ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು
ತೀವ್ರ ಕುತೂಹಲ ಕೆರೆಳಿಸಿದ್ದ ಆಲೂರು ಪಟ್ಟಣ ಪಂಚಾಯತಿಯ ಎರಡನೇ ಅವಧಿಗೆ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ, ಭಾರಿ ಹೈ ಡ್ರಾಮ ನೆಡೆದು ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿದ್ದ ತಾಹಿರಾಬೇಗಂ, ಇಬ್ಬರು ಪಕ್ಷೇತರ ಸದಸ್ಯರು, ಇಬ್ಬರು ಬಿಜೆಪಿ ಸದಸ್ಯರು, ಓರ್ವ ಜೆಡಿಎಸ್ ಸದಸ್ಯೆ ಸೇರಿದಂತೆ ಸಂಸದರ 1 ಮತ ಸೇರಿ ಒಟ್ಟು 7 ಮತಗಳನ್ನು ಪಡೆದು ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ ಪಿ ರಾಣಿ ಅವರನ್ನು ಪರಾಭವಗೊಳಿಸಿ ಅಧ್ಯಕ್ಷ ಸ್ಥಾನಕ್ಕೇರಿದರು. ರಾಣಿ ಅವರ ಪರವಾಗಿ ಕೇವಲ 3 ಮತಗಳು ಮಾತ್ರ ಚಲಾವಣೆಗೊಂಡವು. ಅಂತಿಮವಾಗಿ ನೂತನ ಅಧ್ಯಕ್ಷರಾಗಿ 7 ಮತಗಳನ್ನು ಪಡೆದ ತಾಹೀರ ಬೇಗಂ ಅವರನ್ನು ಅಧ್ಯಕ್ಷರಾಗಿ ಚುನಾವಣಾಧಿಕಾರಿ ತಹಸೀಲ್ದಾರ್ ನಂದಕುಮಾರ್ ಘೋಷಿಸಿದರು.ಉಪಾಧ್ಯಕ್ಷ ಸ್ಥಾನಕ್ಕೆ ಜಯಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅಂತಿಮವಾಗಿ ರತ್ನಮ್ಮ ಅವರನ್ನ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಎಂದು ಚುನಾವಣಾಧಿಕಾರಿ ಘೋಷಿಸಿದರು. ಯಾರ ಪರವಾಗಿಯೂ ಮತ ಚಲಾಯಿಸದೆ ಅಹ್ಮದ್ ತಟಸ್ಥವಾಗಿ ಉಳಿದರು.ಒಟ್ಟು ಹತ್ತು ಸದಸ್ಯರ ಬಲಾಬಲದ ಆಲೂರು ಪಟ್ಟಣ ಪಂಚಾಯತ್‌ನಲ್ಲಿ ಕಾಂಗ್ರೆಸ್ ಒಂದು, ಬಿಜೆಪಿ ಎರಡು ಮತ್ತು ಜೆಡಿಎಸ್ 4 ಪಕ್ಷೇತರರು 3 ಸ್ಥಾನಗಳಲ್ಲಿ ಸದಸ್ಯರಾಗಿ ಆಯ್ಕೆಯಾಗಿದ್ದರು . ರಾಷ್ಟ್ರ ರಾಜ್ಯ ಮಟ್ಟದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆಯಾಗಿದ್ದರು ಕೂಡ, ಆಲೂರು ಪಟ್ಟಣ ಪಂಚಾಯತಿಯಲ್ಲಿ ಮೈತ್ರಿ ಫಲನೀಡದೆ ಇರುವುದರಿಂದ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಯಿತು.ರಾಷ್ಟ-ರಾಜ್ಯ ಮಟ್ಟದಲ್ಲಿ ಮೈತ್ರಿ ಧರ್ಮ ಇದ್ದರು ಹಾಸನ ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಸೇರಿದಂತೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಮನ್ವಯ ಕೊರತೆಯಿಂದಾಗಿ ಬಿಜೆಪಿ ಪಕ್ಷದ ಸದಸ್ಯರು, ಪಕ್ಷಾತೀತವಾಗಿ ಬೆಂಬಲಿಸುವ ಮೂಲಕ ಕಾಂಗ್ರೆಸ್ ಪಕ್ಷದ ತಾಹೀರ ಬೇಗಂ ಹಾಗೂ ಜೆಡಿಎಸ್ ನಿಂದ ಗೆದ್ದು ಕಾಂಗ್ರೆಸ್ ತೆಕ್ಕೆಗೆ ಜಿಗಿದಿದ್ದ ಭಂಡಾಯ ಸದಸ್ಯೆ ಜಯಮ್ಮ ಆಯ್ಕೆಯಾದರು.
