ಕಲಾರಸಿಕರ ಮನಸೂರೆಗೊಂಡ ಆಳ್ವಾಸ್ ಸಾಂಸ್ಕೃತಿಕ ವೈಭವ

| Published : Feb 11 2025, 12:45 AM IST

ಸಾರಾಂಶ

ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸುವುದರ ಜೊತೆಗೆ ಅದನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯುವ ಕೆಲಸವನ್ನು ಮಾಡುವ ಗುರುತರವಾದ ಜವಾಬ್ಧಾರಿ ನಮ್ಮೆಲ್ಲರ ಮೇಲಿದೆ ಎಂದು ಶಾಸಕ ಸ್ವರೂಪ್ ಪ್ರಕಾಶ್ ತಿಳಿಸಿದ್ದಾರೆ. ನಾಡು ಕಂಡ ಶ್ರೇಷ್ಠ ಸಾಹಿತಿಗಳು, ಕಲಾವಿದರಿಗೆ ಜನ್ಮ ಕೊಟ್ಟ ಈ ಜಿಲ್ಲೆಯಲ್ಲಿ ನಿರಂತರವಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಅವುಗಳಿಗೆ ಮತ್ತ ಉತ್ತೇಜನ ನೀಡಿ ಕಲಾ ಸಂಸ್ಕೃತಿಯನ್ನು ಉಳಿಸಬೇಕು ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸುವುದರ ಜೊತೆಗೆ ಅದನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯುವ ಕೆಲಸವನ್ನು ಮಾಡುವ ಗುರುತರವಾದ ಜವಾಬ್ಧಾರಿ ನಮ್ಮೆಲ್ಲರ ಮೇಲಿದೆ ಎಂದು ಶಾಸಕ ಸ್ವರೂಪ್ ಪ್ರಕಾಶ್ ತಿಳಿಸಿದ್ದಾರೆ.

ನಗರದ ಸರ್ಕಾರಿ ಕಲಾ ಕಾಲೇಜಿನ ಆವರಣದಲ್ಲಿ ನಡೆದ ಮೂಡುಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನ ಹಾಗೂ ಆಳ್ವಾಸ್ ನುಡಿಸಿರಿ ವಿರಾಸತ್ ಘಟಕ ಆಯೋಜಿಸಿದ್ದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಹಾಸನ ಜಿಲ್ಲೆಯು ಶಿಲ್ಪಕಲೆಗಳ ತವರೂರಾಗಿದೆ ಎಂದರು.

ಶಾಂತಲೆ ಅವರು ಕಟ್ಟಿ ಬೆಳೆಸಿದ ಕಲಾ ಸಂಸ್ಕೃತಿಯನ್ನು ಮುಂದುವರೆಸಿಕೊಂಡು ಬಂದಿರುವ ಕೀರ್ತಿ ಹಾಸನ ಜಿಲ್ಲೆಗೆ ಇದೆ. ನಾಡು ಕಂಡ ಶ್ರೇಷ್ಠ ಸಾಹಿತಿಗಳು, ಕಲಾವಿದರಿಗೆ ಜನ್ಮ ಕೊಟ್ಟ ಈ ಜಿಲ್ಲೆಯಲ್ಲಿ ನಿರಂತರವಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಅವುಗಳಿಗೆ ಮತ್ತ ಉತ್ತೇಜನ ನೀಡಿ ಕಲಾ ಸಂಸ್ಕೃತಿಯನ್ನು ಉಳಿಸಬೇಕು. ಈ ನಿಟ್ಟಿನಲ್ಲಿ ನಾಡಿನ ಮೂಲೆ ಮೂಲೆಯಲ್ಲಿ, ದೇಶ ವಿದೇಶಗಳಲ್ಲಿ ಭಾರತೀಯ ಕಲಾ ಸಂಸ್ಕೃತಿಯನ್ನು ಪಸರಿಸುತ್ತ ಕಲಾ ಪರಿಚಾರಿಕೆಯನ್ನು ಮಾಡುತ್ತಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷರಾದ ಡಾ.ಮೋಹನ್ ಆಳ್ವಾ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯವಾದುದು ಎಂದರು.

