ಆ.1,2ರಂದು ಆಳ್ವಾಸ್‌ ಪ್ರಗತಿ: 285ಕ್ಕೂ ಅಧಿಕ ಕಂಪೆನಿಗಳು, 15 ಸಾವಿರಕ್ಕೂ ಅಧಿಕ ಉದ್ಯೋಗ ಅವಕಾಶ

| Published : Jul 28 2025, 12:47 AM IST / Updated: Jul 28 2025, 12:48 AM IST

ಆ.1,2ರಂದು ಆಳ್ವಾಸ್‌ ಪ್ರಗತಿ: 285ಕ್ಕೂ ಅಧಿಕ ಕಂಪೆನಿಗಳು, 15 ಸಾವಿರಕ್ಕೂ ಅಧಿಕ ಉದ್ಯೋಗ ಅವಕಾಶ
Share this Article
  • FB
  • TW
  • Linkdin
  • Email

ಸಾರಾಂಶ

, ಆಳ್ವಾಸ್‌ ಪ್ರಗತಿ 15ನೇ ಆವೃತ್ತಿಯನ್ನು ಆ.1ರಂದು ಬೆಳಗ್ಗೆ 9.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಉದ್ಘಾಟಿಸುವರು. ಮಂಗಳೂರು ವಿವಿ ಕುಲಪತಿ ಡಾ.ಪಿ.ಎಲ್‌. ಧರ್ಮ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಶಾಸಕ ಉಮಾನಾಥ ಎ. ಕೋಟ್ಯಾನ್‌ ಅಧ್ಯಕ್ಷತೆ ವಹಿಸುತ್ತಾರೆ. ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಶಾಸಕರು ಭಾಗವಹಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮೂಡುಬಿದಿರೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ವತಿಯಿಂದ ‘ಆಳ್ವಾಸ್‌ ಪ್ರಗತಿ- 2025’ ಬೃಹತ್‌ ಉದ್ಯೋಗ ಮೇಳ ಆಗಸ್ಟ್‌ 1 ಮತ್ತು 2ರಂದು ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ವ್ಯವಸ್ಥಾಪಕ ಟ್ರಸ್ಟಿ ವಿವೇಕ್‌ ಆಳ್ವ, ಆಳ್ವಾಸ್‌ ಪ್ರಗತಿ 15ನೇ ಆವೃತ್ತಿಯನ್ನು ಆ.1ರಂದು ಬೆಳಗ್ಗೆ 9.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಉದ್ಘಾಟಿಸುವರು. ಮಂಗಳೂರು ವಿವಿ ಕುಲಪತಿ ಡಾ.ಪಿ.ಎಲ್‌. ಧರ್ಮ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಶಾಸಕ ಉಮಾನಾಥ ಎ. ಕೋಟ್ಯಾನ್‌ ಅಧ್ಯಕ್ಷತೆ ವಹಿಸುತ್ತಾರೆ. ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಶಾಸಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಅಲ್‌ಕಾರ್ಗೋ ಲಾಜಿಸ್ಟಿಕ್ಸ್‌ ಅಧ್ಯಕ್ಷ ಶಶಿಕಿರಣ್‌ ಶೆಟ್ಟಿ, ದುಬೈನ ಫಾರ್ಚುನ್‌ ಗ್ರೂಪ್‌ ಆಫ್‌ ಹೊಟೇಲ್ಸ್‌ ವ್ಯವಸ್ಥಾಪಕ ನಿರ್ದೇಶಕ ಹಾಗೂ ಅಧ್ಯಕ್ಷ ವಕ್ವಾಡಿ ಪ್ರವೀಣ್‌ ಶೆಟ್ಟಿ, ಸೌದಿ ಅರೇಬಿಯಾ ಎಕ್ಸಪರ್ಟಟೈಸ್‌ ಕಂಪೆನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆಎಸ್‌ ಶೇಖ್‌ ಕರ್ನಿರೆ, ಬಿಗ್‌ ಬ್ಯಾಗ್ಸ್‌ ಇಂಟರ್‌ನ್ಯಾಷನಲ್‌ ಪ್ರೈವೇಟ್‌ ಲಿಮಿಟೆಡ್‌ನ ಸ್ಥಾಪಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರವೀಶ್‌ ಕಾಮತ್‌, ರೋಹನ್‌ ಕಾರ್ಪೊರೇಶನ್‌ ಸ್ಥಾಪಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರೋಹನ್‌ ಮೊಂತೇರೊ, ನೀವಿಯಸ್‌ ಸೊಲ್ಯೂಷನ್ಸ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುಯೋಗ್‌ ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು ಎಂದರು.

