ಮಂಗಳೂರು: ಮೂಡುಬಿದಿರೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದಿಂದ 16ನೇ ಆವೃತ್ತಿಯ ‘ಆಳ್ವಾಸ್‌ ಪ್ರಗತಿ-2026’ ಬೃಹತ್‌ ಉದ್ಯೋಗ ಮೇಳ ಆ.7 ಮತ್ತು 8ರಂದು ಮೂಡುಬಿದಿರೆ ವಿದ್ಯಾಗಿರಿ ಆವರಣದಲ್ಲಿ ನಡೆಯಲಿದೆ ಎಂದು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ್‌ ಆಳ್ವ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರತಿಭೆಗಳಿಗೆ ಗುಣಮಟ್ಟದ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ 2007ರಲ್ಲಿ ಆರಂಭಗೊಂಡ ಆಳ್ವಾಸ್‌ ಪ್ರಗತಿ ಉದ್ಯೋಗ ಮೇಳ ಇಂದು ದೇಶದ ಅತ್ಯಂತ ಯಶಸ್ವಿ ಬೃಹತ್‌ ಉದ್ಯೋಗ ಮೇಳಗಳಲ್ಲಿ ಒಂದಾಗಿದೆ. ಇಂದು ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳ ಅಭ್ಯರ್ಥಿಗಳಿಗೆ ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಉದ್ಯೋಗಾವಕಾಶಗಳನ್ನು ಒದಗಿಸುವ ವೇದಿಕೆಯಾಗಿದೆ ಬೆಳೆದಿದೆ ಎಂದರು.

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯ (ಸಿಎಸ್‌ಆರ್‌) ಭಾಗವಾಗಿ ಆಯೋಜಿಸಲಾಗುವ ಮೇಳ ಉದ್ಯೋಗಾಕಾಂಕ್ಷಿಗಳು ಹಾಗೂ ಭಾಗವಹಿಸುವ ಕಂಪನಿಗಳಿಗೆ ಉಚಿತವಾಗಿರುತ್ತದೆ. ಇದುವರೆಗೆ ಪ್ರತಿಷ್ಠಾನ 22 ಬೃಹತ್‌ ಉದ್ಯೋಗ ಮೇಳ ಆಯೋಜಿಸಿದೆ ಎಂದರು.

ಈ ಬಾರಿಯ ಉದ್ಯೋಗ ಮೇಳದಲ್ಲಿ 300ಕ್ಕೂ ಅಧಿಕ ಕಂಪನಿಗಳು ಭಾಗವಹಿಸುವ ನಿರೀಕ್ಷೆ ಇದೆ. ಬ್ಯಾಂಕಿಂಗ್‌ ಹಾಗೂ ಹಣಕಾಸು, ಮಾಹಿತಿ ತಂತ್ರಜ್ಞಾನ, ಉತ್ಪಾದನೆ, ಔಷಧೋದ್ಯಮ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಆತಿಥ್ಯ, ದೂರಸಂಪರ್ಕ, ಆರೋಗ್ಯ, ಮಾಧ್ಯಮ, ನಿರ್ಮಾಣ, ಎಲೆಕ್ಟ್ರಾನಿಕ್ಸ್‌, ಶಿಕ್ಷಣ ಹಾಗೂ ಎನ್‌ಜಿಒ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಮುಖ ಸಂಸ್ಥೆಗಳು ನೇಮಕಾತಿ ನಡೆಸಲಿವೆ. ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್‌, ಎಂಜಿನಿಯರಿಂಗ್‌, ಕಲಾ, ವಾಣಿಜ್ಯ, ನಿರ್ವಹಣೆ, ವಿಜ್ಞಾನ, ನರ್ಸಿಂಗ್‌, ಐಟಿಐ, ಡಿಪ್ಲೊಮಾ, ಕೌಶಲ್ಯಾಧಾರಿತ ವೃತ್ತಿಗಳು, ಪಿಯುಸಿ, ಎಸ್‌ಎಸ್‌ಎಲ್‌ಸಿ ಹಾಗೂ ಇತರ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳು ಲಭ್ಯವಾಗಲಿವೆ ಎಂದರು. ಪ್ರತಿಯೊಂದು ಆವೃತ್ತಿಯಲ್ಲೂ ಸರಾಸರಿ 250ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿವೆ. ಇಲ್ಲಿಯವರೆಗೆ 66,432 ಅಭ್ಯರ್ಥಿಗಳು ಶಾರ್ಟ್‌ಲಿಸ್ಟ್‌ಗೊಂಡು, 40,848 ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ಉದ್ಯೋಗದ ಆಫರ್‌ ದೊರಕಿದೆ ಎಂದರು.ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳು, ವಿವಿಧ ಹುದ್ದೆಗಳ ವಿವರ, ಅರ್ಹತೆ ಹಾಗೂ ವೃತ್ತಿ ಅವಕಾಶಗಳ ಕುರಿತು ಸಮಗ್ರ ಮಾಹಿತಿ ನೀಡುವ ಸಲುವಾಗಿ ಆಳ್ವಾಸ್‌ನ 100 ಮಂದಿ ತಜ್ಞರ ತಂಡ ಅವಿಭಜಿತ ದ.ಕ. ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿ ವಿಶೇಷ ಓರಿಯಂಟೇಷನ್‌ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ತಕ್ಷಣ ನೋಂದಾಯಿಸಿಕೊಂಡು ಅಗತ್ಯ ಮಾಹಿತಿ ಪಡೆದುಕೊಳ್ಳುವಂತೆ ಅವರು ಮಾಹಿತಿ ನೀಡಿದರು.