ಶೈಕ್ಷಣಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಅಪಾರ ಕೆಲಸವನ್ನು ಮಾಡುತ್ತಿರುವ ಇವರಿಗೆ ಸರ್ಕಾರದ ಮಟ್ಟದಲ್ಲಿ ಗುರುತಿಸಿ ಗೌರವಿಸುವ ಕೆಲಸವನ್ನು ಮಾಡಬೇಕು ಎಂದರು. ಇಂತಹ ಭಾರತೀಯ ಕಲೆಗಳನ್ನು ಮಕ್ಕಳಿಗೆ ತೋರಿಸುವಂತ ಹಾಗೂ ಪರಿಚಯಿಸುವ ಕೆಲಸವನ್ನು ಪೋಷಕರು ಮಾಡಿದಾಗ ಮಾತ್ರ ಈ ಕಲೆಗಳು ಸದಾ ಉಳಿಯಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಮಾತನಾಡಿ, ನಾವಿಲ್ಲಿ ಸಾಂಸ್ಕೃತಿಕ ವಿನಿಮಯಕ್ಕಾಗಿ ಹಾಗೂ ಸೌಂದರ್ಯ ಪ್ರಜ್ಞೆಯುಳ್ಳ ಪ್ರೇಕ್ಷಕ ವರ್ಗವನ್ನು ಸ್ಥಾಪಿಸಲು ಬಂದಿದ್ದೇವೆ. ಈ ರೀತಿಯ ಕಾರ್ಯಕ್ರಮಗಳ ಮೂಲಕ ನಾವು ಸೌಂದರ್ಯ ಪ್ರಜ್ಞೆಯುಳ್ಳ ಪ್ರೇಕ್ಷಕ ವರ್ಗವನ್ನು ಸ್ಥಾಪಿಸುತ್ತಿದ್ದೇವೆ ಎಂದರು. ನಮ್ಮ ದೇಶ, ಸಹಿಷ್ಣುತೆ, ಪ್ರಾಚೀನ ನಾಗರೀಕತೆ ಇರುವ ದೇಶ. ಪ್ರಾಚೀನ ಕಲೆ ಸಂಸ್ಕೃತಿ ಇರುವ ದೇಶ, ಕರ್ನಾಟಕ್, ಹಿಂದೂಸ್ತಾನಿ ಸಂಗೀತವಿದೆ. ೩೫ ಸಾವಿರಕ್ಕೂ ಹೆಚ್ಚಿನ ರಾಗಗಳಿವೆ. ಇಂತಹ ಶ್ರೀಮಂತ ಸಂಸ್ಕೃತಿಯನ್ನು ನಮ್ಮ ಮುಂದಿನ ಪೀಳಿಗೆಗೂ ನೀಡುವುದು ನಮ್ಮ ಧರ್ಮ ಎಂದರು.

ಸೂರ್ಯ ಚಂದ್ರರಿರುವವರೆಗೂ ಈ ಸಂಸ್ಕೃತಿಯನ್ನು ಉಳಿಸುವ ಹಿನ್ನೆಲೆ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಉದ್ದೇಶವಾಗಿದ್ದು, ವಿದ್ಯಾರ್ಥಿಗಳನ್ನು ಸಾಂಸ್ಕೃತಿಕವಾಗಿ ತಯಾರು ಮಾಡಿ ರಾಜ್ಯದಲ್ಲಿ ಸಾಂಸ್ಕೃತಿಕ ಮನಸ್ಸನ್ನು ಕಟ್ಟುವ ಕೆಲಸ ಮಾಡುತ್ತಿದ್ದೇವೆ ಎಂದರು. ಜನಸಂಖ್ಯೆಯಲ್ಲಿ ನಮ್ಮ ದೇಶ ಮೊದಲನೇ ಸ್ಥಾನದಲ್ಲಿದೆ. ೧೫೦೦ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳಿವೆ. ೫೦ ಸಾವಿರಕ್ಕೂ ಹೆಚ್ಚು ಕಾಲೇಜುಗಳಿವೆ. ದೇಶದಲ್ಲಿ ೫೦ ಕೋಟಿಯಷ್ಟು ಯುವ ಸಂಪತ್ತಿದೆ. ಯುವ ಸಂಪತ್ತಿನ ಸದ್ಬಳಕೆಯಾಗಬೇಕು. ನಮ್ಮ ಸಂಸ್ಕೃತಿಯನ್ನು ತಿಳಿಸಬೇಕು ಎಂದರು.ಅಪರ ಜಿಲ್ಲಾಧಿಕಾರಿ ಕೆ.ಟಿ ಶಾಂತಲಾ ಅವರು ಮಾತನಾಡಿ ಕಳೆದ ಬಾರಿ ಆಳ್ವಾಸ್ ನುಡಿಸಿರಿ ವಿರಾಸಾತ್ ಕಾರ್ಯಕ್ರಮ ಮಳೆಯ ಕಾರಣದಿಂದಾಗಿ ರದ್ದಾಗಿತ್ತು. ಆದರೆ ಇಂದು ನಮ್ಮ ಕನಸು ನನಸಾಗಿದೆ. ರಾಷ್ಟ್ರದಾದ್ಯಂತ ಹೆಸರು ಪಡೆದ ಆಳ್ವಾಸ್ ನುಡಿಸಿರಿ ವಿರಾಸಾತ್ ಕಾರ್ಯಕ್ರಮ ಹಾಸನದಲ್ಲಿ ನಡೆಯುತ್ತಿದೆ. ಕಲೆ ಸಂಸ್ಕೃತಿಯ ಕಿರೀಟವಾಗಿರುವ ಹಾಸನದಲ್ಲಿ ಆಳ್ವಾಸ್ ನುಡಿಸಿರಿ ವಿರಾಸಾತ್ ಕಾರ್ಯಕ್ರಮ ನಡೆಯುತ್ತಿರುವುದರಿಂದ ನಾವೆಲ್ಲರೂ ಉತ್ಸಾಹಕರಾಗಿದ್ದೇವೆ ಎಂದರು.ಆಶಯ ನುಡಿಯನ್ನು ನುಡಿದ ಆಳ್ವಾಸ್ ನುಡಿಸಿರಿ ವಿರಾಸಾತ್ ಹಾಸನ ಘಟಕದ ಅಧ್ಯಕ್ಷ ಎಚ್.ಬಿ.ಮದನಗೌಡ ಮಾತನಾಡಿ, ಹಾಸನದಲ್ಲಿ ಈವರೆಗೆ ೦೫ ಬಾರಿ ಆಳ್ವಾಸ್ ನುಡಿಸಿರಿ ವಿರಾಸಾತ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆದಿದ್ದು ಇದು ಖುಷಿಯ ವಿಚಾರ ಎಂದರು. ಸಾಂಸ್ಕೃತಿಕ ಸಂಘಟನೆಯನ್ನು ಯಶಸ್ವಿಯಾಗಿ ಮಾಡುತ್ತಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯನ್ನು ಶ್ಲಾಘಿಸಿದರು. ರಾಷ್ಟ್ರದಾದ್ಯಂತ ಸಾಂಸ್ಕೃತಿಕ ವೈಭವವನ್ನು ಕೊಡುತ್ತಿರುವ ಡಾ. ಮೋಹನ ಆಳ್ವ ಮತ್ತು ಅವರ ಸಂಸ್ಥೆ ಗಿನ್ನೆಸ್ ದಾಖಲೆಗೆ ಯೋಗ್ಯ ಎಂದರು. ಹಾಸನ ಸಾಂಸ್ಕೃತಿಕ ಚಿಂತನೆಗಳಿಗೆ ವೇದಿಕೆಯಾಗಬೇಕು ಅದಕ್ಕೆ ಪೂರಕವಾಗಿ ಈ ಕಾರ್ಯಕ್ರಮ ನಡೆಯುತ್ತಿರುವುದು ಸಂತೋಷದ ವಿಚಾರ ಎಂದರು.