ಬ್ಯಾಂಕಿಂಗ್‌ ಮತ್ತು ಹಣಕಾಸು, ಐಟಿ, ಐಟಿಇಎಸ್‌, ಹೆಲ್ತ್‌ ಮತ್ತು ಫಾರ್ಮಾ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಹಾಸ್ಪಿಟ್ಯಾಲಿಟಿ, ಟೆಲಿಕಾಂ, ಮಾಧ್ಯಮ, ಶಿಕ್ಷಣ ಮತ್ತು ಎನ್‌ಜಿಒಗಳನ್ನು ಪ್ರತಿನಿಧಿಸುವ ಉನ್ನತ ಕಂಪೆನಿಗಳು ಈ ಉದ್ಯೋಗ ಮೇಳದಲ್ಲಿ ನೇಮಕಾತಿ ನಡೆಸಲಿವೆ. ಈ ಕಂಪೆನಿಗಳು ಪದವಿ ಮತ್ತು ಸ್ನಾತಕೋತ್ತರ ಪದವೀಧರರು, ವೈದ್ಯಕೀಯ ಮತ್ತು ಪ್ಯಾರಾಮೆಡಿಕಲ್‌, ಎಂಜಿನಿಯರಿಂಗ್‌, ಕಲಾ, ವಾಣಿಜ್ಯ ಹಾಗೂ ಮ್ಯಾನೇಜ್ಮೆಂಟ್‌, ಬೇಸಿಕ್‌ ಸೈನ್ಸ್‌, ನಸಿಂರ್ಗ್‌, ಐಟಿಐ, ಡಿಪ್ಲೊಮಾ, ಪಿಯುಸಿ, ಎಸ್‌ಎಸ್‌ಎಲ್‌ಸಿ ಹಾಗೂ ಇತರ ವಿದ್ಯಾರ್ಹತೆಯುಳ್ಳ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಿವೆ. ಯಾವುದೇ ಕೋರ್ಸ್‌ಗಳನ್ನು 2025ರ ಶೈಕ್ಷಣಿಕ ವರ್ಷದ ಮೊದಲು ಪೂರ್ಣಗೊಳಿಸಿದವರು ಹಾಗೂ ಅನುಭವವಿರುವ ಅಭ್ಯರ್ಥಿಗಳು ಈ ಮೇಳದಲ್ಲಿ ಮುಕ್ತವಾಗಿ ಭಾಗವಹಿಸಬಹುದು ಎಂದರು.

285 ಕಂಪೆನಿಗಳ ನೋಂದಣಿ:

