯವಾಗಿ ಈ ಬಸ್ ನಿಲ್ದಾಣದಲ್ಲಿ ಕೂರಲು ಸಾಕಷ್ಟು ಆಸನಗಳ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ನೆಲದಲ್ಲಿ ಹಾಗೂ ಮೆಟ್ಟಿಲುಗಳ ಮೇಲೆ ಕೂರುವಂತಾಗಿದೆ. ಈ ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಸಿಸಿ ಕ್ಯಾಮೆರಾಗಳ ವ್ಯವಸ್ಥೆ ಇಲ್ಲ, ಹೈ ಮಾಸ್ಟ್‌ ದೀಪದ ವ್ಯವಸ್ಥೆ ಇಲ್ಲ, ವಿಶ್ರಾಂತಿ ಗೃಹವಿಲ್ಲ, ಮುಖ್ಯವಾಗಿ ಇಲ್ಲಿ ರಾತ್ರಿ ವೇಳೆಯಲ್ಲಿ ಸಂಚಾರ ನಿಯಂತ್ರಕರು ಇರುವುದಿಲ್ಲ. ಇಲ್ಲಗಳ ತವರೂರಾಗಿರುವ ಈ ಬಸ್ ನಿಲ್ದಾಣ ರಾತ್ರಿ ಆದರೆ ಹೇಳುವವರು ಕೇಳುವವರಿಲ್ಲದೆ ಅನೈತಿಕ ಚಟುವಟಿಕೆಗಳ ಕೇಂದ್ರವಾಗುತ್ತಿದ್ದು, ರಾತ್ರಿ ವೇಳೆಯಲ್ಲಿ ಯಾರಾದರೂ ಪ್ರಯಾಣಿಕರು ಬಸ್ ನಿಲ್ದಾಣದ ಒಳಗೆ ಹೋಗಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕನ್ನಡಪ್ರಭವಾರ್ತೆ ಆಲೂರುತಾಲೂಕು ಕೇಂದ್ರ ಆಲೂರು ಪಟ್ಟಣದಲ್ಲಿರುವ ಬಸ್ ನಿಲ್ದಾಣ ಅವ್ಯವಸ್ಥೆಗಳ ಆಗರವಾಗಿದ್ದು, ಈ ಬಸ್ ನಿಲ್ದಾಣದಲ್ಲಿ ಸೂಕ್ತ ಮೂಲಭೂತ ಸೌಕರ್ಯಗಳಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ.ಮುಖ್ಯವಾಗಿ ಈ ಬಸ್ ನಿಲ್ದಾಣದಲ್ಲಿ ಕೂರಲು ಸಾಕಷ್ಟು ಆಸನಗಳ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ನೆಲದಲ್ಲಿ ಹಾಗೂ ಮೆಟ್ಟಿಲುಗಳ ಮೇಲೆ ಕೂರುವಂತಾಗಿದೆ. ಈ ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಸಿಸಿ ಕ್ಯಾಮೆರಾಗಳ ವ್ಯವಸ್ಥೆ ಇಲ್ಲ, ಹೈ ಮಾಸ್ಟ್‌ ದೀಪದ ವ್ಯವಸ್ಥೆ ಇಲ್ಲ, ವಿಶ್ರಾಂತಿ ಗೃಹವಿಲ್ಲ, ಮುಖ್ಯವಾಗಿ ಇಲ್ಲಿ ರಾತ್ರಿ ವೇಳೆಯಲ್ಲಿ ಸಂಚಾರ ನಿಯಂತ್ರಕರು ಇರುವುದಿಲ್ಲ. ಇಲ್ಲಗಳ ತವರೂರಾಗಿರುವ ಈ ಬಸ್ ನಿಲ್ದಾಣ ರಾತ್ರಿ ಆದರೆ ಹೇಳುವವರು ಕೇಳುವವರಿಲ್ಲದೆ ಅನೈತಿಕ ಚಟುವಟಿಕೆಗಳ ಕೇಂದ್ರವಾಗುತ್ತಿದ್ದು, ರಾತ್ರಿ ವೇಳೆಯಲ್ಲಿ ಯಾರಾದರೂ ಪ್ರಯಾಣಿಕರು ಬಸ್ ನಿಲ್ದಾಣದ ಒಳಗೆ ಹೋಗಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ತಾಲೂಕು ಕೇಂದ್ರದ ಬಸ್ ನಿಲ್ದಾಣಕ್ಕೆ ಕೇವಲ ಒಬ್ಬರೇ ಒಬ್ಬ ಸಂಚಾರಿ ನಿಯಂತ್ರಕನನ್ನು ನಿಯೋಜಿರುವ ಕಾರಣ, ಬೆಳಗಿನ ಪಾಳಿ ಮುಗಿಸಿದರೆ ರಾತ್ರಿ ಪಾಳಿಯಲ್ಲಿ ಇಲ್ಲಿ ಯಾರೂ ಇರದ ಕಾರಣ ಈ ಬಸ್ ನಿಲ್ದಾಣದೊಳಗೆ ಯಾವುದೇ ಬಸ್ಸುಗಳು ಬಾರದೆ ಪ್ರಯಾಣಿಕರು ರಸ್ತೆಯಲ್ಲಿ ಬಸ್ ನಿಲ್ದಾಣದ ಹೊರ ಭಾಗದಲ್ಲಿ ಬಸ್‌ಗಳಿಗೆ ಕಾಯುವಂತಾಗಿದೆ. ವೇಗಧೂತ ಬಸ್ ನಿಲುಗಡೆಗೆ ಬಸ್ ನಿಲ್ದಾಣದೊಳಗೆ ಒಂದು ತಂಗು ತಾಣವನ್ನು ಮಾಡಿದ್ದು ಅಲ್ಲಿ ಬಸ್‌ಗಳನ್ನು ನಿಲ್ಲಿಸದೆ ಎಲ್ಲಿಂದರಲ್ಲಿ ಬಸ್‌ಗಳನ್ನು ನಿಲ್ಲಿಸುತ್ತಿರುವುದರಿಂದ, ಪ್ರಯಾಣಿಕರು ತಾವೆಲ್ಲಿ ಬಸ್‌ಗಳಿಗಾಗಿ ಕಾಯಬೇಕೆಂಬುದು ತಿಳಿಯದೆ ಪರದಾಡುವಂಥಾಗಿದೆ. ಮಳೆಗಾಲದಲ್ಲಂತೂ ಪ್ರಯಾಣಿಕರ ಹಾಗೂ ವಿದ್ಯಾರ್ಥಿಗಳ ಸ್ಥಿತಿ ಹೇಳತೀರದಂತಾಗಿದ್ದು, ಮಳೆಯಲ್ಲಿ ನೆನೆದುಕೊಂಡೆ ಬಸ್ಸುಗಳಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.ಇನ್ನೂ ಇಲ್ಲಿ ಬೈಕ್ ಹಾಗೂ ಕಾರ್‌ಗಳನ್ನು ನಿಲ್ಲಿಸಲು ಯಾವುದೇ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ, ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದಾಗಿ, ಸಂಚಾರ ವ್ಯವಸ್ಥೆಗೆ ತೀವ್ರ ಅಡಚಣೆ ಉಂಟಾಗಿದೆ. ಈ ಬಸ್ ನಿಲ್ದಾಣದ ವ್ಯವಸ್ಥೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿ, ಹಲವು ಬಾರಿ ಸಾರ್ವಜನಿಕರು ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಪಾರ್ಕಿಂಗ್ ವ್ಯವಸ್ಥೆ ಮಾಡುವುದಾಗಿ ಹೇಳಿ ಈ ಬಸ್ ನಿಲ್ದಾಣದ ಸುತ್ತಲೂ ಇದ್ದ ಬೆಲೆಬಾಳುವ ಮರಗಳನ್ನು ಸಾರಿಗೆ ಇಲಾಖೆಯವರು ಕಡಿದು ಸಾಗಿಸಿ ವರ್ಷಗಳೇ ಕಳೆಯುತ್ತಾ ಬಂದರೂ ಪಾರ್ಕಿಂಗ್ ವ್ಯವಸ್ಥೆಯನ್ನು ಮಾತ್ರ ಮಾಡಿಲ್ಲ. ಆದುದರಿಂದ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಇತ್ತ ಗಮನ ಹರಿಸಿ, ಸಾರ್ವಜನಿಕರ ರೊಚ್ಚಿಗೆದ್ದು ಹೋರಾಟದ ಹಾದಿ ಹಿಡಿಯುವ ಮುನ್ನ ಈ ಬಸ್ ನಿಲ್ದಾಣಕ್ಕೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಹಗಲು ಹಾಗೂ ರಾತ್ರಿ ಪಾಳಿಗೆ ಸಂಚಾರಿ ನಿಯಂತ್ರಕರನ್ನು ನಿಯೋಜಿಸಬೇಕಾಗಿದೆ.ಹೇಳಿಕೆ

ಪಟ್ಟಣದ ಬಸ್ ನಿಲ್ದಾಣಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು, ಈಗಾಗಲೇ ಈ ಹಿಂದೆ ಇದ್ದ ಉಸ್ತುವಾರಿ ಸಚಿವ ರಾಜಣ್ಣನವರಿಗೆ ಪತ್ರ ಬರೆಯಲಾಗಿತ್ತು. ಆದರೆ ಅವರು ಈಗ ಬದಲಾದ ಕಾರಣ ಈಗ ನಿಯೋಜಿತರಾಗಿರುವ ಉಸ್ತುವಾರಿ ಸಚಿವರ ಗಮನಕ್ಕೆ ಇಲ್ಲಿನ ಪರಿಸ್ಥಿತಿಯ ಬಗ್ಗೆ ತಕ್ಷಣವೇ ತಿಳಿಸಿ,ಇಲ್ಲಿಗೆ ಬೇಕಾದ ಸಿಬ್ಬಂದಿ ವರ್ಗ ಹಾಗೂ ಸೂಕ್ತ ಸೌಲಭ್ಯಗಳನ್ನು ಒದಗಿಸುವಂತೆ ಅವರಲ್ಲಿ ಮನವಿ ಮಾಡಲಾಗುವುದು. - ಪೃಥ್ವಿ ಜೈರಾಮ್‌ ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