ಆಲೂರು ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಬಹುಮತವಿದ್ದರೂ ಮೈತ್ರಿ ಕೂಟ ಸಮನ್ವಯ ಸಾಧಿಸಲು ವಿಫಲವಾಗದ ಹಿನ್ನೆಲೆಯಲ್ಲಿ, ಮೈತ್ರಿಯ ಒಳ ಜಗಳದಿಂದ ಕೇವಲ ಒಬ್ಬರೇ ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್ ಪಕ್ಷದ ಮುಖಂಡರು ಮಾಡಿದ ಆಪರೇಷನ್ ಕಾಂಗ್ರೆಸ್‌ಗೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮುಖಂಡರು ತೀವ್ರ ಮುಖಭಂಗ ಅನುಭವಿಸಬೇಕಾಯಿತು.ನೂತನ ಅಧ್ಯಕ್ಷರಾದ ಶ್ರೀಮತಿ ತಾಹಿರಾಬೇಗಂ ಮಾತನಾಡಿ, ಆಲೂರು ಪಟ್ಟಣದ ಅಭಿವೃದ್ಧಿ ವಿಚಾರದಲ್ಲಿ ಎಲ್ಲಾ ಸದಸ್ಯರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಅಧಿಕಾರ ನಡೆಸುತ್ತೇನೆ ಹಾಗೂ ಎಲ್ಲಾ ಸದಸ್ಯರ ವಾರ್ಡ್‌ಗಳಲ್ಲಿರುವ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಸಂಸದ ಶ್ರೇಯಸ್ ಎಂ.ಪಟೇಲ್ ಮಾತನಾಡಿ, ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾಗಿ ಹೋಗಬೇಕು, ನನ್ನ ಗಮನಕ್ಕೆ ಬಂದಿರುವಂತೆ ಆಲೂರು ತಾಲೂಕು ತೀರ ಹಿಂದುಳಿದಿದ್ದು ಆಲೂರು ಪಟ್ಟಣದಲ್ಲಿ ಪಟ್ಟಣದಲ್ಲಿ, ಕುಡಿಯುವ ನೀರಿನ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಈ ವಿಚಾರವಾಗಿ ನನ್ನ ಅನುದಾನದಲ್ಲಿ ಆಲೂರು ಪಟ್ಟಣದ ಅಭಿವೃದ್ಧಿಗೆ ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದ ಅವರು, ಯಾವುದೇ ಕಾರಣಕ್ಕೂ ನಾಗರಿಕರಿಗೆ ತೊಂದರೆಯಾಗದಂತೆ ಸದಸ್ಯರು ನೋಡಿಕೊಳ್ಳಬೇಕು. ಪ್ರತಿ ವಾರ್ಡಿಗೂ ಸದಸ್ಯರು ಹೋಗಿ ಜನರ ಕುಂದುಕೊರತೆಗಳನ್ನು ಆಲಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು, ಎಲ್ಲರನ್ನು ಒಗ್ಗೂಡಿಸಿಕೊಂಡು ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.ಕಾಂಗ್ರೆಸ್ ಮುಖಂಡರುಗಳಾದ ಮುರಳಿ ಮೋಹನ್, ಹೆಮ್ಮಿಗೆ ಮೋಹನ್, ತಾಲೂಕು ಅಧ್ಯಕ್ಷ ಎಸ್ಎಸ್ ಶಿವಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತಕೃಷ್ಣ, ಜಿ. ಆರ್ ರಂಗನಾಥ್, ಕೆಪಿಸಿಸಿ ಸದಸ್ಯ ಸಲೀಂ ಅಹಮದ್, ಸಣ್ಣ ಸ್ವಾಮಿ ಬಿಕೆ ಲಿಂಗರಾಜ, ರಂಗೇಗೌಡ, ಖಾಲಿದ್ ಪಾಷಾ, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಪೃಥ್ವಿ ಜಯರಾಮ್, ಸರ್ವರ್, ಎಜೆ ಸಂದೇಶ, ಸದಸ್ಯರುಗಳಾದ ಹರೀಶ್, ಧರ್ಮ, ಸಂತೋಷ್, ಅಬ್ದುಲ್ ಖುದ್ದಸ್, ಮುಂತಾದವರು ಉಪಸ್ಥಿತರಿದ್ದರು.