ಈಗಾಗಲೇ 285 ಕಂಪೆನಿಗಳು ನೋಂದಾಯಿಸಿಕೊಂಡಿವೆ. 15,930ಕ್ಕೂ ಅಧಿಕ ಉದ್ಯೋಗ ಅವಕಾಶಗಳು ಇರಲಿವೆ. ಮ್ಯಾನುಫ್ಯಾಕ್ಚರಿಂಗ್‌ ವಲಯದಲ್ಲಿ 70 ಕಂಪೆನಿಗಳು ಭಾಗವಹಿಸುತ್ತಿವೆ. 22 ಕಂಪೆನಿಗಳು ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ ಅಭ್ಯರ್ಥಿಗಳಿಗೆ ಸುಮಾರು 200 ಉದ್ಯೋಗಾವಕಾಶ ನೀಡಲಿವೆ. 20 ಕಂಪೆನಿಗಳು ಬಿಕಾಂ ಪದವೀಧರರಿಗೆ ಸುಮಾರು 150 ಉದ್ಯೋಗಾವಕಾಶ ನೀಡಲಿವೆ. ಟಾಟಾ ಇಲೆಕ್ಟ್ರಾನಿಕ್ಸ್‌ ಸಿಸ್ಟಮ್ಸ್‌ ಸೊಲ್ಯುಶನ್ಸ್‌ ಪ್ರೈವೇಟ್‌ ಲಿಮಿಟೆಡ್‌ (ಕೋಲಾರ್‌) ಕಂಪೆನಿ ಮಹಿಳಾ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಿದೆ. ಐಟಿಐ ಅಭ್ಯರ್ಥಿಗಳಿಗೆ 1,000 ಉದ್ಯೋಗಾವಕಾಶಗಳು, ಡಿಪ್ಲೊಮಾ ಅಭ್ಯರ್ಥಿಗಳಿಗೆ 1,500 ಉದ್ಯೋಗಾವಕಾಶಗಳು ಲಭ್ಯವಿವೆ ಎಂದು ವಿವೇಕ್‌ ಆಳ್ವ ತಿಳಿಸಿದರು.

19 ಕಂಪೆನಿಗಳು ಇಲೆಕ್ಟ್ರಿಕಲ್ಸ್‌ ಆ್ಯಂಡ್‌ ಇಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌ ವಿಭಾಗದ ಅಭ್ಯರ್ಥಿಗಳಿಗೆ 60 ಉದ್ಯೋಗಾವಕಾಶಗಳನ್ನು ನೀಡಲಿವೆ. ಲಾಜಿಸ್ಟಿಕ್ಸ್‌ ವಲಯದಲ್ಲಿ ಮುಂಬೈ ಮೂಲದ ಆಲ್‌ಕಾರ್ಗೋ ಲಾಜಿಸ್ಟಿಕ್ಸ್‌ ಮತ್ತು ಭವಾನಿ ಶಿಪ್ಪಿಂಗ್‌, ಮಂಗಳೂರಿನ ಗಣೇಶ ಶಿಪ್ಪಿಂಗ್‌ ಕಂಪೆನಿ, ಫ್ಲಿಫ್‌ಕಾರ್ಚ್‌ ಕಂಪೆನಿ ಭಾಗವಹಿಸಲಿವೆ. ಐಟಿ ವಲಯದಲ್ಲಿ 10 ಕಂಪೆನಿಗಳಿಂದ 125 ಉದ್ಯೋಗಾವಕಾಶ ಲಭ್ಯವಿವೆ. ನೀವಿಯಸ್‌ ಸೊಲ್ಯೂಶನ್ಸ್‌ ವಿನ್‌ಮ್ಯಾನ್‌ ಸಹಿತ ವಿವಿಧ ಐಟಿ ಕಂಪೆನಿಗಳು ಮಂಗಳೂರು ಭಾಗದ ಉದ್ಯೋಗಗಳ ಜತೆಗೆ ಬೆಂಗಳೂರಿನಲ್ಲಿ ಕೋರ್‌ ಐಟಿ ಉದ್ಯೋಗಗಳನ್ನು ನೀಡಲಿವೆ. ಐಟಿಇಎಸ್‌ ವಲಯದಲ್ಲಿ 24 ಕಂಪೆನಿಗಳು 3000ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ನೀಡುತ್ತಿವೆ. ಬಿಇ, ಬಿಟೆಕ್‌ ಅಭ್ಯರ್ಥಿಗಳಿಗಾಗಿ 1000ಕ್ಕೂ ಹೆಚ್ಚು ನಾನ್‌ ಕೋರ್‌ ಐಟಿ ಉದ್ಯೋಗಗಳು ಲಭ್ಯ. ಎಚ್‌ಆರ್‌ ಹುದ್ದೆಗಳಿಗಾಗಿ 20 ಉದ್ಯೋಗಾವಕಾಶಗಳು ಲಭ್ಯವಿವೆ. ಬ್ಯಾಂಕಿಂಗ್‌ ಮತ್ತು ಹಣಕಾಸು ವಲಯದಲ್ಲಿ 30 ಕಂಪೆನಿಗಳಿಂದ 2500ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿವೆ. ಹೆಲ್ತ್‌ಕೇರ್‌ ವಲಯದಲ್ಲಿ 25ಕ್ಕೂ ಹೆಚ್ಚು ಪ್ರಮುಖ ಆಸ್ಪತ್ರೆಗಳು ನೋಂದಾಯಿಸಿದ್ದು, 2000ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ವಿವಿಧ ಆರೋಗ್ಯ ವಿಭಾಗಗಳಲ್ಲಿ ನೀಡುತ್ತಿವೆ. ಮಾಧ್ಯಮ ವಲಯದಲ್ಲಿ 10ಕ್ಕೂ ಹೆಚ್ಚು ಮೀಡಿಯಾ ಕಂಪನಿಗಳು 180ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ನೀಡಲಿವೆ. ಒಟ್ಟು 8 ಕನ್‌ಸ್ಟ್ರಕ್ಷನ್‌ ವಲಯದ ಕಂಪೆನಿಗಳು 400 ಕ್ಕೂ ಹೆಚ್ಚು ಉದ್ಯೋಗಾವಕಾಶಗಳೊಂದಿಗೆ ಭಾಗವಹಿಸಲಿವೆ ಎಂದು ವಿವರಿಸಿದರು.