ಪ್ರತಿಷ್ಠಾನದ ಆಡಳಿತ ಟ್ರಸ್ಟಿ ವಿವೇಕ್‌ ಆಳ್ವ, ನೇಮಕಾತಿ ವಿಭಾಗ ಮುಖ್ಯಸ್ಥೆ ರಂಜಿತಾ ಆಚಾರ್ಯ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್‌ ಶೆಟ್ಟಿ ಇದ್ದರು.


ಆನ್‌ಲೈನ್‌ ನೋಂದಣಿ ಕಡ್ಡಾಯ: ಭಾಗವಹಿಸುವ ಕಂಪನಿಗಳ ವಿವರಗಳನ್ನು www.alvaspragathi.com ವೆಬ್‌ಸೈಟ್‌ನಲ್ಲಿ ನಿರಂತರವಾಗಿ ನವೀಕರಿಸಲಾಗುವುದು. ಅಭ್ಯರ್ಥಿಗಳು ಸದಾ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. ಉದ್ಯೋಗಾಕಾಂಕ್ಷಿಗಳಿಗೆ ಆನ್‌ಲೈನ್‌ ನೋಂದಣಿ ಕಡ್ಡಾಯವಾಗಿದ್ದು, ನೋಂದಣಿಯನ್ನು www.alvaspragathi.com/candidate-registration ನಲ್ಲಿ ಉಚಿತವಾಗಿ ಮಾಡಬಹುದಾಗಿದೆ.

ಆ.6ರಿಂದ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಆಗಮಿಸುವ ಅಭ್ಯರ್ಥಿಗಳಿಗೆ ಉಚಿತ ವಸತಿ ವ್ಯವಸ್ಥೆ ಮಾಡಲಾಗುವುದು. ಐಟಿಐ ಅಭ್ಯರ್ಥಿಗಳಿಗೆ ವಿಶೇಷ ಬಸ್‌ ವ್ಯವಸ್ಥೆ ಮಾಡಲಾಗುವುದು. ಅಭ್ಯರ್ಥಿಗಳು ಆ. 7ರಂದು ಬೆಳಗ್ಗೆ 8 ಗಂಟೆಗೆ ಮೂಡುಬಿದಿರೆಯ ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ಹಾಜರಿರಬೇಕು. ಸುಮಾರು 10 ಪಾಸ್‌ಪೋರ್ಟ್‌ ಗಾತ್ರದ ಭಾವಚಿತ್ರ, ನವೀಕರಿಸಿದ ಬಯೋಡೇಟಾ, ಅಂಕಪಟ್ಟಿಗಳ ದೃಢೀಕೃತ ಜೆರಾಕ್ಸ್‌ ಪ್ರತಿಗಳು, ಆನ್‌ಲೈನ್‌ ನೋಂದಣಿ ಸಂಖ್ಯೆ/ಐಡಿ ಸಂಖ್ಯೆ ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ 9741440490, 9611750531, 7975223865 ನ್ನು ಅಭ್ಯರ್ಥಿಗಳು ಸಂಪರ್ಕಿಸಬಹುದು. ಕಂಪನಿಗಳು ನೋಂದಣಿಗಾಗಿ 9731953123 ಸಂಖ್ಯೆಯನ್ನು ಸಂಪರ್ಕಿಸಬಹುದು

--