ಕಾರ್ಯಕ್ರಮದಲ್ಲಿ ಡಾ. ಮೋಹನ ಆಳ್ವರವರನ್ನು ಹಾಸನ ಶಾಸಕರು ಮತ್ತು ವಿವಿಧ ಸಂಘ ಸಂಸ್ಥೆಗಳು ಸನ್ಮಾನಿಸಿದವು. ಹಾಸನದ ಶಾಸಕರನ್ನು ಸನ್ಮಾನಿಸಲಾಯಿತು. ಹಾಸನ ನಗರ ಸಭೆ ಅಧ್ಯಕ್ಷ ಚಂದ್ರೇಗೌಡ, ಧರ್ಮಸ್ಥಳ ಶಿಕ್ಷಣ ಸಂಸ್ಥೆ ನಿರ್ದೇಶಕ ಡಾ. ಪ್ರಸನ್ನ ನರಸಿಂಹ ರಾವ್, ಹಾಸನ ಜಿಲ್ಲಾ ರೆಡ್ ಕ್ರಾಸ್ ಇಂಟರ್‌ನ್ಯಾಷನಲ್ ಸೊಸೈಟಿ ಸಭಾಪತಿ ಹೆಚ್. ವಿ ಮೋಹನ್,ಹಾಸನದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಚ್.ಎಲ್.ಮಲ್ಲೇಶ್ ಗೌಡ, ಭಾರತೀಯ ನೃತ್ಯ ಕಲೆ ಶಾಲೆಯ ಅಂಬಳೆ ರಾಜೇಶ್ವರಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಶೈಲಜ ಉಪ್ಪಿನಕುದುರು,ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯ ನಿರ್ದೇಶಕಿ ಮಮತಾ ರಾವ್, ಆಳ್ವಾಸ್ ನುಡಿಸಿರಿ ವಿರಾಸಾತ್ ಹಾಸನ ಘಟಕದ ಕಾರ್ಯದರ್ಶಿ ಜಾವಗಲ್ ಪ್ರಸನ್ನಕುಮಾರ್ ಉಪಸ್ಥಿತರಿದ್ದರು

* ಬಾಕ್ಸ್‌: ಕಲೆ ಎಂದರೆ ಕೇಕೆ ಹಾಕುವುದಕಲ್ಲ ಮನಸ್ಸಿಗೆ ನೆಮ್ಮದಿ ನೀಡವುದು

ಹಿಂದೆ ಸಂಸ್ಕೃತಿ ಉಳಿಸುವ ಕೆಲಸವನ್ನು ಗುರುಕುಲಗಳು, ರಾಜ ವಂಶಗಳು ಮಾಡುತ್ತಿದ್ದವು. ಆದರೆ ಈಗ ಸಂಸ್ಕೃತಿ ಯನ್ನು ಉಳಿಸುವ ಕರ್ತವ್ಯ ತಂದೆ- ತಾಯಿ, ವಿದ್ಯಾಸಂಸ್ಥೆಗಳು, ಗುರುಗಳು ಮತ್ತು ವಿದ್ಯಾರ್ಥಿಗಳದ್ದಾಗಿದೆ ಎಂದರು. ಈಗ ಕಲೆ ಸಂಸ್ಕೃತಿ ಭ್ರಷ್ಟವಾಗುತ್ತಿದೆ. ನಾವೆಲ್ಲರೂ ಸಾಂಸ್ಕೃತಿಕ ಭ್ರಷ್ಟತೆಯತ್ತ ಹೆಜ್ಜೆ ಹಾಕುತ್ತಿದ್ದೇವೆ. ಕಲಾವಿದರಿಗೆ ಸಾಂಸ್ಕೃತಿಕ ಪ್ರಜ್ಞೆಯಿಲ್ಲದೇ ಮನೋರಂಜನೆಯೇ ಮುಖ್ಯವಾಗುತ್ತಿದೆ, ಇದು ಸಲ್ಲದು ಎಂದರು. ಕಲೆ ಎಂದರೆ ಕೇಕೆ ಹಾಕುವುದಕಲ್ಲ ಮನಸ್ಸಿಗೆ ನೆಮ್ಮದಿ ನೀಡುವುದು. ಇದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ಮೋಹನ್‌ ಆಳ್ವಾ ಅಭಿಪ್ರಾಯಪಟ್ಟರು.