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ತರಬೇತಿ ಮತ್ತು ನಿಯೋಜನೆ ವಿಭಾಗ ಮುಖ್ಯಸ್ಥೆ ರಂಜಿತಾ ಆಚಾರ್ಯ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮುಖ್ಯಸ್ಥ ಪ್ರಸಾದ್‌ ಶೆಟ್ಟಿ, ಅಮಿತ್‌ ಶೆಟ್ಟಿ ಇದ್ದರು.

------------

ನೋಂದಣಿ ಮಾಡಿ

ಆಳ್ವಾಸ್‌ ಪ್ರಗತಿ 2025ರ ನೋಂದಣಿ ಮತ್ತು ಪಾಲ್ಗೊಳ್ಳುವ ಕಂಪೆನಿಗಳ ಮಾಹಿತಿ ಹಾಗೂ ವಿವರಕ್ಕಾಗಿ www.alvaspragati.com ಸಂಪರ್ಕಿಸಬಹುದು. ಹೊರ ರಾಜ್ಯದ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸುವ ಆಕಾಂಕ್ಷಿಗಳಿಗೆ ಜುಲೈ 31ರಿಂದ ಉಚಿತ ವಾಸ್ತವ್ಯ ವ್ಯವಸ್ಥೆ ಕಲ್ಪಿಸಲಾಗುವುದು. ಐಟಿಐ/ ಡಿಪ್ಲೋಮಾ ಅಭ್ಯರ್ಥಿಗಳಿಗೆ ಉಚಿತ ಬಸ್‌ ವ್ಯವಸ್ಥೆ ಮಾಡಲಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ದೂ. 9741440490, 7975223865, 9611750531 ಸಂಪರ್ಕಿಸಬಹುದು. ಐಟಿಐ, ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಮತ್ತು ಅದಕ್ಕಿಂತ ಕಡಿಮೆ ವಿದ್ಯಾರ್ಹತೆಯ ಅಭ್ಯರ್ಥಿಗಳನ್ನು ಹೊರತು ಪಡಿಸಿ, ಎಲ್ಲರಿಗೂ ನೋಂದಣಿ ಕಡ್ಡಾಯವಾಗಿದೆ ಎಂದು ವಿವೇಕ್‌ ಆಳ್ವ ತಿಳಿಸಿದರು.